ಕೊರೋನಾ ಸಮಯದಲ್ಲಿ ತೆರಿಗೆ ಹೆಚ್ಚಳ - ಜನರ ಗಾಯದ ಮೇಲೆ ಬರೆ ಎಳೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

2018-19ನೆಯ ಸಾಲಿನಲ್ಲಿ 72 ಕೋಟಿ ರೂಪಾಯಿ ಸಂಗ್ರಹವಾಗಬೇಕಿತ್ತು. ಮಾರ್ಚ್ ಮೊದಲ ವಾರದವರೆಗೆ 55 ಕೋಟಿ‌‌ ರೂಪಾಯಿ ತೆರಿಗೆ ಹಣ ಸಂಗ್ರಹವಾಗಿದೆ. ಕೊರೋನಾ ಹಾವಳಿಗೂ ಮೊದಲು ಜನರು ಸಹಜವಾಗಿ ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಆದರೆ ಈಗ ಸಂಕೀರ್ಣ ಸ್ಥಿತಿಯಿದೆ. ದುಡಿಮೆಯಿಲ್ಲದೆ ದುಡಿಯುವ ಕೈಗಳು ಕಂಗೆಟ್ಟಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ(ಮೇ.23): ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ದೇಶವೆ ಲಾಕ್‌ಡೌನ್ ಆಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ವಾಣಿಜ್ಯೋದ್ಯಮಿಗಳು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಜನಸಾಮಾನ್ಯರು ಕೊಂಚ ಮಟ್ಟಿಗೆ ನೆಮ್ಮದಿಯ‌ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗಷ್ಟೇ ಲಾಕ್‌ಡೌನ್‌ನಿಂದ ನಿಟ್ಟುಸಿರು ಬಿಟ್ಟಿದ್ದ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜನರಿಗೆ‌ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದೆ.

ಹೌದು, ಕೊರೋನಾ ಹೆಮ್ಮಾರಿ ಮಾಡಿರುವ ಗಾಯದ ಮೇಲೆ ಪಾಲಿಕೆ ಆರದ ಬರೆ ಎಳೆದಿದೆ. ಸದ್ಯ ಪಾಲಿಕೆ ಎಳೆದ ಬರದಿಂದ ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಆಸ್ತಿ ತೆರಿಗೆ ಹೆಚ್ಚಿಸುವ ಮೂಲಕ ಲಾಕ್‌ಡೌನ್​​ನಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಜನರ ಜೇಬಿಗೆ ಬರಸಿಡಿಲಾಗಿ ಅಪ್ಪಳಿಸಿದೆ.

ಅವಳಿ ನಗರದಲ್ಲಿ ವಸತಿ ಕಟ್ಟಡಗಳಿಗೆ ಶೇ.20, ವಾಣಿಜ್ಯ ಕಟ್ಟಡಗಳಿಗೆ ಶೇ.30, ವಾಸೇತರ ಹಾಗೂ ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ.25 ಮತ್ತು ಎಲ್ಲಾ ಸ್ವರೂಪದ ಖುಲ್ಲಾ ಜಾಗೆಗಳಿಗೆ ಶೇ.30ರಷ್ಟು ಆಸ್ತಿ ಕರ ಹೆಚ್ಚಿಸಿದೆ. ಕಳೆದ ಮೂರು ವರ್ಷಗಳಿಂದ ಆಸ್ತಿ ತೆರಿಗೆ ಪರಿಷ್ಕರಣೆ ಆಗಿರಲಿಲ್ಲ. 2017ರ ಬಳಿಕ ಇದೇ ಮೊದಲ ಬಾರಿಗೆ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗಿದೆ.

ಸರ್ಕಾರದ ನಿಯಮದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಬೇಕು. ಹೀಗಾಗಿ ತೆರಿಗೆ ಹೆಚ್ಚಿಸಿರುವುದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದವರಿಗೆ ಆಸ್ತಿ ತೆರಿಗೆ ಹೆಚ್ಚಳ ಹೊರೆಯಾಗಿ ಪರಿಣಮಿಸಿದೆ. ತೆರಿಗೆ ಏರಿಕೆಯ ಮೂಲಕ ಮಹಾನಗರ ಪಾಲಿಕೆ ಹೆಚ್ಚುವರಿಯಾಗಿ 8 ರಿಂದ 12  ಕೋಟಿ ರೂಪಾಯಿ ಸಂಗ್ರಹ ಮಾಡುವ ಗುರಿ ಹೊಂದಿದೆ.

ಇದನ್ನೂ ಓದಿ: ‘ಕೋವಿಡ್​​-19 ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕಡ್ಡಾಯ‘ - ಐಸಿಎಂಆರ್‌

2018-19ನೆಯ ಸಾಲಿನಲ್ಲಿ 72 ಕೋಟಿ ರೂಪಾಯಿ ಸಂಗ್ರಹವಾಗಬೇಕಿತ್ತು. ಮಾರ್ಚ್ ಮೊದಲ ವಾರದವರೆಗೆ 55 ಕೋಟಿ‌‌ ರೂಪಾಯಿ ತೆರಿಗೆ ಹಣ ಸಂಗ್ರಹವಾಗಿದೆ. ಕೊರೋನಾ ಹಾವಳಿಗೂ ಮೊದಲು ಜನರು ಸಹಜವಾಗಿ ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಆದರೆ ಈಗ ಸಂಕೀರ್ಣ ಸ್ಥಿತಿಯಿದೆ. ದುಡಿಮೆಯಿಲ್ಲದೆ ದುಡಿಯುವ ಕೈಗಳು ಕಂಗೆಟ್ಟಿವೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ರಿಯಾಯತಿ ಘೋಷಣೆ ಮಾಡಿವೆ. ಗೃಹ, ವಾಹನ ಸಾಲದ ಇಎಮ್‌ಐ ಕೂಡ ಮುಂದೂಡಲಾಗಿದೆ. ಜನರ ಸಮಸ್ಯೆ ಅರಿತು ಹಲವು ಪ್ಯಾಕೇಜ್‌ಗಳನ್ನು ಕೊಡಲಾಗಿದೆ. ಕೊರೋನಾ ಆತಂಕದಿಂದ ಹೊರಬರಲು ದೇಶ ಪರಿತಪಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜನ ಪ್ರತಿನಿಧಿಗಳ ಆಡಳಿತವಿಲ್ಲ. ಆಡಳಿತ ಮಂಡಳಿಯ ಅಧಿಕಾರ ಮುಗಿದಿದೆ. ಹೀಗಾಗಿ ಅಧಿಕಾರಿಗಳು ನಡೆಸಿದ್ದೆ ದರ್ಬಾರ್ ಎನ್ನುವ ಪರಿಸ್ಥಿತಿಯಿದೆ. ಜನರ ವಿರೋಧದ ಕಾರಣ ಏರಿಕೆಯಲ್ಲಿ ಶೇಕಡಾ ಐದರಷ್ಟು ಕಡಿಮೆ ಮಾಡುವುದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಮೇ 31ರೊಳಗೆ ತೆರಿಗೆ ಪಾವತಿಸಿದ್ರೆ ಶೇ.5ರಷ್ಟು ರಿಯಾಯಿತಿ ಕೊಡುವುದಾಗಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಹವಣಿಸುತ್ತಿರುವ ಜನರಿಗೆ ಮಹಾನಗರ ಪಾಲಿಕೆ ನೀಡಿರುವ ಏಟು ಗಾಯದ ಮೇಲೆ ಬರೆ ಎಳೆದಂತಾಗಿದೆ. ತೆರಿಗೆ ಹೆಚ್ಚಳವನ್ನು ಕೂಡಲೆ ಹಿಂಪಡೆಯಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ಮನವಿಗೆ ಸ್ಪಂದಿಸುತ್ತಾ ಕಾಯ್ದು ನೋಡಬೇಕು.
First published: