ಬೆಂಗಳೂರು(ಜು.12): ಕೊರೋನಾ ಸಂಕಷ್ಟದಲ್ಲಿ ಹಲವು ಉದ್ಯಮಗಳು ಮುಚ್ಚುತ್ತಿದ್ದರೆ, ರಾಜ್ಯದಲ್ಲಿ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹಾಲಿನ ಉತ್ಪಾದನೆಯಲ್ಲಿ ದಾಖಲೆ ಬರೆದಿದೆ. ಕೆಎಂಎಫ್ ಇತಿಹಾಸದಲ್ಲಿ ಅತಿ ಹೆಚ್ಚು ಉತ್ಪಾದನೆ ಈ ಬಾರಿ ಆಗಿದೆ. ಇದೀಗ ಹೆಚ್ಚುವರಿ ಹಾಲು ಮಾರಾಟ ಮಾಡುವುದೇ ಕೆಎಂಎಫ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೋವಿಡ್ -19 ಕೊರೋನಾ ಸಂಕಷ್ಟದಲ್ಲಿ ಜನರು ಬದುಕುವುದು ಕಷ್ಟವಾಗಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿದ್ದು ಆಸ್ಪತ್ರೆಯಲ್ಲಿ ಬೆಡ್ ಸಿಗದ ಪರಿಸ್ಥಿತಿಯಿದೆ. ಇದರಿಂದಾಗಿ ರಾಜ್ಯದಲ್ಲಿ ಸ್ವಯಂ ಲಾಕ್ ಡೌನ್ ಹೆಚ್ಚಾಗುತ್ತಿದ್ದು, ಹಲವು ಉದ್ಯಮಗಳು ತಮಗೆ ತಾವೇ ಬಂದ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೊರೋನಾ ಸಂಕಷ್ಟದಲ್ಲಿಯೂ ಹೈನುಗಾರಿಕೆ ರಾಜ್ಯದಲ್ಲಿ ಭಾರೀ ಸಾಧನೆ ಮಾಡಿದೆ. ಹಿಂದೆಂದೂ ಆಗದ ರೀತಿ ಕರ್ನಾಟಕದಲ್ಲಿ ಕ್ಷೀರಕ್ರಾಂತಿಯಾಗಿದೆ.
ಕರ್ನಾಟಕದ ಇತಿಹಾಸದಲ್ಲಿಯೇ ಗರಿಷ್ಠ ಉತ್ಪಾದನೆಯಾಗಿರುವುದು ಕೊರೋನಾ ಸಂಕಷ್ಟದಲ್ಲಿ ಎಂದರೆ ನೀವು ನಂಬಲೇಬೇಕು. ದಿನವೊಂದಕ್ಕೆ ಬರೋಬ್ಬರಿ 88 ಲಕ್ಷ ಹಾಲು ಉತ್ಪಾದನೆಯಾಗಿದೆ. ಕೊರೋನಾ ಮುಂಚೆ ಮಾರ್ಚ್ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ 68 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ 80 ಲಕ್ಷ ಲೀಟರ್ ವರೆಗೆ ಹಾಲು ಉತ್ಪಾದನೆ ಇರುತ್ತಿತ್ತು. ಆದರೆ ಜುಲೈ ತಿಂಗಳ ಆರಂಭದಲ್ಲಿ ಅತಿ ಹೆಚ್ಚು ದಿನವೊಂದಕ್ಕೆ 88.2 ಲಕ್ಷ ಲೀಟರ್ ಉತ್ಪಾದನೆಯಾಗಿದೆ.
ಕೆಎಂಎಫ್ ಇತಿಹಾಸದಲ್ಲಿ ಇದು ರೆಕಾರ್ಡ್ ಬ್ರೇಕ್ ಹಾಲು ಉತ್ಪಾದನೆಯಾಗಿದೆ. ಸಹಜವಾಗಿ ಸುಗ್ಗಿ ಕಾಲದಲ್ಲಿ ಹಾಲು ಉತ್ಪಾದನೆ ಹೆಚ್ಚಳವಿರುತ್ತದೆ. ಆದರಿದು ಎಲ್ಲ ವರ್ಷಗಳ ಹಾಲು ಉತ್ಪಾದನೆಗಿಂತ ಹೆಚ್ಚು. ಇದುವರೆಗೆ 2018ರಲ್ಲಿ ಗರಿಷ್ಟ 84 ಲಕ್ಷ ಹಾಲು ಉತ್ಪಾದನೆಯಾಗಿತ್ತು. ಅದುವೇ ಒಂದು ದಿನದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ದಾಖಲೆಯಿತ್ತು ಎಂದು ಕೆ ಎಂ ಎಫ್ ಎಂಡಿ ಸತೀಶ್ ಮಾಹಿತಿ ನೀಡುತ್ತಾರೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆರಾಯನ ಆರ್ಭಟ; ನೂರಾರು ಮನೆಗಳಿಗೆ ನುಗ್ಗಿದ ಚರಂಡಿ ನೀರು
ಹೆಚ್ಚಿನ ಹಾಲು ಉತ್ಪಾದನೆಗೆ ಕಾರಣವಾಯ್ತು ಲಾಕ್ ಡೌನ್!
ಹಾಲು ಹೆಚ್ಚಿನ ಉತ್ಪಾದನೆ ಲಾಕ್ ಡೌನ್ ಸಹ ಕಾರಣವಾಗಿದೆ. ಲಾಕ್ ಡೌನ್ ನಿಂದ ಬೆಂಗಳೂರು ಮಹಾನಗರಿ ಸೇರಿದಂತೆ ರಾಜ್ಯದ ಪಟ್ಟಣದ ಜನರೆಲ್ಲ ತಮ್ಮೂರು ಸೇರುತ್ತಿದ್ದಾರೆ. ಕೆಲಸವಿಲ್ಲದೆ ಪಟ್ಟಣವಾಸಿಗಳು ತಮ್ಮ ಹಳ್ಳಿ ಕಡೆ ಪಯಣ ಬೆಳೆಸಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕ್ಷೀರ ಕ್ರಾಂತಿಯಾಗಿದೆ. ಐಟಿ-ಬಿಟಿ- ಉದ್ಯೋಗಿಗಳು ಫಾರ್ಮ್ ನಡೆಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸ್ವಯಂ ಉದ್ಯೋಗದ ಕಡೆ ಯುವಜನತೆ ಆಸಕ್ತಿ ವಹಿಸಿದ್ದಾರೆ.
ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಳ ತಂದ ತಲೆನೋವು ಶುರುವಾಗಿದೆ. ಈ ಮೊದಲು 12 ಲಕ್ಷ ಹಾಲು ನೆರೆ ರಾಜ್ಯಗಳಿಗೆ ಸರಬರಾಜು ಆಗ್ತಿತ್ತು. ಅದರಲ್ಲೂ ಮಹಾರಾಷ್ಟ್ರಕ್ಕೆ ದಿನನಿತ್ಯ ಎರಡೂವರೆ ಲಕ್ಷ ಹಾಲು ಸರಬರಾಜು ಆಗ್ತಿತ್ತು. ತುಮಕೂರು ಡೈರಿಯಿಂದ ಇದೀಗ ಮಹಾರಾಷ್ಟ್ರದ ಮುಂಬೈಗೆ 25 ಸಾವಿರ ಹಾಲಿನ ಲೀಟರ್ ಸರಬರಾಜು ಆಗ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಹಾಲು ಸರಬರಾಜು ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ