ಮಾನವೀಯತೆ ಇದ್ದಾಗ ಮಾತ್ರ ಮನುಷ್ಯನೆನಿಸಿಕೊಳ್ಳಲು ಸಾಧ್ಯ ಅಲ್ಲವೇ? ಕೋವಿಡ್ ಮಹಾಮಾರಿ ನಮಗೆ ಎಲ್ಲವನ್ನು ತೋರಿಸಿಕೊಡುತ್ತಿದೆ. ಒಂದೆಡೆ ಕೋವಿಡ್ ಸಾಂಕ್ರಾಮಿಕವನ್ನೇ ಅಸ್ತ್ರವನ್ನಾಗಿಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುವವರನ್ನು ಕಂಡು, ಅಯ್ಯೋ ಈ ಜಗತ್ತಿನಲ್ಲಿ ಮಾನವೀಯ ತೆಯ ಅಸ್ಥಿತ್ವವೇ ನಶಿಸಿಹೋಯಿತೆ ಎಂಬ ಪ್ರಶ್ನೆ ಎದ್ದರೂ, ಇದೇ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲವನ್ನು ಕಳೆದುಕೊಂಡವರ, ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿರುವವರ ಸಹಾಯಕ್ಕೆ ಬರುವ ಬಹಳಷ್ಟು ಮಂದಿಯನ್ನು ಕಂಡಾಗ, ಇಲ್ಲ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬ ಉತ್ತರ ತಾನಾಗಿಯೇ ಸಿಗುತ್ತದೆ.
ಕೋರೋನಾದಿಂದ ನರಳುತ್ತಿರುವವರ ಸಹಾಯಕ್ಕೆ ತಮ್ಮ ಜೀವದ ಹಂಗು ತೊರೆದು ಧಾವಿಸಿದವರೂ ಇದ್ದಾರೆ. ಮಾನವೀಯತೆ ಇನ್ನೂ ಉಳಿದಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಈಗ ನಮ್ಮೆಲ್ಲರ ಜೀವನವನ್ನು ನರಕ ಸದೃಶ್ಯಗೊಳಿಸಿರುವ ಕೋವಿಡ್ ಮಹಾ ಮಾರಿಯ ಅತ್ಯಂತ ದೊಡ್ಡ ಫಲಿತಾಂಶವೆಂದರೆ , ಅನಾಥ ಮಕ್ಕಳು. ಹೌದು, ಈ ರೋಗ ಸಾವಿರಾರು ಮಕ್ಕಳ ಮೇಲೆ ಹೆತ್ತವರ ಅಥವಾ ಪೋಷಕರ ನೆರಳಿಲ್ಲದಂತೆ ಮಾಡಿದೆ. ಕೋರೋನಾ ಅವರ ಪೋಷಕರನ್ನು ಕಿತ್ತುಕೊಂಡ ಬಳಿಕ, ಆ ಮಕ್ಕಳು ಭವಿಷ್ಯದ ಕಲ್ಪನೆಯನ್ನೂ ಮಾಡಲಿಕ್ಕಾಗದೆ ಅಕ್ಷರಶಃ ಬೀದಿಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ, ನಮ್ಮ ನಿಮ್ಮೆಲ್ಲರ ನಡುವೆಯೇ ಬದುಕುತ್ತಿರುವ ಜಯ್ ಶರ್ಮಾ ಎಂಬವರು ಮಾಡಿರುವ ಪುಣ್ಯ ಕಾರ್ಯವೊಂದನ್ನು ಶ್ಲಾಫಿಸದೇ ಇರಲು ಸಾಧ್ಯವೇ ಇಲ್ಲ. ಅದೇನು ಅಂತೀರಾ? ಜಯ್ ಶರ್ಮಾ ಕೋವಿಡ್‍ನಲ್ಲಿ ಪೋಷಕರನ್ನು ಕಳೆದುಕೊಂಡಿರುವ ಅನಾಥ ಮಕ್ಕಳ ಒಂದು ಗುಂಪನ್ನು ದತ್ತು ತೆಗೆದುಕೊಳ್ಳಲು ಹೊರಟಿದ್ದಾರೆ.
ಜಯ್ ಶರ್ಮಾ ಜೋಯ್(ಜಸ್ಟ್ ಓಪನ್ ಯುವರ್‌ಸೆಲ್ಫ್) ಎಂಬ ಎನ್‍ಜಿಒ ಒಂದರ ಸಂಸ್ಥಾಪಕ. ಅವರು ಈ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ನಿಟ್ಟಿನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಈಗಾಗಲೇ 20 ಮಕ್ಕಳನ್ನು ದತ್ತು ತೆಗೆದುಕೊಂಡಿರುವುದಾಗಿ ಅವರು ತಮ್ಮ ಫೇಸ್‍ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಆ ಎಲ್ಲಾ ಮಕ್ಕಳ ಆರೋಗ್ಯ , ಶಿಕ್ಷಣ ಮತ್ತು ಇತರ ಅಗತ್ಯಗಳ ಜವಾಬ್ಧಾರಿ ಜಯ್ ಶರ್ಮಾ ಅವರ ಸಂಸ್ಥೆಯದ್ದಾಗಿರುತ್ತದೆ.
ಈಗಾಗಲೇ 20 ಮಕ್ಕಳನ್ನು ದತ್ತು ಪಡೆದಿರುವ ಅವರು, ಮುಂದಿನ ವಾರ ಆ ಸಂಖ್ಯೆಯನ್ನು ಐವತ್ತಕ್ಕೆ ಏರಿಸುವ ಗುರಿ ಹೊಂದಿದ್ದಾರೆ. ಸುಮಾರು ನೂರು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಆಶಯ ಅವರದ್ದು. ತಮ್ಮ ತಂಡ , ಪೋಷಕರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಮಕ್ಕಳ ಹುಡುಕಾಟಕ್ಕಾಗಿ ಗ್ರಾಮ ಮತ್ತು ಗ್ರಾಮ ಪ್ರಧಾನ್‍ಗಳನ್ನು ತಲುಪುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಜಯ್ ಶರ್ಮಾ ಹೇಳಿದ್ದಾರೆ.
ಅವರ ಎನ್‍ಜಿಒ ಜೋಯ್, ಕೋವಿಡ್ ಸಾಂಕ್ರಾಮಿಕದ ಆರಂಭಿಕ ಹಂತದಿಂದಲೂ, ಉಚಿತ ಆಕ್ಸಿಜನ್ ಸಿಲಿಂಡರ್ ವಿತರಣೆ, ಕೋವಿಡ್ ಮೆಡಿಕಲ್ ಕಿಟ್‍ಗಳು, ಸ್ಯಾನಿಟೈಸೇಜನ್ ಕಿಟ್‍ಗಳು ಮತ್ತು ಇತರ ವೈದ್ಯಕೀಯ ಸಾಧನಗಳ ವಿತರಣೆಯನ್ನು ಮಾಡುತ್ತಲೇ ಬಂದಿದೆ. ಇಂತಹ ಮನುಷ್ಯರನ್ನು ನೋಡಿದಾಗ, ಇನ್ನೂ ಜಗತ್ತಿನಲ್ಲಿ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ ಅಲ್ಲವೇ?. ಜಯ್ ಶರ್ಮಾ ಅವರ ಈ ಮಾನವೀಯ ನಡೆಗೆ, ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘನೆಗಳ ಸುರಿಮಳೆಯಾಗುತ್ತಿದೆ. ಅವರು ಅದಕ್ಕೆ ಅರ್ಹರು ಕೂಡ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ