Corona: ಮಾರ್ಚ್ ಮಧ್ಯಭಾಗದಲ್ಲಿ ಮೂರನೇ ಅಲೆ ಕೊನೆಯಾಗುವ ಸಾಧ್ಯತೆಯಿದೆ: ಮನೀಂದ್ರ ಅಗರ್‌ವಾಲ್

Covid-19: ಇದು ಉತ್ತುಂಗಕ್ಕೇರಿ ನಿಧಾನಗೊಳ್ಳಲು ಇನ್ನೊಂದು ತಿಂಗಳ ಸಮಯ ಬೇಕು. ಮಾರ್ಚ್ ಮಧ್ಯದ ವೇಳೆಗೆ ಭಾರತದಲ್ಲಿ ಸಾಂಕ್ರಾಮಿಕದ ಮೂರನೇ ಅಲೆಯು ಕಡಿಮೆಯಾಗುವ ಸಾಧ್ಯತೆ ಇದೆ.

ಪ್ರಾಧ್ಯಾಪಕ ಮನೀಂದ್ರ ಅಗರ್‌ವಾಲ್

ಪ್ರಾಧ್ಯಾಪಕ ಮನೀಂದ್ರ ಅಗರ್‌ವಾಲ್

  • Share this:
ಪ್ರಸ್ತುತ ಸಾಂಕ್ರಾಮಿಕವು(Epidemic) ನಿಧಾನವಾಗಿ ಉತ್ತುಂಗದ ಸ್ಥಿತಿ ತಲುಪುತ್ತಿದೆ. ಈ ಕುರಿತು ಐಐಟಿ ಕಾನ್ಪುರದ (IIT Kanpur) ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾದ ಮನೀಂದ್ರ ಅಗರ್‌ವಾಲ್ (Manitra Agarwal) ಜನವರಿ ಮಧ್ಯದಲ್ಲಿ ಮುಂಬೈ ಹಾಗೂ ದೆಹಲಿಯಲ್ಲಿ ಸೋಂಕು ಉತ್ತುಂಗಕ್ಕೇರುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ ಭಾರತದಲ್ಲಿ ದಿನವೊಂದಕ್ಕೆ 8 ಲಕ್ಷ ಪ್ರಕರಣಗಳು ದಾಖಲಾಗುವ ಸಂಭವವಿದೆ ಎಂದಾಗಿದೆ ಹಾಗೂ ತಾವು ನೀಡುವ ಮಾದರಿಯು ಇತರ ಸಂಶೋಧಕರು,(Researchers) ವಿಜ್ಞಾನಿಗಳಿಗಿಂತ ಹೇಗೆ ನಿಖರವಾಗಿದೆ ಎಂಬದನ್ನೂ ತಿಳಿಸಿದ್ದಾರೆ. ಪ್ರಸ್ತುತ ಮನೀಂದ್ರ ಅಗರವಾಲ್ ಅವರೊಂದಿಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಮಾತುಕತೆ ನಡೆಸಿದ್ದು, ಸಂವಾದದ ವಿವರವಾದ ಮಾಹಿತಿ ಇಲ್ಲಿದೆ.

ಅಮಿತಾಭ್ ಸಿನ್ಹಾ: ಮೂರನೇ ಅಲೆಯ ಪ್ರಖರತೆ ಹೇಗಿರಬಹುದು? ಇದು ಎಷ್ಟು ಸಮಯದವರೆಗೆ ಅಧಿಪತ್ಯ ನಡೆಸಬಹುದು ಎಂದು ನೀವು ಭಾವಿಸುತ್ತೀರಿ?

ಮುಂಬೈನಲ್ಲಿ ಈ ತಿಂಗಳ ಮಧ್ಯಭಾಗದಲ್ಲಿ ಉತ್ತುಂಗಕ್ಕೇರಬಹುದು. ಈ ಸಮಯ ದೂರದಲ್ಲಿಲ್ಲ. ದೆಹಲಿಯಲ್ಲೂ ಇದೇ ಪರಿಸ್ಥಿತಿಯನ್ನು ನಾವು ನೋಡಬಹುದು. ಪ್ರಸ್ತುತ ಲೆಕ್ಕಾಚಾರದ ಪ್ರಕಾರ ಇದು ಪ್ರಾಥಮಿಕವಾಗಿದೆ. ಇದಕ್ಕೆ ಕಾರಣ ಭಾರತ ಸಾಕಷ್ಟು ಡೇಟಾ ಹೊಂದಿಲ್ಲ ಎಂಬುದಾಗಿದೆ. ಪ್ಯಾರಾಮೀಟರ್ ಮೌಲ್ಯಗಳು ವೇಗವಾಗಿ ಬದಲಾಗುತ್ತಿರುವುದರಿಂದ ಪ್ರಸ್ತುತ ಉತ್ತುಂಗವನ್ನು ಅಳೆಯಲಾಗುತ್ತಿಲ್ಲ. ಅಂದಾಜಿನಂತೆ ದಿನಕ್ಕೆ 4 - 8 ಲಕ್ಷ ಪ್ರಕರಣಗಳು ದಾಖಲಾಗುವ ಅಂದಾಜಿದೆ. ದೆಹಲಿ ಹಾಗೂ ಮುಂಬೈನಲ್ಲಿ ಏರಿಕೆಯಾದಂತೆ ಪ್ರಕರಣಗಳು ಅಷ್ಟೇ ವೇಗದಲ್ಲಿ ಇಳಿಯುತ್ತವೆ. ಇನ್ನು ಸಂಪೂರ್ಣವಾಗಿ ಭಾರತದಲ್ಲಿ ಅಲೆಯು ಈಗಷ್ಟೇ ಏರಿಕೆಯಾಗುತ್ತಿದೆ. ಇದು ಉತ್ತುಂಗಕ್ಕೇರಿ ನಿಧಾನಗೊಳ್ಳಲು ಇನ್ನೊಂದು ತಿಂಗಳ ಸಮಯ ಬೇಕು. ಮಾರ್ಚ್ ಮಧ್ಯದ ವೇಳೆಗೆ ಭಾರತದಲ್ಲಿ ಸಾಂಕ್ರಾಮಿಕದ ಮೂರನೇ ಅಲೆಯು ಕಡಿಮೆಯಾಗುವ ಸಾಧ್ಯತೆ ಇದೆ.

ಅಮಿತಾಭ್ ಸಿನ್ಹಾ: ಸಾಂಕ್ರಾಮಿಕ ರೋಗದ ಹರಡುವಿಕೆಯಲ್ಲಿ ಹೆಚ್ಚಿನ ಪ್ರಮಾಣದ ಯಾದೃಚ್ಛಿಕತೆಯಿದೆ ಎಂದು ಪರಿಗಣಿಸಿ ಕಂಪ್ಯೂಟರ್ ಮಾದರಿಯ ಭವಿಷ್ಯವಾಣಿಗಳು ಎಷ್ಟು ವಿಶ್ವಾಸಾರ್ಹವಾಗಿವೆ?

ಪ್ರಕೃತಿಯಿಂದ ಸಾಂಕ್ರಾಮಿಕ ರೋಗಗಳು ಅತ್ಯಂತ ಯಾದೃಚ್ಛಿಕ ವಿದ್ಯಮಾನಗಳಾಗಿವೆ ಎಂಬುದು ನಿಜ, ಆದರೆ ಕೆಲವು ಮೂಲಭೂತ ತತ್ವಗಳಿವೆ. ಸೋಂಕಿತ ವ್ಯಕ್ತಿ ಮತ್ತು ಸೋಂಕಿಲ್ಲದ ವ್ಯಕ್ತಿ ಸಂಪರ್ಕಕ್ಕೆ ಬಂದಾಗ ಸೋಂಕು ವರ್ಗಾವಣೆಯಾಗುತ್ತದೆ. ಹೆಚ್ಚು ಸೋಂಕಿತರೊಂದಿಗೆ ಇನ್ನಷ್ಟು ಸೋಂಕಿತರು ಸೃಷ್ಟಿಯಾಗುತ್ತಾರೆ. ಇದನ್ನು ಆಧರಿಸಿ ಮಾದರಿಯನ್ನು ರಚಿಸಲಾಗುತ್ತದೆ. ಮೂಲ ಮಾದರಿಯನ್ನು ಸುಮಾರು 100 ವರ್ಷಗಳ ಹಿಂದೆ ರಚಿಸಲಾಗಿದೆ. ಇದನ್ನು SIR ಮಾದರಿ ಎಂದು ಕರೆಯಲಾಗುತ್ತದೆ ಮತ್ತು ಹಲವಾರು ಸಾಂಕ್ರಾಮಿಕ ರೋಗಗಳ ಪಥವನ್ನು ಊಹಿಸಲು ಇದು ತುಂಬಾ ಉಪಯುಕ್ತವಾಗಿದೆ.

ಇದನ್ನೂ ಓದಿ: Coronavirus: ಕೊರೊನಾ ಸೋಂಕಿತರಿಗೆ ಲಭ್ಯವಿರುವ ಔಷಧಗಳ ಪಟ್ಟಿ ಇಲ್ಲಿದೆ..

ದೈನಂದಿನ ಸಮಯದ ಸರಣಿಯನ್ನು ಆಧರಿಸಿ ನಮ್ಮ ಮಾದರಿಗೆ ಅಗತ್ಯವಾಗಿರುವ ಪ್ಯಾರಾಮೀಟರ್ ಮೌಲ್ಯಗಳನ್ನು ಅಂದಾಜು ಮಾಡಲು ಸಾಧ್ಯವಾಗುತ್ತದೆ. ನಾವು ಅಂದಾಜು ಮಾಡುವಾಗ ಪ್ಯಾರಾಮೀಟರ್ ಮೌಲ್ಯಗಳು ಬದಲಾಗಬಾರದು ಎಂದರ್ಥ. ಅವು ಬದಲಾಗುತ್ತಿದ್ದರೆ, ನಮ್ಮ ಅಂದಾಜುಗಳು ತಪ್ಪಾಗುತ್ತವೆ. ನಿಯತಾಂಕಗಳನ್ನು ಸ್ಥಿರಗೊಳಿಸಲು ಮಾದರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಪ್ರತಿ ಬಾರಿ ನಿಯತಾಂಕಗಳನ್ನು ಬದಲಾಯಿಸಿದಾಗ, ಮರು ಲೆಕ್ಕಾಚಾರ ಮಾಡಬೇಕು.

ಅಮಿತಾಭ್ ಸಿನ್ಹಾ: ರಾಜ್ಯ ಸರ್ಕಾರಗಳು ಹೊರತರುತ್ತಿರುವ ಅಂಕಿ ಅಂಶಗಳ ಗುಣಮಟ್ಟ ಎಷ್ಟು ಉತ್ತಮವಾಗಿದೆ?

ಭಾರತದ ದತ್ತಾಂಶದ ಗುಣಮಟ್ಟವು ಕೆಲವು ಮುಂದುವರಿದ ದೇಶಗಳು ಸೇರಿದಂತೆ ಇತರ ಹಲವು ದೇಶಗಳಿಗಿಂತ ಉತ್ತಮವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಕೆಲವೊಮ್ಮೆ ನಮಗೆ ನಾವೇ ವಿಶ್ವಾಸವನ್ನು ವ್ಯಕ್ತಪಡಿಸುವುದಿಲ್ಲ, ಆದರೆ ನಮ್ಮಲ್ಲಿರುವ ಯಂತ್ರೋಪಕರಣಗಳು ಈ ಸಾಧನೆ ನಡೆಸಲು ಸಾಧ್ಯವಾಗುತ್ತದೆ ಎಂಬುದಾಗಿ ನಾನು ಆಲೋಚಿಸಿದ್ದೇನೆ. ಆದ್ದರಿಂದಲೇ ಇತರ ದೇಶಗಳಿಗಿಂತ ನಮ್ಮ ದೇಶವು ಅಂಕಿ ಅಂಶಗಳ ಗುಣಮಟ್ಟದಲ್ಲಿ ಮುಂದಿದೆ.

ಅನಿಲ್ ಸಾಯಿ: ಮೂರನೇ ಅಲೆಯಲ್ಲಿ ಭಾರತದ ಪಥವು ಬಹುಶಃ ದಕ್ಷಿಣ ಆಫ್ರಿಕಾವನ್ನು ಪ್ರತಿಬಿಂಬಿಸುತ್ತದೆ ಎಂಬುದು ಆರಂಭಿಕ ಊಹೆಯಾಗಿತ್ತು. ಆದರೆ ಈ ಲೆಕ್ಕಾಚಾರ ತಲೆಕೆಳಗಾದಂತಿದೆ. ಇದಕ್ಕೆ ಕಾರಣವೇನಿರಬಹುದು?

ಆರಂಭದಲ್ಲಿ ಯಾವುದೇ ಭಾರತೀಯ ಅಂಕಿ ಅಂಶಗಳು ಇಲ್ಲದಿರುವುದರಿಂದ ದಕ್ಷಿಣ ಆಫ್ರಿಕಾದ ಡೇಟಾದಲ್ಲಿ ನಮ್ಮ ಇದೇ ಮಾದರಿಯನ್ನು ಚಲಾಯಿಸಲು ನಾವು ಯೋಚಿಸಿದ್ದೇವೆ. ಏಕೆಂದರೆ ಅದು ಜನಸಂಖ್ಯೆ, ವಯಸ್ಸು ಮತ್ತು ನೈಸರ್ಗಿಕ ಪ್ರತಿರಕ್ಷೆಯ ಮಟ್ಟದಲ್ಲಿ ಭಾರತಕ್ಕೆ ಹತ್ತಿರದಲ್ಲಿದೆ. ಆದರೆ, ಭಾರತದಲ್ಲಿ ರೋಗನಿರೋಧಕತೆಯ ನಷ್ಟ ವಿಶೇಷವಾಗಿ ನೈಸರ್ಗಿಕ ರೋಗನಿರೋಧಕ ಸಾಮರ್ಥ್ಯವು ದಕ್ಷಿಣ ಆಫ್ರಿಕಾಕ್ಕಿಂತ ಹೆಚ್ಚು ನಷ್ಟವಾಗಿದೆ. ಇದಕ್ಕೆ ಕಾರಣ ಏನು ಎಂಬುದು ನನಗೂ ತಿಳಿದಿಲ್ಲ. ಎರಡನೇ ಅಲೆಯು ಬಹುತೇಕ ಪಾಠವನ್ನು ನಮಗೆ ಕಲಿಸಿದೆ. ಇದರಿಂದ ನಾವು ಮುಂದಿನ ರೂಪಾಂತರಗಳ ದಾಳಿಗಳಿಗೆ ಹೇಗೆ ಸಿದ್ಧರಾಗಿರಬೇಕೆಂಬ ಪಾಠವನ್ನು ಕಲಿತಿದ್ದೇವೆ. ರೋಗನಿರೋಧಕ ನಷ್ಟ ಹೊಂದಿದ್ದರೂ ಒಂದು ಆಶಾದಾಯಕ ಬೆಳವಣಿಗೆ ಎಂದರೆ ಲಸಿಕೆ ಪಡೆದ ಅಥವಾ ರೋಗನಿರೋಧಕ ವ್ಯಕ್ತಿಯು ಸೋಂಕಿಗೆ ಒಳಗಾದಾಗ, ಸೋಂಕಿನ ತೀವ್ರತೆಯು ತುಂಬಾ ಕಡಿಮೆಯಿರುತ್ತದೆ ಎಂಬುದು ಗಮನಕ್ಕೆ ಬಂದಿದೆ.

ಅಸಾದ್ ರೆಹಮಾನ್: ಲಾಕ್‌ಡೌನ್‌ಗಳು ಎಷ್ಟು ಪರಿಣಾಮಕಾರಿ?

ಮೊದಲ ಅಲೆಯ ಸಮಯದಲ್ಲಿ, ಅತ್ಯಂತ ಕಟ್ಟುನಿಟ್ಟಾದ ಲಾಕ್‌ಡೌನ್ ಸಾಂಕ್ರಾಮಿಕ ಹರಡುವಿಕೆಯ ಪ್ರಮಾಣವನ್ನು 2 ಪಟ್ಟು ಕಡಿಮೆಗೊಳಿಸಿತು. ಎರಡನೇ ಅಲೆಯ ಸಮಯದಲ್ಲಿ, ವಿವಿಧ ರಾಜ್ಯಗಳು ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡವು. ಸೌಮ್ಯ ಅಥವಾ ಮಧ್ಯಮ ಪದ್ಧತಿಯ ಲಾಕ್‌ಡೌನ್ ಅನ್ನು ಸಮರ್ಪಕವಾಗಿ ವಿಧಿಸಿದ ರಾಜ್ಯಗಳು ಸಹ ಹರಡುವಿಕೆ ಕಡಿಮೆ ಮಾಡಲು ಸಮರ್ಥವಾಗಿವೆ. ಹಾಗಾಗಿ ಲಾಕ್‌ಡೌನ್ ಸಹಕಾರಿಯಾಗಿದೆ. ಕಟ್ಟುನಿಟ್ಟಾದ ಲಾಕ್‌ಡೌನ್ ಹೆಚ್ಚು ಸಹಕಾರವನ್ನುಂಟು ಮಾಡಿದ್ದರೂ ಹೆಚ್ಚಿನ ಜನರು ಆರ್ಥಿಕ ಸಮಸ್ಯೆಗೆ ಒಳಪಡುವ ತೊಂದರೆಯೂ ಇದೆ.

ಕೋವಿಡ್- ಪ್ರೇರಿತ ಸಾವು ನೋವುಗಳಿಗಿಂತ ಹೆಚ್ಚಾಗಿ ಆರ್ಥಿಕ ತೊಂದರೆಗೊಳಗಾಗಿ ಸಾವು ನೋವಿಗೊಳಗಾದವರ ಸಮಸ್ಯೆಗಳನ್ನೂ ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜನವರಿಯ ಮಧ್ಯಭಾಗದಲ್ಲಿ ಉತ್ತುಂಗಕ್ಕೇರಲಿರುವ ನಗರಗಳಲ್ಲಿ ಲಾಕ್‌ಡೌನ್ ವಿಧಿಸುವ ಅಗತ್ಯವಿಲ್ಲ. ತಮಿಳುನಾಡಿನಂತಹ ಬೆಳವಣಿಗೆಯ ಹಾದಿಯಲ್ಲಿರುವ ನಗರಗಳಲ್ಲಿ ಲಾಕ್‌ಡೌನ್ ಆರ್ಥಿಕ ಸಂಕಷ್ಟ ತಂದೊಡ್ಡಬಹುದು. ಏಕೆಂದರೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಈ ಬಾರಿ ಕಳೆದ ಎರಡು ಬಾರಿಗಿಂತ ಹೆಚ್ಚಿಲ್ಲ.

ರಿತಿಕಾ ಚೋಪ್ರಾ: ಸೂತ್ರ ಮಾದರಿಯು ಯಾವಾಗಲೂ ನಿಖರವಾದ ಮುನ್ಸೂಚನೆಗಳನ್ನು ನೀಡುವುದಿಲ್ಲ. ಅದನ್ನು ಸುಧಾರಿಸಲು ತಂಡ ಕೆಲಸ ಮಾಡುತ್ತಿದೆಯೇ?

ನಾವು ಮಾದರಿಯನ್ನು ಸುಧಾರಿಸಲು ಉತ್ಸುಕರಾಗಿದ್ದೇವೆ. ಮಾದರಿಯ ನ್ಯೂನತೆಯೆಂದರೆ ಪ್ಯಾರಾಮೀಟರ್ ಮೌಲ್ಯಗಳು ಬದಲಾಗುತ್ತಿರುವಾಗ, ಅವುಗಳ ಅಂತಿಮ ಮೌಲ್ಯ ಏನೆಂದು ಊಹಿಸಲು ಯಾವುದೇ ಮಾರ್ಗವಿಲ್ಲ. ಹೆಚ್ಚು ಸುಧಾರಿತ ವಿಶ್ಲೇಷಣೆಯೊಂದಿಗೆ ಆ ರೀತಿಯ ಮುನ್ಸೂಚನೆಯ ಸಾಧ್ಯತೆ ಇದ್ದಾಗ, ಇದನ್ನು ನಿರ್ವಹಿಸಲು ಯಾರೊಬ್ಬರ ಸಹಾಯವನ್ನು ತೆಗೆದುಕೊಳ್ಳಲು ನಾವು ಖಂಡಿತವಾಗಿಯೂ ಇಷ್ಟಪಡುತ್ತೇವೆ.

ಅಮಿತಾಭ್ ಸಿನ್ಹಾ: ನೀವು ಅನುಸರಿಸುತ್ತಿರುವ ಮಾದರಿಯಲ್ಲಿ ಯಾವುದೇ ಜೀವಶಾಸ್ತ್ರದ ಅಂಶಗಳಿಲ್ಲ ಎಂಬ ಟೀಕೆಗಳಿವೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಆರೋಪ ಸರಿಯಾಗಿಯೇ ಇದೆ. ನಾವು ಅನುಸರಿಸುವ ಮಾದರಿಯಲ್ಲಿ ಜೀವಶಾಸ್ತ್ರವಿಲ್ಲ. ಆದರೆ ಮಾಡೆಲರ್ ಮಾಡೆಲ್ ರಚಿಸುವಾಗ ಜೀವಶಾಸ್ತ್ರ ಹಾಗೂ ತತ್ವಶಾಸ್ತ್ರದ ಅಂಶಗಳಿಗೆ ಪ್ರಾಧಾನ್ಯತೆ ನೀಡಬೇಕು ಎಂಬುದನ್ನು ನಾನು ಭಾವಿಸುವುದಿಲ್ಲ. ನೀವು ನಿಖರವಾಗಿ ಅಂಕಿ ಅಂಶಗಳನ್ನು ದಾಖಲಿಸಲು ಸಮರ್ಥರೇ ಎಂಬುದನ್ನು ಕಂಡುಕೊಳ್ಳುವುದಾಗಿದೆ. ನಮ್ಮ ಮಾದರಿ 100% ಸರಿಯಾಗಿರದೇ ಇರಬಹುದು. ಆದರೆ ಅಸ್ತಿತ್ವದಲ್ಲಿರುವ ಇತರ ಮಾಡೆಲ್‌ಗಳಿಗಿಂತ ನಮ್ಮ ಮಾಡೆಲ್ ಉತ್ತಮವಾಗಿದೆ ಎಂದೇ ನಾನು ಇದನ್ನು ಸಲ್ಲಿಸುತ್ತಿದ್ದೇನೆ. ನಾನು ಇದನ್ನು ಖಾತ್ರಿಪಡಿಸುತ್ತೇನೆ.

ಶುಭಜಿತ್ ರಾಯ್: ನೀವು ಕಳೆದ ಒಂದೂವರೆ ವರ್ಷದಿಂದ ಈ ಗಣಿತದ ಮಾದರಿಗಳನ್ನು ನಡೆಸುತ್ತಿದ್ದೀರಿ. ಈ ಕುರಿತು ಸರಕಾರದ ಜತೆ ಮಾತುಕತೆ ನಡೆದಿದೆಯೇ?

ಕೇಂದ್ರ ಸರ್ಕಾರ ಮತ್ತು ಹಲವಾರು ರಾಜ್ಯ ಸರ್ಕಾರಗಳಿಂದ ಪ್ರಸ್ತುತಿಗಳನ್ನು ಮಾಡಲು ವಿನಂತಿಸಲಾಗಿದೆ. ಇದು ಕೇಂದ್ರ ಸರ್ಕಾರವಾಗಿರುವುದರಿಂದ, ಕೋವಿಡ್ ಟಾಸ್ಕ್ ಫೋರ್ಸ್ ಹಲವಾರು ಸಂದರ್ಭಗಳಲ್ಲಿ ನಮ್ಮ ತಂಡದಿಂದ ಮಾಹಿತಿ ಪಡೆದುಕೊಂಡಿದೆ. ಯುಪಿ, ದೆಹಲಿ, ಮಹಾರಾಷ್ಟ್ರ ಮತ್ತು ಇತರೆ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಸಾಂದರ್ಭಿಕವಾಗಿ ತಂಡದ ಸಂಶೋಧನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಕೇಳಿಕೊಂಡಿವೆ.

ಸೋಹಿನಿ ಘೋಷ್: ಗಣಿತಶಾಸ್ತ್ರದ ಮಾದರಿಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಅಂಶಗಳನ್ನು ಹೇಗೆ ಪರಿಗಣಿಸಲಾಗುತ್ತದೆ?

ನಾವು ಸರಾಸರಿ ಕ್ಷೇತ್ರ ಮಾದರಿಯ ಉತ್ತಮ ಪ್ರಯೋಜನವೆಂದರೆ ಅದು ಎಲ್ಲವನ್ನೂ ಸರಾಸರಿಗೊಳಿಸುತ್ತದೆ. ಉದಾಹರಣೆಗೆ, ಸಂತಾನೋತ್ಪತ್ತಿ ದರವು ತುಂಬಾ ವಿರಳವಾದ ಪ್ರದೇಶಕ್ಕೆ ಹೋಲಿಸಿದರೆ ಹೆಚ್ಚಿರುವ ಪ್ರದೇಶದಲ್ಲಿ ವಿಭಿನ್ನವಾಗಿರುತ್ತದೆ. ಆದರೆ ನೀವು ಸರಾಸರಿ-ಕ್ಷೇತ್ರ ವಿಧಾನ ತೆಗೆದುಕೊಂಡಾಗ, ನೀವು ಸಂಪೂರ್ಣ ಸರಾಸರಿಯನ್ನು ತೆಗೆದುಕೊಳ್ಳುತ್ತೀರಿ. ಡೆಲ್ಟಾ, ಓಮಿಕ್ರಾನ್ ಮತ್ತು ಬಹುಶಃ ಇತರ ಕೆಲವು ರೂಪಾಂತರಗಳು ಸಹ ಸುತ್ತಲಿವೆ. ಆದ್ದರಿಂದ, ಸರಾಸರಿ-ಕ್ಷೇತ್ರದ ಮಾದರಿಯು ಪುನಃ ಉತ್ಪಾದಿಸುವ ದರದ ಒಂದೇ ಸರಾಸರಿ ಮೌಲ್ಯವನ್ನು ಮಾತ್ರ ಲೆಕ್ಕಾಚಾರ ಮಾಡುತ್ತದೆ.

ಇದನ್ನೂ ಓದಿ: Alert: ಬೂಸ್ಟರ್ ಡೋಸ್ ಹೆಸರಿನಲ್ಲಿ ಕರೆ ಮಾಡಿ, OTP ಪಡೆದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ!

ಅಮಿತಾಭ್ ಸಿನ್ಹಾ: ಯುಪಿ ಸರಕಾರವು ಕೋವಿಡ್ ಸಾವಿನ ಪ್ರಕರಣಗಳನ್ನು ಮುಚ್ಚಿಹಾಕಿವೆ ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿನ ಸರಕಾರವು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿರುವುದನ್ನು ನೀವು ನಿಜವಾಗಿಯೂ ಪ್ರಶಂಸಿಸಿದ್ದೀರಿ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಯುಪಿ ಸರಕಾರವು ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಿದ್ದರೂ, ಅಲ್ಲೂ ಅನೇಕ ಸಾವುಗಳು ಸಂಭವಿಸಿವೆ ಎಂಬುದರಲ್ಲಿ ಸಂದೇಹವಿಲ್ಲ. ನಾನು ಯುಪಿಯ, ಪ್ರಯಾಗ್‌ರಾಜ್‌ನವನು. ರಾಜ್ಯವು ಸಾಕಷ್ಟು ಬಡವರನ್ನು ಹೊಂದಿದೆ ಹಾಗೂ ದೇಹ ದಾನ ಮಾಡುವ ಸಂಪನ್ಮೂಲಗಳು ಅಲ್ಲಿಲ್ಲ. ಈ ಕಾರಣದಿಂದಲೇ ಅದೆಷ್ಟೋ ಶವಗಳನ್ನು ಗಂಗೆಯಲ್ಲಿ ತೇಲಿಬಿಡುತ್ತಾರೆ. ಇದೆಲ್ಲಾ ಕೋವಿಡ್‌ನಿಂದ ಮೃತಗೊಂಡ ದೇಹಗಳಲ್ಲ ಎಂಬುದನ್ನು ಪರಿಗಣಿಸಬೇಕು. ಕರುಣಾಜನಕ ಪರಿಸ್ಥಿತಿಯಲ್ಲಿರುವ ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಯುಪಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬೇಕು. ಈ ಸಂದರ್ಭದಲ್ಲಿ ಸಂಪೂರ್ಣ ಅನಾಹುತ ಎದುರಿಸುವ ನಿರೀಕ್ಷೆಯಿತ್ತು. ಆದರೆ ಹಾಗಾಗದಂತೆ ನಿರ್ವಹಿಸಿರುವುದು ಯುಪಿ ಸರಕಾರದ ಮೇಲುಗೈಯಾಗಿದೆ. ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸರಕಾರವು ಸಮರ್ಥವಾಗಿ ನಿಭಾಯಿಸಿದೆ.
Published by:vanithasanjevani vanithasanjevani
First published: