HOME » NEWS » Coronavirus-latest-news » HUMAN DISTRACTION SECRETE HIDE IN THE HAIR RH

ಕೇಶದೊಳಗೆ ಅಡಗಿರಬಲ್ಲದೆ ಕ್ಲೇಶದ ರಹಸ್ಯ?

ಇಂಗ್ಲೆಂಡಿನ ಖ್ಯಾತ ಪ್ರಜೆಗಳನೇಕರು ಸ್ವಯಂಪ್ರೇರಿತರಾಗಿ ಈ ಅಧ್ಯಯನಕ್ಕೆ ಅಗತ್ಯವಿರುವ ಮೂರು ಸೆಂ.ಮೀ.ಗಳಷ್ಟು ಕೂದಲೆಳೆಗಳನ್ನು ಕೊಡಲು ಮುಂದಾಗಿದ್ದಾರೆ. ಈ ಕೂದಲೆಗಳನ್ನು ಸೂಕ್ಷ್ಮಾತಿಸೂಕ್ಷದರ್ಶಿ ಯಂತ್ರಗಳಡಿಯಲ್ಲಿ ಪರೀಕ್ಷಿಸಿ ಅವುಗಳಲ್ಲಿ ಸಂಗ್ರಹವಾಗಿರುವ ಕಾರ್ಟಿಸೊಲ್ ಪ್ರಮಾಣದ ಮಟ್ಟಗಳನ್ನು ಕಂಡುಕೊಳ್ಳಲಾಗುತ್ತದೆ.

HR Ramesh | news18-kannada
Updated:April 25, 2020, 1:52 PM IST
ಕೇಶದೊಳಗೆ ಅಡಗಿರಬಲ್ಲದೆ ಕ್ಲೇಶದ ರಹಸ್ಯ?
ಡಾ. ಅ.ಶ್ರೀಧರ.
  • Share this:
ಈ ಸಮಯದಲ್ಲಿ ಲೋಕವೆಲ್ಲಾ ಕೋವಿಡ್ -19 ಬಗ್ಗೆಯೇ ಮಾತಾಡುತ್ತಿರುವುದು, ಮುಳುಗಿರುವುದು ಮತ್ತು ಭಯಪಡುತ್ತಿರುವುದು. ಪ್ರತಿಯೊಬ್ಬ ವ್ಯಕ್ತಿಯ ಮನೋಲೋಕವೂ ಸಹ ಇಂತಹದ್ದೇ ವಿಷಯಗಳನ್ನು ತುಂಬಿಸಿಕೊಂಡು ತಲೆ ಭಾರವಾಗಿ ಸಿಡಿದು ಹೋಗುವಷ್ಟು ಒತ್ತಡಕ್ಕೆ ಸಿಲುಕಿಗೊಂಡಿರುವುದು ಗೋಚರಿಸುತ್ತಿರುವ ಸಂಗತಿ.

ಹೀಗೆ ಮನಸ್ಸು ಮತ್ತು ದೇಹದೊಂದಿಗೆ ಬೆರತಿರುವ ಒತ್ತಡದ ಶಕ್ತಿ ಎಷ್ಟರ ಮಟ್ಟಿಗೆ ಹಾನಿ ಉಂಟುಮಾಡುತ್ತಿದೆ ಎನ್ನುವ ಪ್ರಶ್ನೆ ಇಂಗ್ಲೆಂಡಿನ ವಿಶ್ವವಿದ್ಯಾಲಯ ಒಂದರ ಮನೋವಿಜ್ಞಾನಿಗೆ ಬಂದಿದ್ದು, ಅದರ ಬಗ್ಗೆಯೇ ಸಂಶೋಧನೆಯೊಂದನ್ನು ಪ್ರಾರಂಭಿಸಿದ್ದಾರೆ. ಅವರ ಪ್ರಕಾರ ಮನುಷ್ಯರು ಒತ್ತಡಕ್ಕೆ ಒಳಗಾಗುವುದು ತೀರಾ ಸಹಜವಾಗಿದ್ದು, ಅದು ದೇಹ ಮತ್ತು ಮನಸ್ಸಿನ ಮೇಲೆ ನಾನಾ ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಬೀರುವುದು ಬಲ್ಲ ಸಂಗತಿ. ದೇಹದ ರಕ್ತದ ಸಂಚಲನ, ಉಸಿರಾಟ, ಪಚನಶಕ್ತಿ ಮತ್ತು ಇತರ ದೈಹಿಕ ಕ್ರಿಯೆಗಳ ಗತಿಯನ್ನು ಬದಲಾಯಿಸುವುದರ ಮೂಲಕ ರೋಗರುಜಿನಗಳಿಗೆ ಕಾರಣವಾಗುವುದೂ ಹೌದು. ಇದೇ ರೀತಿಯಲ್ಲಿ ಮಾನಸಿಕ ಶಕ್ತಿಗಳನ್ನು ಕುಗ್ಗಿಸಿ ಮನೋವ್ಯಾಕುಲತೆಗಳಿಗೂ ಕಾರಣವಾಗಿರುತ್ತದೆ. ಈ ನಮೂನೆಯ ಕ್ರಿಯೆಗಳು ಒತ್ತಡಗಳಿಂದಲೇ ಆಗುವುದನ್ನು ದೇಹದ ಕೆಲವೊಂದು ಗ್ರಂಥಿಗಳೂ ಕೂಡ ಸೂಚಿಸುತ್ತವೆ ಎನ್ನುತ್ತಾರೆ ವೈದ್ಯವಿಜ್ಞಾನಿಗಳು.

ಅದರಲ್ಲಿಯೂ ಕಾರ್ಟಿಸೊಲ್ ಎನ್ನುವಂತಹ ಗ್ರಂಥಿಯ ಸ್ರವಿಸುವಿಕೆಗೂ ಒತ್ತಡಕ್ಕೂ ನಿಕಟ ಸಂಬಂಧವಿರುವುದು ಈಗಾಗಲೇ ತಿಳಿದಿರುವ ವೈದ್ಯ ಸಂಗತಿ. ಈ ಸನ್ನಿವೇಶದಲ್ಲಿ ಅಂದರೆ ಕೋವಿಡ್-19 ವೈರಾಣುವಿನ ಕಾರಣದಿಂದ ವಿಶ್ವದ ಬಹುತೇಕ ರಾಷ್ಟ್ರಗಳು ವಿಧಿಸಿರುವ ನಿಯಮಗಳು ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗಳ ರೀತಿಯನ್ನೇ ಬದಲಾಯಿಸಿರುವುದರಿಂದ ನಾನಾ ವಿಧದ ಹೊಂದಾಣಿಕೆಯ ಸಮಸ್ಯೆಗಳು ಎದುರಾಗಿವೆ. ವೃತ್ತಿ, ಉದ್ಯೋಗದ ಸಮಸ್ಯೆಗಳು, ನಿರುದ್ಯೋಗ, ಹಸಿವು, ಪರಸ್ಪರ ಅಂತರ, ಮನೆಯಿಂದ ಹೊರಬಾರದಂತೆ ವಿಧಿಸಿರುವ ಕಟ್ಟಾಜ್ಞೆಗಳು- ಕೆಟ್ಟಾಜ್ಞೆ ಮುಂತಾದ ಹೊಸ ನಿಯಮಗಳು, ಇದರಿಂದಾಗಿ ಕಲಿಯುವುದು ಕಲಿಸುವುದರ ಪರಿಯು ಬದಲಾಗುತ್ತಿದ್ದು, ಹೊಸ ಹೊಂದಾಣಿಕೆಯ ಸಮಸ್ಯೆಗಳನ್ನು ಹುಟ್ಟಿಹಾಕುತ್ತಿವೆ. ಮಕ್ಕಳು, ವಯಸ್ಕರು, ಹಿರಿಯರು, ಹೀಗೆ ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ವಿಧದ ಸಮಸ್ಯೆಯು ವ್ಯಕ್ತಿಯ ಮನಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹೀಗೆ ಬೀರುತ್ತಿರುವ ಪರಿಣಾಮಗಳ ಪ್ರಮಾಣವನ್ನು ಮಾಪಿಸುವ ಪ್ರಯತ್ನವೇ ಇಂಗ್ಲೆಂಡಿನ ನಾಟಿಂಗ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಯತ್ನ.

ಮನುಷ್ಯರು ಒತ್ತಡಗಳನ್ನು ಅನುಭವಿಸುವುದು, ಯಶಸ್ವಿಯಾಗಿ ಪರಿಹಾರ ಕಂಡುಕೊಳ್ಳುವುದು ಮನುಷ್ಯ ಬದುಕಿನುದ್ದಕ್ಕೂ ನಡೆದು ಬಂದಂತಹ ವಿಧಿಯೇ ಆಗಿದ್ದರೂ ಈ ಸಮಯದಲ್ಲಿ ಕಾಣಿಸಿಕೊಂಡಿರುವಂತಹ ಒತ್ತಡದ ಸ್ಥಿತಿಯು ದೇಹ ಮತ್ತು ಮನಸ್ಸೆರಡು ರೋಗದ ಮುನ್ನೆಚ್ಚರಿಕೆ ದೃಷ್ಟಿಯಿಂದ ಆಗಿರುವುದೇ ಹೆಚ್ಚು.

ದಿನದುದ್ದಕ್ಕೂ (ಬಲವಂತದಿಂದ) ಮನೆಯಲ್ಲಿ ಇರುವುದು, ಕುಟುಂಬದ ಸದಸ್ಯರ ಅಸಹಾಯಕ ಸ್ಥಿತಿಗಳು, ಆವೇಶ, ಆಕ್ರೋಶ, ಮನೆಯಿಂದಲೇ ವೃತ್ತಿ ನೆರವೇರಿಸುವಾಗ ಎದುರಾಗುವ ವಿನೂತನ ಸಮಸ್ಯೆಗಳು, ಮತ್ತು ಹೊರಗಡೆ ಕಾಣಿಸಿಕೊಳ್ಳಬಾರದೆಂಬ ನಿರ್ಬಂಧಗಳ ಕಾರಣಗಳಿಂದ ದೇಹದ ಚಲನವಲನಗಳು ಸರಾಗವಾಗಿ ಮತ್ತು ನಿರಾಳವಾಗಿ ಆಗದಿರುವುದರಿಂದ ಉಂಟಾಗುವಂತಹ ಒತ್ತಡಗಳು, ಇನ್ನು ಹೊರಗಡೆ ಬಂದಾಗ ದೇಹಾಂತರವನ್ನು ಸತತವಾಗಿ ಕಾಪಡಿಕೊಳ್ಳುವಂತಹ ಹೊಸ ಪ್ರವೃತ್ತಿಗಳು ಹೊಂದಾಣಿಕೆಯ ಮೇಲೆ ಒತ್ತಡ ಹೇರುತ್ತವೆ. ಈ ಸ್ಥಿತಿಗಳಲ್ಲಿ ದೇಹ ಮತ್ತು ಮನಸ್ಸಿಗೆ ನೇರವಾಗಿ ಉಂಟಾಗುವಂತಹ ಸಮಸ್ಯೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವಿರತವಾಗಿ ಹರಿದು ಬರುವ ಸುದ್ಧಿ, ಮಾಹಿತಿಗಳೆಲ್ಲವು ವೈರಾಣುವಿನ ವ್ಯಾಪಕತೆಗೆ ಸಂಬಂಧಿಸಿದ್ದೇ ಆಗುವುದರಿಂದ ವ್ಯಕ್ತಿಯ ಚಿಂತನಾ ಕ್ರಮಗಳಲ್ಲಿಯೂ ಅಸಹಾಯಕತೆ ಮತ್ತು ಹತಾಶೆಯನ್ನು ಹೆಚ್ಚಿಸುವಂತಹ ನಡೆನುಡಿಗಳು ವ್ಯಕ್ತಗೊಳ್ಳುತ್ತವೆ. ಇದಲ್ಲದೆಯೇ ರಾಜಕೀಯ ನಾಯಕತ್ವದ ಕೊರತೆಗಳು, ವೈದ್ಯವಿಜ್ಞಾನದ ಎಚ್ಚರಿಕೆಯ ನುಡಿನಡೆಗಳೆಲ್ಲವು ತೀರ ಹೊಸ ರೀತಿಯ ಪ್ರಭಾವಗಳಾಗಿರುವುದರಿಂದ ಭಿನ್ನ ಮಾದರಿಯ ಒತ್ತಡದ ಸ್ಥಿತಿಗಳನ್ನು ಉಂಟುಮಾಡುವಂತಹದ್ದೇ ಆಗಿರುವುದು. ಈ ಒತ್ತಡಗಳಿಗೂ ಹಳೆಯ, ಪರಿಚಿತ ಮಾದರಿಯ ಒತ್ತಡಗಳ ಆಂತರಿಕ ರೂಪಕ್ಕೂ ಅಂತರವಿರುತ್ತದೆ ಎನ್ನುವ ಅಂದಾಜು ಸಂಶೋಧಕರದ್ದು, ಹೀಗಾಗಿ ಇದೊಂದು ಹೊಸ ಸ್ವರೂಪದ ಒತ್ತಡದ ಸ್ಥಿತಿಯಾಗಿರುವುದರಿಂದ ಕೊದಲೆಳೆಗಳ ತುದಿಯಲ್ಲಿರುವ ಕಾರ್ಟಿಸೊಲ್ ಪ್ರಮಾಣದ ಏರುವಿಕೆಯ ಮೂಲಕ ತಿಳಿದುಕೊಳ್ಳಬಹುದೆಂಬ ನಂಬಿಕೆಯಿಂದ ಈ ಪ್ರಯೋಗವನ್ನು ಕೈಗೊಳ್ಳಲಾಗುತ್ತಿದೆ.

ಸಮಸ್ಯೆಗಳು ಎದುರಾದಾಗ ಮನೋದೈಹಿಕ ಒತ್ತಡಗಳು ಕಾಣಸಿಕೊಳ್ಳುವುದು ಸಹಜ. ಇದು ಸಹಜವೆನ್ನುವುದಕ್ಕೆ ಕಾರಣ ಜೀವಿಯಲ್ಲಿರುವ ಜೀವ ರಕ್ಷಣೆಯ ಉದ್ದೇಶ. ಹೀಗಾಗಿ ಕಷ್ಟ ಅಥವಾ ಅಪಾಯದಿಂದ ಪಾರಾಗುವ ಜೀವ ಸಹಜ ಪ್ರವೃತ್ತಿ ಇದಾಗಿರುವುದು. ಒಂದು ದೃಷ್ಟಿಯಲ್ಲಿ ಒತ್ತಡದ ಸ್ಥಿತಿಯು ಹೊಸದೊಂದು ಬಲವನ್ನು ಮೂಡಿಸುತ್ತದೆ. ಈ ಬಲವು ತಕ್ಷಣದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ಆಗಿರುತ್ತದೆ. ಈ ಪ್ರಯತ್ನದ ಅವಧಿಯಲ್ಲಿ ದೇಹದೊಳಗಿನ ಕಾರ್ಯರೀತಿಯೂ ಚುರುಕುಗೊಂಡಿದ್ದು “ಕಾದಾಡು ಅಥವಾ ಕಾಲ್ಕಿತ್ತು( ಫೈಟ್ ಆರ್ ಫ್ಲೈಟ್) ಎನ್ನುವ ಮಂತ್ರವನ್ನು ಅನುಸರಿಸುತ್ತದೆ. ಆ ಸಮಯದಲ್ಲಿ ದೇಹದ ಗ್ರಂಥಿಗಳ ಸ್ರವಿಕೆಯಲ್ಲಿಯೂ ಏರಿಳಿತಗಳು ಉಂಟಾಗುತ್ತವೆ ಎನ್ನುವುದನ್ನು ವೈಜ್ಞಾನಿಕ ಅಧ್ಯಯನಗಳು ತಿಳಿಸಿಕೊಟ್ಟಿವೆ. ಇದರಾಧರದ ಮೇರೆಗೆ ಸದ್ಯದಲ್ಲಿ ನಮ್ಮೆಲ್ಲರಿಗೂ ಪೀಡುಗುಗಾಗಿರುವ ಕೊರೋನಾ-19 ವೈರಾಣುವಿನ ಹೊಡೆತದ ಪರಿಣಾಮವು ಕೂದಲೆಳೆಯಲ್ಲಿಯೂ ವ್ಯಕ್ತಗೊಂಡಿರುವುದು ಎನ್ನುವಂತಹ ಊಹೆಯನ್ನಿರಿಸಿಕೊಂಡು ಸಂಶೋಧನೆಯೊಂದು ಆರಂಭವಾಗಿದೆ.

ಇಂಗ್ಲೆಂಡಿನ ಖ್ಯಾತ ಪ್ರಜೆಗಳನೇಕರು ಸ್ವಯಂಪ್ರೇರಿತರಾಗಿ ಈ ಅಧ್ಯಯನಕ್ಕೆ ಅಗತ್ಯವಿರುವ ಮೂರು ಸೆಂ.ಮೀ.ಗಳಷ್ಟು ಕೂದಲೆಳೆಗಳನ್ನು ಕೊಡಲು ಮುಂದಾಗಿದ್ದಾರೆ. ಈ ಕೂದಲೆಗಳನ್ನು ಸೂಕ್ಷ್ಮಾತಿಸೂಕ್ಷದರ್ಶಿ ಯಂತ್ರಗಳಡಿಯಲ್ಲಿ ಪರೀಕ್ಷಿಸಿ ಅವುಗಳಲ್ಲಿ ಸಂಗ್ರಹವಾಗಿರುವ ಕಾರ್ಟಿಸೊಲ್ ಪ್ರಮಾಣದ ಮಟ್ಟಗಳನ್ನು ಕಂಡುಕೊಳ್ಳಲಾಗುತ್ತದೆ. ಈ ಪ್ರಯೋಗದ ಮೊದಲ ಹಂತದಲ್ಲಿ ಕೊದಲೆಳೆಗಳು ಮತ್ತು ಅದೇ ಸಮಯದಲ್ಲಿ ಇರುವಂತಹ ಮಾನಸಿಕ ಸ್ಥಿತಿಗತಿಗಳನ್ನು ಸಂಗ್ರಹಿಸಿಟ್ಟುಕೊಂಡು ಹನ್ನೆರಡು ವಾರಗಳ ನಂತರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು.ಹೀಗೆ, ಪ್ರಯೋಗ ಆರಂಭದ ಸ್ಥಿತಿಯಲ್ಲಿರುವ ಕಾರ್ಟಿಸಾಲ್ ಪ್ರಮಾಣವನ್ನು 12 ವಾರಗಳ ನಂತರದಲ್ಲಿ ಸಂಗ್ರಹಿಸುವ ಕಾರ್ಟಿಸಾಲ್ ಮಾದರಿಗಳೊಂದಿಗೆ ಹೋಲಿಸಿ ವ್ಯಾಖ್ಯಾನಿಸಲಾಗುತ್ತದೆ.ಈ ಹನ್ನೆರಡು ವಾರಗಳಲ್ಲಿ ಮೂಡಬಲ್ಲ ಒತ್ತಡಗಳು ಕೋವಿಡ್-19ರ ಕಾಲಘಟ್ಟದಲ್ಲಿ ಜಾರಿಗೆ ಬಂದಂತಹ ಸಾಮಾಜಿಕ ನಿರ್ಬಂಧಗಳು ಹಾಗೂ ವೈಯಕ್ತಿಕ ಮಟ್ಟದಲ್ಲಿ ಮೂಡುವ ಭಾವುಕ, ಚಿಂತೆಗಳಿಗೆ ಸಂಬಂಧಿಸಿದ ಸ್ಥಿತಿಗಳಿಂದಲೇ ಆಗಿರುವುದು ಎನ್ನುವಂತಹ ತೀರ್ಮಾನಕ್ಕೆ ಬರಬಹುದು ಎನ್ನುವ ಪ್ರಾಗಲ್ಪನೆ ಪ್ರಯೋಗ ನಡೆಸುವವರಾದ್ದಾಗಿದೆ. ಇನ್ನು ಈ ಅಧ್ಯಯನವು ಹೊರತರುವ ಫಲಿತಾಂಶಗಳ ಮೂಲಕ ಇಂತಹ ಮನೋಶಾರೀರಿಕ ಅಸಹಾಯಕ ಪರಿಸ್ಥಿತಿಯಲ್ಲಿ ವ್ಯಕ್ತಿಯ ಮಾನಸಿಕ, ದೈಹಿಕ ಸಮಸ್ಯೆಗಳ ತೀವ್ರತೆಯ ಬಗ್ಗೆ ಉತ್ತಮ ಮಾಹಿತಿಗಳು ಸಿಗಬಲ್ಲದು. ಹೀಗಿದ್ದಾಗ್ಯೂ ಈ ಸಂಶೋಧನೆಯು ಅಂತಹ ಹೊಸ ಬೆಳಕನ್ನು ಚಲ್ಲದು ಎನ್ನುವ ಟೀಕೆಯೂ ಇದೆ.

ಇದನ್ನು ಓದಿ: ಜನಪ್ರತಿನಿಧಿಗಳೇ ನಿಮ್ಮ ಹೊಣೆಗಾರಿಕೆ ಪ್ರರ್ದಶಿಸುವ ಸೂಕ್ತ ಅವಕಾಶ ನಿಮ್ಮೆದುರಿಗಿದೆ…

ಮನುಷ್ಯರು ಒತ್ತಡಕ್ಕೆ ಒಳಗಾದಾಗ ಕೊದಲು ಉದುರುವುದು, ನೆರೆಯುವುದು, ಮಂದವಾಗುವುದು ತಿಳಿದ ವಿಷಯವೇ ಅಲ್ಲವೆ? ಎಂದು ಪ್ರಶ್ನಿಸುವವರೂ ಇದ್ದಾರೆ. ಇನ್ನೊಂದು ದೃಷ್ಟಿಯಲ್ಲಿ ನೋಡಿದಾಗ ಜೀವನದ ರಹಸ್ಯವನ್ನು ತಿಳಿಯುವುದಕ್ಕೋ, ಮೋಕ್ಷಕ್ಕಾಗಿಯೂ ತಪಸ್ಸಿಗೆ ಕುಳಿತವರು ನೀರು, ಆಹಾರಗಳನ್ನು ತೊರೆದು, ಜಟಾಧಾರಿಗಳಾಗಿ ನಿರ್ಲಿಪ್ತರಾಗಿ ಇರುವುದೂ ಕೂಡ ಒತ್ತಡದ ತತ್ವಗಳಿಗೆ ಹೊಸ ಮಾಹಿತಿಯನ್ನು ಒದಗಿಸಬಲ್ಲದೋ ಏನೋ ಎನ್ನುವವರೂ ಇದ್ದಾರೆ.

ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್​ ಮಾಡಿ http://www.bruhanmati.com/
Youtube Video
First published: April 24, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories