ಬೆಂಗಳೂರು(ಜು.18): ಬಿಬಿಎಂಪಿಗೆ ನೂತನ ಕಮಿಷನರ್ ಆಗಿ ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ ಪ್ರಸಾದ್ ನಿಯೋಜನೆಗೊಂಡಿದ್ದಾರೆ .ಹುದ್ದೆ ಹಾಗೂ ಅನುಭವ ಎರಡೂ ಮಂಜುನಾಥ್ ಪ್ರಸಾದ್ ಅವರಿಗೆ ಹೊಸದೇನಲ್ಲ. ಈ ಹಿಂದೆಯೂ ಬಿಬಿಎಂಪಿ ಕಮಿಷನರ್ ಆಗಿ ಕೆಲಸ ಮಾಡಿರುವ ಅನುಭವ ಅವರಿಗಿದೆ. ಆದರೀಗ, ಸಂದರ್ಭ ಮಾತ್ರ ಭಿನ್ನ.
ಈ ಹಿಂದೆ ಹೇಳಿಕೊಳ್ಳುವಂಥ ಸವಾಲುಗಳಿರಲಿಲ್ಲ. ಇವಾಗ ಮಾತ್ರ ಕೊರೋನಾದಂಥ ಬೃಹತ್ ಹಾಗೂ ಕ್ಲಿಷ್ಟಕರ ಸವಾಲಿದೆ. ಅದನ್ನು ನಿಭಾಯಿಸಬೇಕಾದ ದೊಡ್ಡ ಹೊಣೆಗಾರಿಕೆಯನ್ನು ಹೆಗಲ ಮೇಲಿರಿಸಿ ಸರ್ಕಾರ ಸಾಕಷ್ಟು ವಿಶ್ವಾಸ-ನಂಬಿಕೆ ಇಟ್ಟು ಮಂಜುನಾಥ್ ಪ್ರಸಾದ್ ಅವರನ್ನು ಆಯುಕ್ತರ ಹುದ್ದೆಗೇರಿಸಿದೆ.
ಕೊರೋನಾ ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸದ ಆರೋಪದ ಮೇಲೆ ಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸುತ್ತಿರುವ ನಿಕಟಪೂರ್ವ ಆಯುಕ್ತ ಅನಿಲ್ ಕುಮಾರ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಮಾರಕ ಕೊರೋನಾ ಸಂದರ್ಭವನ್ನು ಸರಿಯಾಗಿ ನಿಭಾಯಿಸದ ಆರೋಪಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರ ತಲೆದಂಡವಾಗಿದೆ. 2019ರ ಆಗಸ್ಟ್ನಲ್ಲಿ ಅಧಿಕಾರ ಹಸ್ತಾಂತರ ಮಾಡಿದ್ದ ಮಂಜುನಾಥ ಪ್ರಸಾದ್ ಅವರೇ ಮತ್ತೆ ಅನಿಲ್ ಕುಮಾರ್ ಅವರಿಂದ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಕಾಕತಾಳೀಯ.
ಬಿಬಿಎಂಪಿ ಆಯುಕ್ತರಾಗಿ ವರ್ಷಗಳ ಕಾಲ ಆಡಳಿತ ನಡೆಸಿರುವ ಅನುಭವಿ ಅಧಿಕಾರಿ ಮಂಜುನಾಥ್ ಪ್ರಸಾದ್ ಮೇಲೆ ಬಿಬಿಎಂಪಿಗೆ ಅಂಟಿಕೊಂಡಿರುವ ಕೊರೋನಾ ಕಳಂಕ ತೊಡೆದಾಕುವಂಥ ಗುರುತರ ಹೊಣೆಗಾರಿಕೆ ಇದೆ. ಈ ಕಾರಣಕ್ಕಾಗೇ ಕಂದಾಯ ಸಚಿವ ಹಾಗೂ ಕೋವಿಡ್ ಉಸ್ತುವಾರಿ ಆರ್. ಅಶೋಕ್ ಅವರೇ ಖುದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಜತೆ ಕೂತು ತಮ್ಮ ಅತ್ಯಾಪ್ತ ಮಂಜುನಾಥ್ ಪ್ರಸಾದ್ ಅವರನ್ನು ಬಿಬಿಎಂಪಿಯಲ್ಲಿ ಪ್ರತಿಷ್ಟಾಪಿಸಿದ್ದಾರೆನ್ನುವ ಮಾತುಗಳಿವೆ.
ಕೋರ್ಟ್ನ ನಿರಂತರ ಚಾವಟಿ ಏಟಿನ ಮಾತುಗಳು. ಸಾರ್ವಜನಿಕರಿಂದ ಕೇಳಿಬರುತ್ತಿದ್ದ ಆಕ್ರೋಶ-ಅಸಮಾಧಾನದ ಅಭಿಪ್ರಾಯಗಳಿಂದೆಲ್ಲಾ ಮುಜುಗರಕ್ಕೀಡಾದ ಸರ್ಕಾರ ಇದಕ್ಕೆಲ್ಲಾ ಆಯುಕ್ತರ ವರ್ಗಾವಣೆಯೇ ಸೂಕ್ತ ಸೆಲ್ಯೂಷನ್ ಎಂದು ಪರಿಗಣಿಸಿ ಮಂಜುನಾಥ್ ಪ್ರಸಾದ್ ಅವರನ್ನು ಆಯುಕ್ತರನ್ನಾಗೇನೋ ನಿಯೋಜಿಸಿದೆ.
ಮಂಜುನಾಥ್ ಪ್ರಸಾದ್ ಅವರಿಗೂ ಸಧ್ಯದ ಮಟ್ಟಿಗಿನ ಹುದ್ದೆ ಹೂವಿನ ಹಾಸಿಗೆಯಲ್ಲ. ಹೆಜ್ಜೆ ಹೆಜ್ಜೆಗೂ ಸವಾಲುಗಳಿರುವ ಸತ್ಯ ಅವರಿಗೂ ಗೊತ್ತಿದೆ. ಇಂಥಾ ಸಂದರ್ಭದಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡಲೇಬೇಕಾದ ಹೊಣೆಗಾರಿಕೆ ಅವರ ಮೇಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊರೋನಾ ವಿಚಾರದಲ್ಲಿ ಸಲ್ಲಿಕೆಯಾಗುತ್ತಿರುವ PILಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಹೈಕೋರ್ಟ್ನ ಭಯವೂ ಪ್ರಸಾದ್ ಅವರಿಗಿದೆ.
ಇದನ್ನು ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗ್ತಾರೆನ್ನವುದೇ ಎಲ್ಲರಲ್ಲಿರುವ ಕುತೂಹಲಕೊರೊನಾದ ಸಾಂಕ್ರಾಮಿಕತೆ ದಿನೇ ದಿನೇ ವ್ಯಾಪಕವಾಗುತ್ತಿದೆ. ಸಾವುಗಳ ಸಂಖ್ಯೆ ಕಂಟ್ರೋಲ್ಗೆ ಬರುತ್ತಿಲ್ಲ. ಸೋಂಕಿತರ ವಿಷಯದಲ್ಲಿ ತೋರಲಾಗುತ್ತಿರುವ ನಿರ್ಲಕ್ಷ್ಯದಿಂದಲೇ ಹೆಚ್ಚು ಸಾವುಗಳಾಗುತ್ತಿವೆ. ಇದೆಲ್ಲವನ್ನು ಸರ್ಕಾರ ತಾತ್ಸಾರಿಸಿದ್ರೂ ಹೈಕೋರ್ಟ್ ಮಾತ್ರ ಗಂಭೀರವಾಗಿ ಪರಿಗಣಿಸುತ್ತಿದೆ.
ಇದೇ ಕಾರಣಕ್ಕೆ ಅನಿಲ್ ಕುಮಾರ್ ವರ್ಗಾವಣೆಯಾದ ಸತ್ಯದ ಅರಿವೂ ಸರ್ಕಾರಕ್ಕಿದೆ. ಹಾಗಾಗಿನೇ ಮಂಜುನಾಥ್ ಪ್ರಸಾದ್ ಅವರನ್ನು ಈ ಬಾರಿ ಬಿಬಿಎಂಪಿಗೆ ಕಳುಹಿಸುವಾಗ ನೂರಾರು ಬಾರಿ ತಿದ್ದಿತೀಡಿ ಕಳುಹಿಸಲಾಗಿದೆ. ಸರ್ಕಾರಕ್ಕೆ ಮುಜುಗರ ತಾರದ ಹಾಗೆಯೇ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಳದಂತೆ ಕೆಲಸ ಮಾಡುವಂತೆ ಸೂಚನೆ ನೀಡಿ ಕಳುಹಿಸಲಾಗಿದೆ ಎನ್ನಲಾಗ್ತಿದೆ.
ಮಂಜುನಾಥ್ ಪ್ರಸಾದ್ ಹಿರಿಯ ಐಎಎಸ್ ಅಧಿಕಾರಿ ಅಷ್ಟೇ ಅಲ್ಲ. ಬಿಬಿಎಂಪಿಯಂಥ ಬೃಹತ್ ಸಾರ್ವಜನಿಕ ಸಂಸ್ಥೆಯಲ್ಲಿ ಆಯುಕ್ತರಾಗಿ ಯಾವುದೇ ಆಕ್ಷೇಪ-ಆರೋಪಗಳಿಲ್ಲದೆ ವರ್ಷಗಟ್ಟಲೇ ಕೆಲಸ ಮಾಡಿದ ಅನುಭವಿ. ಹಿಂದಿನ ಸನ್ನಿವೇಶವನ್ನು ಬ್ಯಾಲೆನ್ಸ್ ಮಾಡಿದ ರೀತಿಯಲ್ಲೇ ಸೂಕ್ಷ್ಮವಾಗಿ ಕೊರೋನಾದಂಥ ಸಂಕೀರ್ಣ ಸಂದರ್ಭ ಟ್ಯಾಕಲ್ ಮಾಡುವ ಚಾಣಾಕ್ಷತೆ-ಚಾಕಚಕ್ಯತೆ ಎರಡೂ ಅವರಿಗಿದೆ.
ಸರ್ಕಾರ ಇದೇ ನಂಬಿಕೆಯಲ್ಲಿ ಅವರನ್ನು ಸಂಕೀರ್ಣ ಹಾಗೂ ಸಂಕಷ್ಟದ ಸಮಯದಲ್ಲಿ ಬಿಬಿಎಂಪಿಗೆ ನಿಯೋಜಿಸಿದೆ. ಮಂಜುನಾಥ್ ಪ್ರಸಾದ್ ಯಾವ್ ರೀತಿ ಒಟ್ಟಾರೆ ಸಂದರ್ಭವನ್ನು ಸಂಭಾಳಿಸುತ್ತಾರೆನ್ನುವುದು ಎಲ್ಲರಲ್ಲಿರುವ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ