• Home
  • »
  • News
  • »
  • coronavirus-latest-news
  • »
  • ‘ಕೆಕೆಆರ್​​​​ಡಿಬಿ‘ಯಿಂದ ವಿನೂತನ ಪ್ರಯತ್ನ - ಕೋವಿಡ್ ಸೋಂಕಿತರಿಗಾಗಿಯೇ ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ

‘ಕೆಕೆಆರ್​​​​ಡಿಬಿ‘ಯಿಂದ ವಿನೂತನ ಪ್ರಯತ್ನ - ಕೋವಿಡ್ ಸೋಂಕಿತರಿಗಾಗಿಯೇ ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ

ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ

ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ

ಕೆಕೆಆರ್​​ಡಿಬಿ ಕಛೇರಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಪ್ರಭಾರಿ ಹುದ್ದೆಗಳ ಮೂಲಕ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೇವೂರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

  • Share this:

ಕಲಬುರ್ಗಿ(ಆ.12): ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋವಿಡ್ ಸೋಂಕು ತೀವ್ರಗೊಂಡಿದೆ. ಈ ಭಾಗದ ಕೇಂದ್ರ ಸ್ಥಾನ ಕಲಬುರ್ಗಿ ಕೊರೋನಾ ಹಾಟ್​​ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಜೊತೆಗೆ ಇತರೆ ಜಿಲ್ಲೆಗಳಾದ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿಯೂ ಸೋಂಕು ತೀವ್ರಗೊಂಡಿದೆ. ಸೋಂಕಿತರ ಜೊತೆ ಸಾವಿನ ಸಂಖ್ಯೆಯೂ ದಿಢೀರ್ ಏರಿಕೆ ಕಂಡಿದೆ.


ಸದ್ಯ ಕೆಕೆಆರ್​​ಡಿಬಿ ವ್ಯಾಪ್ತಿಯಲ್ಲಿ ಬರೋ ಆರು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 32 ಸಾವಿರ ದಾಟಿದೆ. ಸಾವನ್ನಪ್ಪಿದವರ ಸಂಖ್ಯೆ 465ಕ್ಕೇರಿಕೆಯಾಗಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಬೇರೆ ಬೇರೆ ಕಾರಣಗಳಿಂದಾಗಿ ಕೋವಿಡ್ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರ ರಕ್ಷಣೆಗೆ ಮುಂದಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.


ಕಲಬುರ್ಗಿಯಲ್ಲಿರೋ ಕೆಕೆಆರ್​​ಡಿಬಿ ಕಛೇರಿಯಲ್ಲಿ ಕೋವಿಡ್-19 ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಕೆಕೆಆರ್​​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಆ್ಯಂಬುಲೆನ್ಸ್ ಸೌಲಭ್ಯ, ಥ್ರೋಟ್ ಸ್ಯಾಂಪಲ್ ಟೆಸ್ಟ್, ಬೆಡ್ ಲಭ್ಯತೆ, ಎಲ್ಲಿ ಚಿಕಿತ್ಸೆ ಸಿಗುವುದೆಂಬ ಇತ್ಯಾದಿ ಮಾಹಿತಿಯನ್ನು ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ.


ಸುರಕ್ಷಾ ಚಕ್ರ ಸಹಾಯವಾಣಿಗೆ ಕರೆ ಮಾಡಿದ ಅರ್ಧ ಗಂಟೆಯೊಳಗೆ ಅಗತ್ಯ ಮಾಹಿತಿ ಜೊತೆಗೆ, ಅಗತ್ಯ ಸೌಕರ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು. ದಿನದ 24 ತಾಸುಗಳ ಕಾಲ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಕೆಕೆಆರ್​​ಡಿಬಿ ಹಾಗೂ ಜಿಲ್ಲಾಧಿಕಾರಿ ಕಛೇರಿಗಳಿಂದಲೇ ಕೇಂದ್ರದ ಕಾರ್ಯಾಚರಣೆ ಮಾನಿಟರ್ ಮಾಡಬಹುದಾಗಿದೆ.


ಕೆಕೆಆರ್​​ಡಿಬಿ ಪ್ರಯತ್ನಕ್ಕೆ ಕಲಬುರ್ಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಗಳು ಕೈಜೋಡಿಸಿವೆ. ಸದ್ಯಕ್ಕೆ ಕಲಬುರ್ಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ದತ್ತಾತ್ರೇಯ ಪಾಟೀಲ ರೇವೂರ ಮಾಹಿತಿ ನೀಡಿದ್ದಾರೆ.


ಕೋವಿಡ್ ಸೋಂಕಿತರ ತುರ್ತು ಸೇವೆಗಾಗಿ ಅಡ್ವಾನ್ಸ್ ಲೈವ್ ಸಪೋರ್ಟ್ ಆ್ಯಂಬುಲೆನ್ಸ್ ಬೇಡಿಕೆ ಬಂದಿದೆ. ಕೆಕೆಆರ್​​​ಡಿಬಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಒಂದೊಂದು ಎಎಲ್ಎಸ್​​​ ಆ್ಯಂಬುಲೆನ್ಸ್ ಕೊಡಲಾಗುವುದು. ವೆಂಟಿಲೇಟರ್ ಸೇರಿದಂತೆ ಜೀವ ರಕ್ಷಕ ಸೌಲಭ್ಯಗಳು ಈ ಆ್ಯಂಬುಲೆನ್ಸ್​ನಲ್ಲಿ ಇರಲಿವೆ. ಶೀಘ್ರವೇ ಟೆಂಡರ್ ಕರೆಯಲಾಗುತ್ತಿದೆ. ಆದಷ್ಟು ಬೇಗ ಈ ಭಾಗದ ಆರೂ ಜಿಲ್ಲಾ ಕೇಂದ್ರಗಳಿಗೆ ಆ್ಯಂಬುಲೆನ್ಸ್ ಕಳುಹಿಸಿಕೊಡಲಾಗುವುದು ಎಂದು ದತ್ತಾತ್ರೇಯ ಪಾಟೀಲ ರೇವೂರ ಮಾಹಿತಿ ನೀಡಿದ್ದಾರೆ.


ಕೆಕೆಆರ್​​ಡಿಬಿ ಕಛೇರಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಪ್ರಭಾರಿ ಹುದ್ದೆಗಳ ಮೂಲಕ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೇವೂರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.


ಕಲಬುರ್ಗಿಯಲ್ಲಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಆರಂಭಿಸೋದಾಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ಹಾಗೂ ಹುಬ್ಬಳ್ಳಿಗಳಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರ ಆರಂಭಿಸಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: DJ Halli Violence - ನಾಳೆ ಬೆಳಗ್ಗೆ 6 ಗಂಟೆಯವರೆಗೂ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ


ಶೀಘ್ರವೇ ಕಲಬುರ್ಗಿಯಲ್ಲಿಯೂ ಪ್ಲಾಸ್ಮಾ ಥೆರಪಿ ಚಕಿತ್ಸೆ ಸಿಗಲಿದೆ ಎಂದರು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ದುಬಾರಿ ಬಿಲ್ ವಿಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಜಾಧವ್, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ಖಾಸಗಿ ಆಸ್ಪತ್ರೆ ಸರ್ಕಾರದ ಮಾರ್ಗಸೂಚಿ ಮೀರಿ ಹೆಚ್ಚಿನ ದರ ವಿಧಿಸುವಂತಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಮೇಶ್ ಜಾಧವ್ ತಿಳಿಸಿದರು.

Published by:Ganesh Nachikethu
First published: