ಬೆಂಗಳೂರು: ಸಾಂಕ್ರಾಮಿಕ ರೋಗ ಕೊರೋನಾ ಸಾವು-ನೋವುಗಳ ಕರಾಳತೆಯ ಮಧ್ಯೆಯೇ ಬ್ಲ್ಯಾಕ್ ಫಂಗಸ್ ಕಾಯಿಲೆ ಭಾರತೀಯರನ್ನು ಕಾಡಲಾರಂಭಿಸಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಕಪ್ಪು ಶೀಲಿಂದ್ರಿ ಕಾಯಿಲೆ ಹೊಸ ರೋಗವೇನು ಅಲ್ಲದಿದ್ದರೂ ಕೊರೋನಾ ರೋಗಿಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದು ಚಿಂತೆಗೀಡು ಮಾಡಿದೆ. ಈಗಾಗಲೇ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ದೇಶದಲ್ಲಿ ಮೂರಂಕಿ ದಾಟಿದ್ದು, ಹಲವರು ಪ್ರಾಣ ಬಿಟ್ಟಿದ್ದಾರೆ.
ಈ ಬ್ಲ್ಯಾಕ್ ಫಂಗಸ್ ಕಾಯಿಲೆಯನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಇನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಕೂಡ ಬ್ಲ್ಯಾಕ್ ಫಂಗಸ್ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ ಈ ಭಯಾನಕ ಬ್ಲ್ಯಾಕ್ ಫಂಗಸ್ ಯಾರಲ್ಲಿ ಕಾಣಿಸಿಕೊಳ್ಳುತ್ತೆ? ರೋಗ ಲಕ್ಷಣಗಳನ್ನು ಪತ್ತೆ ಮಾಡುವುದು ಹೇಗೆ ಎಂದು ತಿಳಿಯಿರಿ.
ಯಾರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳಬಹುದು?
- ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು
- ಅತಿ ಹೆಚ್ಚು ಸ್ಟಿರಾಯಿಡ್ಸ್ ಬಳಸುವವರರು
- ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು
- ದೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು
- ಅತಿಯಾದ ಶೀತ, ಥಂಡಿ ಸಮಸ್ಯೆ ಎದುರಿಸುತ್ತಿರುವವರು
- ಉಸಿರಾಟದ ಸಮಸ್ಯೆಯಿಂದ ಮೆಡಿಕಲ್ ಆಕ್ಸಿಜನ್ ಸಹಾಯ ಪಡೆದವರು
- ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಪಡೆದವರು
ಮೇಲಿನ ಲಕ್ಷಣಗಳಿರುವವರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಬ್ಲ್ಯಾಕ್ ಫಂಗಸ್ ಬಂದಿದೆಯಾ ಎಂದು ಪರೀಕ್ಷಿಸುವುದು ಹೇಗೆ?
- ಮೂಗಿನಲ್ಲಿ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ
- ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು
- ದೃಷ್ಟಿ ಮಂಜಾಗುವುದು, ರೆಪ್ಪೆ ತೆರೆಯಲು/ಮುಚ್ಚಲು ಕಷ್ಟವಾಗುವುದು, ಕಣ್ಣು ಕಾಣದಿರುವುದು
- ಮುಖ ಮರಗಟ್ಟುವಿಕೆ, ಜುಮ್ ಎನಿಸುವ ಅನುಭವ
- ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು
- ಮುಖದಲ್ಲಿ ಊತ, ಮುಖ ಕಪ್ಪುಗಟ್ಟುವಿಕೆ , ಮುಖದಲ್ಲಿ ನೋವು
- ಹಲ್ಲು ಉದುರುವುದು, ಬಾಯಿಯಲ್ಲಿ ಕಪ್ಪು ಬಣ್ಣ, ಊತ ಕಾಣಿಸಿಕೊಳ್ಳುವುದು
ಮೇಲಿನ ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಹೈ ಶುಗರ್ ಇರುವವರು, ಅನಾರೋಗ್ಯ ಪೀಡಿತರು ಈ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕು. ಸ್ವಯಂ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ದೊಡ್ಡ ಅಪಾಯ ತಂದೊಡ್ಡಬಹುದು.
ಇದನ್ನೂ ಓದಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸತನವಿರಲಿ: ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ
ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಾಗ ಏನು ಮಾಡಬೇಕು?
- ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡು ಬಂದೊಡನೆ ENT ವೈದ್ಯರನ್ನು ಸಂಪರ್ಕಿಸಿ
- ENT ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು
- ರಕ್ತದಲ್ಲಿ ಮಧುಮೇಹ ಪ್ರಮಾಣವನ್ನು ಸದಾ ಪರೀಕ್ಷಿಸುತ್ತಿರಬೇಕು, ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು
- ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು
- ವೈದ್ಯರನ್ನು ಕೇಳದೆ ಸ್ಟಿರಾಯಿಡ್, ಆ್ಯಂಟಿ ವೈರಲ್ ಔಷಧಗಳನ್ನು ತೆಗೆದುಕೊಳ್ಳಬಾರದು
- ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್, ಎಂಆರ್ಐ ಮಾಡಿಸಬೇಕು.
ಅನಗತ್ಯವಾಗಿ ವೈದ್ಯರನ್ನು ಕೇಳದೆ ಔಷಧಗಳನ್ನು ತೆಗೆದುಕೊಳ್ಳುವುದು ಪ್ರಾಣಕ್ಕೆ ಕುತ್ತು ತರಬಹುದು. ಅತಿಯಾದ ಹೆದರಿಕೆಯಿಂದ ಅಗತ್ಯವಿಲ್ಲದಿದ್ದರೂ ಸಿಟಿ ಸ್ಕ್ಯಾನ್, ಎಂಆರ್ಐ ಮಾಡಿಸಬಾರದು. ಭಯಕ್ಕಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಇದ್ದರೆ ಬ್ಲ್ಯಾಕ್ ಫಂಗಸ್ನಿಂದ ಬಚಾವ್ ಆಗಬಹುದು.