ನವದೆಹಲಿ (ಮೇ. 22): ದೇಶದೆಲ್ಲೆಡೆ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಮುಂಚೂಣಿ ಕಾರ್ಯಕರ್ತರಾಗಿರುವ ವೈದ್ಯರು ಹೋರಾಡುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ವೈದ್ಯರನ್ನು ಕೊಲೆಗಾರರು ಎಂದು ಯೋಗ ಗುರು ಬಾಬಾ ರಾಮ್ದೇವ್ ಕರೆದಿದ್ದಾರೆ. ವಿಡಿಯೋವೊಂದರಲ್ಲಿ ಯೋಗ ಗುರು ರಾಮ್ದೇವ್ ಅವರು, ಅಲೋಪತಿ ಅಥವಾ ವೈದ್ಯಕೀಯ ವಿಜ್ಞಾನ (ಎಂಬಿಬಿಎಸ್) ಅನ್ನು ಅವಿವೇಕಿಗಳ ವಿಜ್ಞಾನ ಎಂದು ಟೀಕಿಸಿದ್ದರು. ಕೋವಿಡ್ ನಿಯಂತ್ರಿಸುವಲ್ಲಿ ಅಲೋಪತಿ ಸೋತಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ರೆಮಿಡಿಸಿವಿರ್, ಫೆವಿ ಫ್ಲೂ ಇತರೆ ಔಷಧಗಳ ಪ್ರಯೋಗಿಸಿದರೂ ಸೋಂಕಿತರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವೈದ್ಯರುಗಳು ಕೊಲೆಗಾರರು ಎಂದು ಆಪಾದಿಸಿದ್ದರು. ಈ ವಿಡಿಯೋ ಆಧಾರದ ಮೇಲೆ ಕ್ರಮಕ್ಕೆ ಮುಂದಾಗಿರುವ ಐಎಂಎ ಈಗ ಯೋಗ ಗುರುಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.
ವೈದ್ಯಕೀಯ ವಿಜ್ಞಾನಕ್ಕೆ ಧಕ್ಕೆ ಮೂಡುವ ರೀತಿ ಹೇಳಿಕೆ ನೀಡಿ, ಸಾರ್ವಜನಿಕರಿಗೆ ದಾರಿ ತಪ್ಪಿಸುವ ಕೆಲಸವನ್ನು ರಾಮ್ ದೇವ್ ಮಾಡುತ್ತಿದ್ದಾರೆ. ಈ ಹಿನ್ನಲೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ್ ವರ್ಧನ್ ಗೂ ಮನವಿ ಮಾಡಲಾಗಿದೆ. ಏಮ್ಸ್ ನಿವಾದಲ್ಲಿ ಇಂದು ವೈದ್ಯರ ಸಂಘ, ಸಫ್ಧರ್ಜಂಗ್ ಆಸ್ಪತ್ರೆಯ ಆರ್ಡಿಎ ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಸಭೆ ನಡೆಸಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ: 18-44ವರ್ಷದ ಎಲ್ಲರಿಗೂ ಕೋವಿಡ್ ಲಸಿಕೆ ಇಲ್ಲ; ಆದ್ಯತಾ ವಲಯಕ್ಕೆ ಮಾತ್ರ: ಸರ್ಕಾರದ ಸ್ಪಷ್ಟನೆ
ಆದರೆ, ಈ ಹೇಳಿಕೆಗಳನ್ನು ನಿರಾಕರಿಸಿರುವ ಪತಂಜಲಿ ಯೋಗ ಪೀಠ್ ಟ್ರಸ್ಟ್, ರಾಮದೇವ್ ವೈದ್ಯಕೀಯ ವಿಜ್ಞಾನದ ಬಗ್ಗೆ ಧಕ್ಕೆ ತರುವ ಹೇಳಿಕೆ ನೀಡಿಲ್ಲ. ಕೋವಿಡ್ ಬಿಕ್ಕಟ್ಟಿನ ಇಂತಹ ಸವಾಲಿನ ಸಂದರ್ಭದಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೇ ಸೋಂಕಿತರ ರಕ್ಷಣೆಗೆ ಕೆಲಸ ಮಾಡುತ್ತಿದ್ದಾರೆ. ಅಂತಹ ವೈದ್ಯರು ಮತ್ತು ವೈದ್ಯಕೀಯ ಸಹಾಯಕರ ಬಗ್ಗೆ ರಾಮದೇವ್ಗೆ ಅತ್ಯಂತ ಗೌರವ ಇದೆ ಎಂದು ಸಮಾಜಾಯಿಷಿ ನೀಡಿದೆ.
ಇದನ್ನು ಓದಿ: ತಾರತಮ್ಯ ಮಾಡುವ ಕೇಂದ್ರದ ನಿರೀಕ್ಷೆ ಬಿಟ್ಟು, ಬ್ಲಾಕ್ ಫಂಗಸ್ ಔಷಧ ನೇರ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಲಿ; ಎಚ್ಡಿಕೆ
ಆಧುನಿಕ ವೈದ್ಯ ಪದ್ಧತಿ ಬಗ್ಗೆ ಜನರಲ್ಲಿ ಈ ರೀತಿ ತಪ್ಪು ಕಲ್ಪನೆ ಮೂಡಿಸುತ್ತಿರುವ ರಾಮ್ದೇವ್ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಐಎಂಎ ವಾದಿಸಿದೆ. ಅಲ್ಲದೇ ರಾಮ್ ದೇವ್, ಅವರ ಈ ಹೇಳಿಕೆಯಿಂದ ದೇಶದ ಜನರು, ಬಡವರಿಗೆ ಅಪಾಯವಾಗಲಿದೆ. ಈ ಹಿನ್ನಲೆ ಅವರ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಅಡಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದೆ.
ರಾಮದೇವ್ ಕೋವಿಡ್ ಪರಿಸ್ಥಿತಿಯ ಲಾಭಾ ಪಡೆದು ಜನರಲ್ಲಿ ಭಯ ಮತ್ತು ಹತಾಶೆ ಮೂಡಿಸುತ್ತಿರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಅನುಮೋದಿತವಲ್ಲದ ಕಾನೂನು ಬಾಹಿರ ಔಷಧಗಳನ್ನು ಮಾರಾಟ ಮಾಡಬಹುದು. ಈ ಮೂಲಕ ಹಣವನ್ನು ಗಳಿಸಬಹುದು ಎಂಬ ಯೋಜನೆ ರೂಪಿಸಿದ್ದಾರೆ. ಸರಿಯಾದ ಕಲಿಕೆ ಇಲ್ಲದ ರಾಮ್ದೇವ್ ಇಂತಹ ಹೇಳಿಕೆಗಳ ವಿರುದ್ಧ ಸ್ವತಃ ವೈದ್ಯರು ಆಗಿರುವ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಸುಮೋಟೋ ಕೇಸ್ ದಾಖಲಿಸಬೇಕು. ಇಂತಹ ಹೇಳಿಕೆಗಳು ಸಮಾಜಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತದೆ ಎಂದು ಐಎಂಎ ತಿಳಿಸಿದೆ.
ರಾಮ್ ದೇವ್ ಅವರ ಹೇಳಿಕೆಯನ್ನು ಏಮ್ಸ್ನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಬಲವಾಗಿ ಖಂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ