ಚಾಮರಾಜನಗರ (ಮೇ.04) ಹೋಂ ಐಸೋಲೇಷನ್ ಗೆ ವ್ಯವಸ್ಥೆ ಇಲ್ಲದ ಕೊರೋನಾ ಸೋಂಕಿತರಿಗೆ ಗ್ರಾಮದಲ್ಲೇ ಹೋಂ ಐಸೋಲೇಷನ್ ಕೇರ್ ಸೆಂಟರ್ ತೆರದು ಅನುಕೂಲ ಮಾಡಿಕೊಡಲು ಚಾಮರಾಜನಗರ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ಮುಂದಾಗಿದೆ. ಕೊರೋನಾ ಕೇರ್ ಸೆಂಟರ್ ಗಳನ್ನು ಜಿಲ್ಲಾಡಳಿತದ ವತಿಯಿಂದ ತೆರೆಯಲಾಗುತ್ತೆ. ಆದರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಸೋಮಹಳ್ಳಿ ಗ್ರಾಮ ಪಂಚಾಯತಿ ರಾಜ್ಯದಲ್ಲೆ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಸೋಂಕಿತರು ತಮ್ಮೂರಿನಲ್ಲೇ ಇದ್ದೇವೆ ಎಂಬ ನೆಮ್ಮದಿಯ ಭಾವನೆ ಮೂಡಿಸಲು ಮುಂದಾಗಿರುವ ಗ್ರಾಮ ಪಂಚಾಯತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕೇವಲ 82 ಸಾವಿರ ರೂಪಾಯಿ ವೆಚ್ಚದಲ್ಲಿ ಹತ್ತು ಬೆಡ್ ಗಳ ಐಸೋಲೇಷನ್ ಕೇಂದ್ರ ಸಿದ್ದಪಡಿಸಿದೆ.
ಕೆಲವು ಸೋಂಕಿತರು ಮನೆಯಲ್ಲಿ ಐಸೋಲೇಷನ್ ಗೆ ವ್ಯವಸ್ಥೆ ಇಲ್ಲದಿದ್ದರೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದರಿಂದ ಕೊರೋನಾ ಸೋಂಕು ಮನೆಯಲ್ಲಿನ ಇತರರಿಗೆ ಹರಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿಹೋಂ ಐಸೋಲೇಷನ್ ಗೆ ಒಳಪಡಿಸಲು ಮನೆಗಳಲ್ಲಿ ಪ್ರತ್ಯೇಕ ವ್ಯವಸ್ಥೆಯಿಲ್ಲದ ಸೋಂಕಿತರನ್ನ ತಮ್ಮೂರಲ್ಲೆ ಐಸೋಲೇಷನ್ ಗೆ ಒಳಪಡಿಸಲು ಆಲೋಚನೆ ಮಾಡಿದ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಶ್ರೀನಿವಾಸ್ ಕಡಿಮೆ ವೆಚ್ಚದ ಮಂಚಗಳು ಎಲ್ಲಿ ಸಿಗಬಹುದು ಎಂಬುದನ್ನು ಯೂಟ್ಯೂಬ್ ಮೂಲಕ ಸರ್ಚ್ ಮಾಡಿ ಗುಜಾರಾತ್ ನ ಕಂಪನಿಯೊಂದರಿಂದ 10 ಕಾರ್ಡ್ ಬೋರ್ಡ್ ಕಾಟ್ ಗಳನ್ನು ಆನ್ ಲೈನ್ ಮೂಲಕ ತರಿಸಿದ್ದಾರೆ. ಜೊತೆಗೆ ಹಾಸಿಗೆ ದಿಂಬು, ಬೆಡ್ ಶೀಟ್ ಗಳನ್ನು ಖರೀದಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯ ಎರಡು ಕೊಠಡಿಗಳಲ್ಲಿ ಐಸೋಲೇಷನ್ ಕೇಂದ್ರ ಸಿದ್ದಪಡಿಸಲಾಗಿದ್ದು ದೂರದ ಕೇರ್ ಸೆಂಟರ್ ಗಳಿಗೆ ತೆರಳಲು ಹಿಂಜರಿಯುವ ಸೋಂಕಿತರು ಇನ್ಮೇಲೆ ತಮ್ಮೂರಲ್ಲೆ ಐಸೋಲೇಷನ್ ಆಗುವ ವ್ಯವಸ್ಥೆ ಮಾಡಲಾಗಿದೆ. ಪಿಡಿಓ ಶ್ರೀನಿವಾಸ್ ಅವರ ಈ ಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಯುವಕರು ಸಾಥ್ ನೀಡಿದ್ದಾರೆ
ಇದನ್ನು ಓದಿ: ನಿರುದ್ಯೋಗಿಗಳ ಕೈ ಹಿಡಿದ ಪಶು ಸಂಗೋಪನೆ; ಹಾಲಿನ ಉತ್ಪಾದನೆಯಲ್ಲಿ ದುಪ್ಪಟ್ಟು ಹೆಚ್ಚಳ
ಈ ಐಸೋಲೇಷನ್ ಕೇಂದ್ರಕ್ಕೆ ಬರುವ ಸೋಂಕಿತರಿಗೆ ಪಕ್ಕದ ಮಾದಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆ ಕೊಡಿಸಲಾಗುವುದು. ಶಾಲೆಯ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸಿ ಸೋಂಕಿತರಿಗೆ ಪೂರೈಸಲಾಗುವುದು. ಈ ಹೋಂ ಐಸೋಲೇಷನ್ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಗ್ರಾಮದ ಯುವಕರು ಮುಂದೆ ಬಂದಿದ್ದಾರೆ ಎಂದು ಪಿ.ಡಿ.ಓ ಶ್ರೀನಿವಾಸ್ ನ್ಯೂಸ್ 18 ಗೆ ತಿಳಿಸಿದ್ದಾರೆ
ಸೋಮಹಳ್ಳಿ ಗ್ರಾಮದ ಬಾಣಂತಿಯೊಬ್ಬರಿಗೆ ಸೋಂಕು ತಗುಲಿ ಹೋಂ ಐಸೋಲೇಷನ್ ಆಗಲು ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ, ದೂರದ ಕೇರ್ ಸೆಂಟರ್ ಗು ಹೋಗಲು ಸಾಧ್ಯ ವಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಗ್ರಾಮಪಂಚಾಯ್ತಿ ವತಿಯಿಂದ ಗ್ರಾಮದಲ್ಲೇ ಏಕೆ ಸೋಂಕಿತರು ಐಸೋಲೇಷನ್ ಆಗಲು ಕೇರ್ ಸೆಂಟರ್ ತೆರೆಯಬಾರದು ಎಂದು ಯೋಚಿಸಿ ಈ ಬಗ್ಗೆ ತೀರ್ಮಾನಿಸಿದೆವು . ಗ್ರಾಮ ಪಂಚಾಯತಿ ಸಂಪನ್ಮೂಲ, ಗ್ರಾಮಪಂಚಾಯ್ತಿಗೆ ಸರ್ಕಾರ ನೀಡಿರುವ ಅನುದಾನ ಬಳಸಲಾಗಿದ್ದು ಗ್ರಾಮಸ್ಥರು ಸಹ ದೇಣಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ