ರಾಯಚೂರು(ಏ.28): ಕೊರೋನಾ ತಡೆಗಾಗಿ ಇಡೀ ದೇಶ ಲಾಕ್ ಡೌನ್ ಮಾಡಿ ಐದು ವಾರಗಳು ಕಳೆದಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಆದರೆ, ಕುಡುಕರು ಈಗ ಮದ್ಯಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಈಗ ಅಕ್ರಮ ಮದ್ಯ, ಕಳ್ಳಬಟ್ಟಿ, ಸೇಂದಿ ಮಾರಾಟದ ಭರಾಟೆ ಇದೆ. ಕದ್ದು ಮುಚ್ಚಿ ಅಕ್ರಮ ಚಟುವಟಿಕೆ ನಡೆಯುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ನಂತರ ಇಲ್ಲಿಯವರೆಗೂ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ಬಂದ್ ಮಾಡಲಾಗಿದೆ. ಮದ್ಯ ಬಂದ್ ಆಗಿದ್ದರಿಂದ ಕುಡುಕರು ಈಗ ಹೊಸ ವರಸೆ ಆರಂಭಿಸಿದ್ದಾರೆ. ಹಮಾಲಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು ಸೇರಿದಂತೆ ಕಠಿಣ ಕೆಲಸ ಮಾಡುವ ಕಾರ್ಮಿಕರು ನಿತ್ಯ ದುಡಿಯುತ್ತಿದ್ದಾರೆ.
ಸಂಜೆಯ ವೇಳೆ ಒಂದಿಷ್ಟು ಎಣ್ಣೆ ಹಾಕಿಕೊಂಡರೆ ಮೈ ಕೈ ನೋವು ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ನಿತ್ಯ ಕುಡಿಯುವ ಚಟವಿರುವ ನಮಗೆ ಕುಡಿಯದಿದ್ದರೆ ನಿದ್ದೆ ಬರಲ್ಲ. ಅದಕ್ಕಾಗಿ ಹೇಗಾದರೂ ಎಣ್ಣೆ ಹೊಡೆಯುತ್ತೇವೆ ಎನ್ನುತ್ತಾರೆ ಕುಡುಕರು.
ಕುಡುಕರಿಗಾಗಿ ಈಗ ಅಕ್ರಮವಾಗಿ ಎಣ್ಣೆ ಮಾರಾಟ ಮಾಡುವ ದಂಧೆ ಆರಂಭವಾಗಿದೆ. ಒಂದಕ್ಕೆ ಮೂರು ಪಟ್ಟು ದರ ನೀಡಿ ಎಣ್ಣೆ ಖರೀದಿಸುತ್ತಿದ್ದಾರೆ. ಅಲ್ಲಲ್ಲಿ ಎಣ್ಣೆಯ ಕಳ್ಳದಂಧೆ ನಡೆಯುತ್ತಿದೆ. ಇದು ನಗರ ಪ್ರದೇಶದಲ್ಲಾದರೆ ಗ್ರಾಮೀಣ ಪ್ರದೇಶದಲ್ಲಿ ಈಗ ಸೇಂದಿ ಹಾಗು ಕಳ್ಳಬಟ್ಟಿ ಸಾರಾಯಿ ತಯಾರಾಗುತ್ತಿದೆ. ರಾಯಚೂರು ತಾಲೂಕಿನಲ್ಲಿ ಸಿಎಚ್ ಪೌಡರ್ ನಿಂದ ತಯಾರಾಗುವ ಸೇಂದಿಯು ಮಾರಾಟವಾಗುತ್ತಿದೆ. ಎಲ್ಲಿ ನೋಡಿದರೂ ಈಗ ಅಕ್ರಮ ಚಟುವಟಿಕೆಯದೆ ಸುದ್ದಿ ಇದೆ.
ಅಕ್ರಮವಾಗಿ ಮಾರಾಟವಾಗುವ ಕಳ್ಳಬಟ್ಟಿ ಸಾರಾಯಿ, ಸೇಂದಿ ಬಾಟಲ್ಗಳು ಮಾರಾಟವಾಗುವುದನ್ನು ತಡೆಯಲು ಅಬಕಾರಿ ಹಾಗು ಪೊಲೀಸರು ಈಗ ನಿರಂತರ ದಾಳಿ ನಡೆಸುತ್ತಿದ್ದಾರೆ. ಆದರೂ ಅಕ್ರಮ ಚಟುವಟಿಕೆಗಳು ನಿಂತಿಲ್ಲ. ಲಾಕ್ ಡೌನ್ ಆದ ನಂತರ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
19 ಮದ್ಯ ಮಾರಾಟ ಪ್ರಕರಣದಲ್ಲಿ 675 ಲೀಟರ್, 16 ಸೇಂದಿ ಮಾರಾಟ ಪ್ರಕರಣದಲ್ಲಿ 350 ಲೀಟರ್ ವಶ ಪಡಿಸಿಕೊಳ್ಳಲಾಗಿದೆ. 47 ಕಳ್ಳಬಟ್ಟಿ ಸಾರಾಯಿ ಪ್ರಕರಣದಲ್ಲಿ 2,332 ಲೀಟರ್ ಬೆಲ್ಲದ ಕೊಳೆ ಹಾಗೂ ಕಳ್ಳಬಟ್ಟಿ ಸರಾಯಿಯನ್ನು ವಶಪಡಿಸಿಕೊಂಡಿದ್ದಾರೆ. 11 ಬಿಎಲ್ಸಿ ಮಾರಾಟ ಪ್ರಕರಣ ದಾಖಲಾಗುವೆ. ಹೀಗೆ ಒಂದು ತಿಂಗಳಲ್ಲಿ 93 ಪ್ರಕರಣಗಳು ದಾಖಲಾಗಿ 35 ಜನ ಆರೋಪಿಗಳನ್ನು ಬಂಧಿಸಲಾಗಿದೆ, ಹಾಗು 43 ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.
ಇನ್ನೊಂದು ಕಡೆ ಪೊಲೀಸರು ಸಹ ದಾಳಿ ನಡೆಸುತ್ತಿದ್ದು 69 ಪ್ರಕರಣಗಳು ದಾಖಲಾಗಿವೆ. 129 ಆರೋಪಿಗಳನ್ನು ಬಂಧಿಸಲಾಗಿದೆ. 9,07,555 ಮೊತ್ತದ ಅಕ್ರಮ ಮದ್ಯ, ಕಳ್ಳಬಟ್ಟಿ ಹಾಗೂ ಸೇಂದಿ ವಶ ಪಡಿಸಿಕೊಂಡಿದ್ದಾರೆ. ಅಕ್ರಮ ತಡೆಯಲು ಅಧಿಕಾರಿಗಳು ಯತ್ನಿಸುತ್ತಿದ್ದರೂ ಅಕ್ರಮವಾಗಿ ಮಾರಾಟ ಮಾಡುವವರನ್ನು ತಡೆಯಲಾಗುತ್ತಿಲ್ಲ. ಅಧಿಕಾರಿಗಳು ರಂಗೋಲಿ ಕೆಳಗೆ ತೂರಿದರೆ ಮಾರಾಟಗಾರರು ಚಾಪೆ ಕೆಳಗೆ ತೂರುತ್ತಿದ್ದಾರೆ.
ಇದನ್ನೂ ಓದಿ :
ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಒಲವು; ಆದರೆ, ಪ್ರಧಾನಿ ಸೂಚನೆಯೇ ಅಂತಿಮ ಎಂದ ಅಬಕಾರಿ ಸಚಿವ
ರಾಯಚೂರು ಜಿಲ್ಲೆಯಲ್ಲಿ ಕೆಲವು ಕಡೆ ಪ್ರಭಾವಿ ಜನಪ್ರತಿನಿಧಿಗಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಜನ ದುಡಿಮೆ ಇಲ್ಲ, ವಲಸೆ ಹೋದವರು ವಾಪಸ್ಸು ಬಂದಿದ್ದಾರೆ. ಈ ಸಂದರ್ಭದಲ್ಲಿ ಜನರು ಎಣ್ಣೆ ಹುಡುಕಾಟದಲ್ಲಿದ್ದಾರೆ. ಈ ಅಕ್ರಮ ತಡೆಯಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾಮಾನ್ಯ ಜನರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ