ಒಂದು ಸಲ ಕೊರೊನಾ ವೈರಸ್ (Corona Virus) ನಿಂದ ಸೋಂಕು ತಗುಲಿದರೇ ಸುಧಾರಿಸಿಕೊಳ್ಳೋಕೆ ಜನ ವಾರ, ತಿಂಗಳುಗಟ್ಟಲೆ ತೆಗೆದುಕೊಳ್ತಿದ್ದಾರೆ. ಇಡೀ ಜಗತ್ತೇ ಇದರ ಆರ್ಭಟದಿಂದ ತತ್ತರಿಸಿಹೋಗಿದೆ. ಅಂಥಾದ್ರಲ್ಲಿ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರ ದೇಹದೊಳಗೆ ಕೊರೊನಾ ವೈರಸ್ ಬರೋಬ್ಬರಿ 216 ದಿನ ಜೀವಿಸಿತ್ತಂತೆ. ಅಲ್ಲದೇ ಆಕೆಯ ದೇಹದೊಳಗೇ ಒಟ್ಟು 30ಕ್ಕೂ ಹೆಚ್ಚು ರೂಪಾಂತರಗಳೂ (mutants) ಉಂಟಾಗಿವೆ. 36 ವರ್ಷ ವಯಸ್ಸಿನ ಈ ಮಹಿಳೆ 2006ರಿಂದ ಎಚ್ಐವಿ (HIV) ಸೋಂಕಿಗೆ ತುತ್ತಾಗಿದ್ದರು. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಸಂಶೋಧಕರು ತಿಳಿಸಿದ್ದಾರೆ.
2006ರಲ್ಲಿ ಮಹಿಳೆಗೆ ಎಚ್ಐವಿ ಸೋಂಕು ಪತ್ತೆಯಾಗಿದೆ. ಆಗಿನಿಂದಲೇ ಆಕೆಯ ರೋಗನಿರೋಧಕ ಶಕ್ತಿ ಕುಂಠಿತವಾಗಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಆಕೆಗೆ ಕೊರೊನಾ ವೈರಸ್ನಿಂದ ಸೋಂಕು ತಗುಲಿದೆ. ನಂತರ ಆಕೆದ ದೇಹದಲ್ಲಿ ವೈರಸ್ 13 ರೂಪಾಂತರಗಳು ಮತ್ತು 19 ಜೆನೆಟಿಕ್ ಬದಲಾವಣೆಗಳಿಗೆ ಒಳಗಾಯಿತು. ಇದು ವೈರಸ್ನ ಒಟ್ಟಾರೆ ನಡವಳಿಕೆಯನ್ನೇ ಬದಲಾಯಿಸಿಬಿಟ್ಟಿತು ಎನ್ನಲಾಗಿದೆ.
ಇದನ್ನೂ ಓದಿ: Viral News: ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ ! ಆಗಲೇ ಮುಂದಿನ ಮಗುವಿಗೆ ಪ್ಲಾನಿಂಗ್ !
ಸಂಶೋಧಕರ ಪ್ರಕಾರ ಮಹಿಳೆ ಈ ರೂಪಾಂತರಿಗಳನ್ನು ಇತರರಿಗೂ ಹರಡಿದ್ದಾರಾ ಎನ್ನುವುದು ಇನ್ನೂ ತಿಳಿಯುತ್ತಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಅನೇಕ ರೂಪಾಂತರಿಗಳು ಹೆಚ್ಚಾಗಿ ಅಂದರೆ ಶೇಕಡಾ 25ರಷ್ಟು ಎಚ್ಐವಿ ಸೋಂಕಿತರಲ್ಲೇ ಕಂಡುಬಂದಿದೆ. ಎಚ್ಐವಿ ಸೋಂಕಿತರು ಕೋವಿಡ್ ಸೋಂಕಿಗೆ ಬಹಳ ವೇಗವಾಗಿ ತುತ್ತಾಗುತ್ತಾರೆ ಮತ್ತು ಅವರ ದೇಹದೊಳಗೆ ವೈರಸ್ ರೂಪಾಂತರಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಇನ್ನೂ ನಿರೂಪಿತವಾಗಿಲ್ಲ. ಒಂದು ವೇಳೆ ಅದು ಸತ್ಯ ಎಂದು ಪ್ರೂವ್ ಆದರೆ ಎಚ್ಐವಿ ಸೋಂಕಿತರು ಇಡೀ ಜಗತ್ತಿಗೆ ರುಪಾಂತರಿಗಳನ್ನು ಹಂಚುವ ಫ್ಯಾಕ್ಟರಿಗಳಾಗಿ ಬದಲಾಗುತ್ತಾರೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಶೋಧನೆಯನ್ನು ಮಾಡಿದ ತಂಡದ ತಜ್ಞರು ಹೇಳುವ ಪ್ರಕಾರ ರೋಗನಿರೋಧಕ ಶಕ್ತಿ ಬಹಳ ಕಡಿಮೆ ಇರುವ ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಉಳಿದವರಿಗಿಂತ ದೀರ್ಘಕಾಲದವರಗೆ ಇದ್ದು ಹಾನಿ ಮಾಡುವ ಅಪಾಯ ಹೆಚ್ಚೇ ಇದೆ. ಈ ಮಹಿಳೆಯ ವಿಚಾರದಲ್ಲಿ ಹೇಳುವುದಾದರೆ ಆರಂಭದ ದಿನಗಳಲ್ಲಿ ಆಕೆ ಬಹಳ ಲಘುವಾದ ರೋಗಲಕ್ಷಣಗಳನ್ನು ಹೊಂದಿದ್ದರು. ಕೋವಿಡ್ ಸೋಂಕು ಇದ್ದರೂ ರೋಗಲಕ್ಷಣ ತೀವ್ರವಾಗಿರಲಿಲ್ಲ. ಎಚ್ಐವಿ ಸೋಂಕು ಇರುವ ಅನೇಕರಿಗೆ ಅದು ಗೊತ್ತೇ ಇಲ್ಲದ ಪ್ರಕರಣಗಳೂ ಸಾಕಷ್ಟಿವೆ, ಅವೆಲ್ಲವೂ ಪರೀಕ್ಷೆಯಾಗಿ ತಿಳಿದರೆ ಆಗ ಎಚ್ಐವಿ ಇಂದ ಉಂಟಾಗುವ ಸಾವಿನ ಪ್ರಮಾಣವನ್ನೂ ತಗ್ಗಿಸಬಹುದು. ಜೊತೆಗೇ ಹೊಸಾ ಕೋವಿಡ್ ರೂಪಾಂತರಿಗಳು ಹುಟ್ಟುವುದನ್ನೂ ತಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ. ರೂಪಾಂತರಿ, ಸೋಂಕು ಹರಡುವಿಕೆ ಮತ್ತು ಎಚ್ಐವಿ ನಡುವಿನ ಈ ಸಂಬಂಧ ಭಾರತಕ್ಕೂ ಅಪಾಯಕಾರಿಯೇ. ಯಾಕೆಂದರೆ ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಚಿಕಿತ್ಸೆ ಪಡೆಯದ ಸುಮಾರು 10 ಲಕ್ಷ ಎಚ್ಐವಿ ಸೋಂಕಿತರು ಇದ್ದಾರೆ ಎಂದು ಭಾವಿಸಲಾಗಿದೆ. ಅವರಲ್ಲಿ ಕೋವಿಡ್ ಸೋಂಕು ಮತ್ತದರ ರೂಪಾಂತರಿಗಳ ಅಪಾಯ ಹೆಚ್ಚಾಗಿ ಅದು ಉಳಿದವರ ಜೀವಕ್ಕೂ ಅಪಾಯ ತರುವ ಸಾಧ್ಯತೆ ಇದ್ದೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ