ಮೈಸೂರು(ಏ. 11): ಕೊರೊನಾ ಹಾಟ್ಸ್ಪಾಟ್ ಆಗಿರುವ ನಂಜನಗೂಡಿನಲ್ಲಿ ಒಂದು ರೀತಿಯಲ್ಲಿ ಭಯಗ್ರಸ್ತ ವಾತಾವರಣ ನೆಲಸಿದೆ. ಈ ಊರಿಗೆ ಕಾಲಿಡಲು ಜನರು ಹೆದರುತ್ತಿದ್ದಾರೆ. ಎಂಥದ್ದೇ ಪ್ರದೇಶವಿದ್ದರೂ ತರಕಾರಿ ತಳ್ಳುಗಾಡಿಗಳಾದರೂ ಹೋಗುತ್ತವೆ. ಆದರೆ, ನಂಜನಗೂಡಿನಲ್ಲಿ ಅದಕ್ಕೂ ಜನರು ಹೆದರುತ್ತಿದ್ಧಾರೆ. ಅನೇಕ ಕೊರೋನಾ ಸೋಂಕಿತರು ಮತ್ತು ಶಂಕಿತರು ನಂಜನಗೂಡಿನ ವಿವಿಧ ಬಡಾವಣೆಗಳಲ್ಲಿ ಹೋಮ್ ಕ್ವಾರಂಟೈನ್ನಲ್ಲಿರುವುದೇ ಇದಕ್ಕೆ ಕಾರಣ.
ಹೋಮ್ ಕ್ವಾರಂಟೈನ್ನಲ್ಲಿರುವವರು ಮನೆಯಿಂದ ಹೊರಗೆ ಕಾಲಿಡಬಾರದು. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಹೋಮ್ ಕ್ವಾರಂಟೈನ್ನಲ್ಲಿರುವವರಿಗೆ ಹಣ್ಣು, ತರಕಾರಿಗಳನ್ನ ಪೂರೈಸಬೇಕೆಂದು ಹಾಪ್ ಕಾಮ್ಸ್ಗೆ ಸೂಚನೆ ನೀಡಲಾಗಿದೆ. ತೋಟಗಾರಿಕೆ ಇಲಾಖೆ, ಜಿಲ್ಲಾಧಿಕಾರಿಗಳೇ ಮನವಿ ಮಾಡಿದ್ಧಾರೆ. ಆದರೂ ಹಣ್ಣ ತರಕಾರಿ ಮಾರಲು ಹಾಪ್ಕಾಮ್ಸ್ ಸಿಬ್ಬಂದಿ ಯಾರೂ ಮುಂದೆ ಬರುತ್ತಿಲ್ಲ. ಹೋಮ್ ಕ್ವಾರಂಟೈನ್ನಲ್ಲಿರುವವರ ಬೀದಿಗಳಿಗೆ ಕಾಲಿಡಲೇ ಹೆದರುತ್ತಿದ್ದಾರೆ.
ಇದನ್ನೂ ಓದಿ: ಕೊರೋನಾ ಪತ್ತೆಯಾಗದ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆಗೆ ಚಿಂತನೆ ; ಡಿಸಿಎಂ ಗೋವಿಂದ ಕಾರಜೋಳ
ಈ ಕಾರಣದಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಅನಿವಾರ್ಯವಾಗಿ ಹಣ್ಣ ತರಕಾರಿ ಮಾರಾಟಕ್ಕೆ ನಿಂತಿದ್ದಾರೆ. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಸೇರಿದಂತೆ 8 ಅಧಿಕಾರಿಗಳು ಈ ಕಾಯಕದಲ್ಲಿ ಸ್ವತಃ ತೊಡಗಿಸಿಕೊಳ್ಳುವಂತಾಗಿದೆ. ಆಟೋಗಳಲ್ಲಿ ತೆರಳಿ ಇವರು ಮಾರಾಟ ಮಾಡುತ್ತಿದ್ದಾರೆ.
ನಂಜನಗೂಡಿನ ಜುಬಿಲೆಂಟ್ ಫ್ಯಾಕ್ಟರಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು, ಅದೀಗ ಅಲ್ಲಿಯ ಅನೇಕ ಉದ್ಯೋಗಿಗಳಲ್ಲಿ ಹರಡಿರುವ ಶಂಕೆ ಇದೆ. ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರು ಹೋಮ್ ಕ್ವಾರಂಟೈನ್ನಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ