ಹೈಕೋರ್ಟ್​​ಗೂ ತಟ್ಟಿದ ಕೊರೋನಾ ಭೀತಿ; ಆನ್​ಲೈನ್ ಕಲಾಪ ನಡೆಸಲು ಮುಖ್ಯ ನ್ಯಾಯಮೂರ್ತಿ ನಿರ್ಧಾರ

ಮುಂದಿನ ಆದೇಶ ಹೊರಬೀಳುವವರೆಗೂ ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೋ ಸಂವಾದದ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಿರುವ ಸಂಗತಿಯನ್ನು ಸ್ಪಷ್ಟಪಡಿಸಿದ್ದಾರೆ. ಈ ಆದೇಶದ ಜೊತೆ ಜೊತೆಗೆ ಮೇಲ್ಕಂಡ ನಿಯಮಗಳು ಕೇವಲ ಪ್ರಧಾನ ಪೀಠಕ್ಕೆ ಮಾತ್ರ ಅನ್ವಯ ಆಗಲಿವೆ. ಆದರೆ ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ

news18-kannada
Updated:July 1, 2020, 10:41 AM IST
ಹೈಕೋರ್ಟ್​​ಗೂ ತಟ್ಟಿದ ಕೊರೋನಾ ಭೀತಿ; ಆನ್​ಲೈನ್ ಕಲಾಪ ನಡೆಸಲು ಮುಖ್ಯ ನ್ಯಾಯಮೂರ್ತಿ ನಿರ್ಧಾರ
ಕರ್ನಾಟಕ ಹೈಕೋರ್ಟ್
  • Share this:
ಬೆಂಗಳೂರು(ಜು.01): ದಿನೇ ದಿನೇ ವ್ಯಾಪಕವಾಗುತ್ತಿರುವ ಮಹಾಮಾರಿ ಕೊರೋನಾ ರಾಜ್ಯ ಹೈ ಕೋರ್ಟ್​​​ನ್ನು ಕೂಡ ಬಿಟ್ಟಿಲ್ಲ. ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಆತಂಕಗೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು,  ಇನ್ಮುಂದೆ ಕೋರ್ಟ್ ನ ಕಲಾಪದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಹೊರಟಿದ್ದಾರೆ.

ರಾಜ್ಯ ಹೈಕೋರ್ಟ್ ವ್ಯಾಪ್ತಿಯಲ್ಲಿ ಹೊಸ ಬದಲಾವಣೆಗಳು ಹಾಗೆಯೇ ಕ್ರಾಂತಿಕಾರಿ ಬೆಳವಣಿಗೆಗಳು ಎಂದರೆ ಮೊದಲಿಗೆ ನೆನಪಾಗುವುದು ಮುಖ್ಯ ನ್ಯಾಯಮೂರ್ತಿಗಳಾದ  ಓಕಾ. ಅವರು ಅಧಿಕಾರ ವಹಿಸಿಕೊಂಡ ಮೇಲೆ ಸಾಕಷ್ಟು ಅಮೂಲಾಗ್ರ ಬದಲಾವಣೆಗಳನ್ನು ನ್ಯಾಯಾಂಗದ ಆಯಾಮಗಳಲ್ಲಿ ತಂದಿದ್ದಾರೆ. ಹಾಗೆಯೇ ಕೊರೋನಾ ಸೋಂಕು ಕಾಣಿಸಿಕೊಂಡ ದಿನಗಳಿಂದಲೇ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ.

ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಕಟ್ಟಪ್ಪಣೆ ಮಾಡಿದ್ದಾರೆ. ಆಶ್ಚರ್ಯ ಹಾಗೂ ಖುಷಿ ವಿಚಾರ ಏನ್ ಗೊತ್ತಾ, ಇವತ್ತು ಎಲ್ಲಾ ಕಡೆ ಕೊರೋನಾ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ.  ಆದರೆ ಸಾಮಾಜಿಕ ಅಂತರ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆಯಂತಹ ಕ್ರಮಗಳು ಅತ್ಯಂತ ಕಟ್ಟುನಿಟ್ಟಾಗಿ ಹಾಗೂ ಚಾಚುತಪ್ಪದೆ ಪಾಲನೆಯಾಗುತ್ತಿರುವುದು ಹೈಕೋರ್ಟ್ ನ ವ್ಯಾಪ್ತಿಯಲ್ಲಿ ಎನ್ನುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಹಾಗೆಯೇ ಮಾದರಿ ಕೂಡ.

ಕೊರೋನಾ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿರುವ ಜೊತೆ ಜೊತೆಯಲ್ಲಿಯೇ, ಈಗ ಮತ್ತೊಂದು ಮಹತ್ವದ ಹಾಗೂ ಕ್ರಾಂತಿಕಾರಿ ಎನ್ನುವಂಥ ನಿರ್ಧಾರವನ್ನು ನ್ಯಾಯಮೂರ್ತಿ ಓಕಾ ಅವರು ತೆಗೆದುಕೊಂಡಿದ್ದಾರೆ. ಅದರ ಪ್ರಕಾರ ಇನ್ನು ಮುಂದೆ ಹೈಕೋರ್ಟ್ ನಲ್ಲಿ ಆನ್​​ಲೈನ್ ಕಲಾಪಗಳು ನಡೆಯಲಿವೆ. ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ, ವಕೀಲರು ಮತ್ತು ಕೋರ್ಟ್ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಈ ಕ್ಷಣದಿಂದಲೇ ಹೈಕೋರ್ಟ್ ನ ಪ್ರಧಾನ ಪೀಠದಲ್ಲಿ ನಡೆಯುತ್ತಿದ್ದ ಕಲಾಪಗಳನ್ನು ಅಂದರೆ ಫಿಸಿಕಲ್(ಮುಕ್ತ)​​ ಆಗಿ ನಡೆಯುತ್ತಿದ್ದ ಕಲಾಪಗಳನ್ನು ರದ್ದುಪಡಿಸಿ, ಆದೇಶ ಹೊರಡಿಸಿ ಎಲ್ಲರ ನೆಮ್ಮದಿ ನಿಟ್ಟುಸಿರಿಗೆ ಕಾರಣವಾಗಿದ್ದಾರೆ.

ಹೋಂಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿ ಮತ್ತು ಸೋಂಕಿತನ ಹೆಸರು ಬಹಿರಂಗಪಡಿಸಿದ ಅಧಿಕಾರಿ ವಿರುದ್ಧ ದೂರು

ಮುಖ್ಯ ನ್ಯಾಯಮೂರ್ತಿಗಳ ಆದೇಶದ ಹಿನ್ನೆಲೆಯಲ್ಲಿ ಅದನ್ನು ಪರಿಪಾಲಿಸಲು ಮುಂದಾಗಿರುವ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಈಗಾಗಲೇ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಮುಂದಿನ ಆದೇಶ ಹೊರಬೀಳುವವರೆಗೂ ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೋ ಸಂವಾದದ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಿರುವ ಸಂಗತಿಯನ್ನು ಸ್ಪಷ್ಟಪಡಿಸಿದ್ದಾರೆ. ಈ ಆದೇಶದ ಜೊತೆ ಜೊತೆಗೆ ಮೇಲ್ಕಂಡ ನಿಯಮಗಳು ಕೇವಲ ಪ್ರಧಾನ ಪೀಠಕ್ಕೆ ಮಾತ್ರ ಅನ್ವಯ ಆಗಲಿವೆ. ಆದರೆ ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ. ಇದರಲ್ಲಿ ಯಾವುದೇ ರೀತಿಯ ಗೊಂದಲಗಳು ಬೇಡ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ.

ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಗಳ ಕುರಿತಾಗಿ ಸಲ್ಲಿಕೆಯಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಗಳ ವಿಲೇವಾರಿಯಲ್ಲಿ ಸಿದ್ಧಹಸ್ತರಾಗಿರುವ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ರವರು ಎಂದಿನಂತೆ ಕಾರ್ಯಪ್ರವೃತ್ತವಾಗಲಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುವ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. ಜವಾಬ್ದಾರಿಯುತ ಸರ್ಕಾರಗಳೇ ಸಾರ್ವಜನಿಕರ ಹಿತ ಕಡೆಗಣಿಸುವ ಹೊಣೆಗೇಡಿತನ ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ‌ ಮುಖ್ಯ ನ್ಯಾಯಮೂರ್ತಿಗಳಾದ ಓಕಾ ಅವರು ಸಾರ್ವಜನಿಕರ ಹಿತ ಕಾಯುತ್ತಿರುವುದನ್ನು ಇಡೀ ನ್ಯಾಯಾಂಗ ವಲಯ ಮುಕ್ತಕಂಠದಿಂದ ಹಾಡಿಹೊಗಳಿದೆ.ಇಂತಹ ನ್ಯಾಯಮೂರ್ತಿಗಳು ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎನ್ನುತ್ತಾರೆ ಹಿರಿಯ ವಕೀಲೆ ಗೀತಾಮಿಶ್ರಾ. ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಎಲ್ಲಕ್ಕಿಂತ ಹೆಚ್ಚಾಗಿ ಕೋರ್ಟ್ ನ ವ್ಯಾಪ್ತಿಯಲ್ಲಿ ಕೆಲಸ ಮಾಡುವಂಥ ವಕೀಲರು ಮತ್ತು ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಮುಖ್ಯನ್ಯಾಯಮೂರ್ತಿ ಓಕಾ ಅವರು ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಪ್ರಶಂಸನೀಯ.

ಸಾರ್ವಜನಿಕರ ಬಗ್ಗೆ ಅವರಿಗಿರುವ ಕಾಳಜಿಯಲ್ಲಿ ಒಂದಷ್ಟಾದ್ರೂ ಪರ್ಸೆಂಟ್ ಸರ್ಕಾರಕ್ಕೆ ಇದ್ದಿದ್ದರೆ ಪರಿಸ್ಥಿತಿ ಆತಂಕಕಾರಿಯೂ ಆಗ್ತಿರಲಿಲ್ಲ‌. ಕೈ ಚೆಲ್ಲಿ ಕೂರುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲವೇನೋ.
First published: July 1, 2020, 10:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading