ಕೊರೋನಾ ಆರ್ಭಟದಲ್ಲಿ ನಡೆಯದ ಅಂಗಾಂಗ ಕಸಿ ; ಶಸ್ತ್ರ ಚಿಕಿತ್ಸೆಗಾಗಿ ಕಾಯುತ್ತಿರುವ ಸಾವಿರಾರು ರೋಗಿಗಳು

ಕೊರೋನಾ ವೈರಸ್ ಬಗ್ಗೆಯೇ ಹೆಚ್ಚಿನ ಮಾಹಿತಿ ಇಲ್ಲದಿರುವಾಗ ಅಂಗಗಳನ್ನು ಪಡೆಯುವುದು ಮತ್ತು ನೀಡುವುದು ಎರಡೂ ಬಹಳ ಅಪಾಯಕಾರಿಯಾಗಬಹುದು. ಹಾಗಾಗಿ ಸದ್ಯದ ಮಟ್ಟಿಗೆ ಅಂಗಾಂಗ ಕಸಿ ಸಂಪೂರ್ಣ ನಿಂತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ. 03) : ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ಬದಲಿ ಅಂಗಗಳಿಗೆ ಕಾಯುತ್ತಿರುವ ಸಾವಿರಾರು ರೋಗಿಗಳ ಸರದಿ ಸಾಲು ಮತ್ತಷ್ಟು ಉದ್ದವಾಗಿದೆ. ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಬಹಳ ಸೂಕ್ಷ್ಮ ಸರ್ಜರಿ. ಸರ್ಜರಿಯ ಮೊದಲು ಮತ್ತು ನಂತರ ಬಹಳ ನಾಜೂಕಾಗಿ ರೋಗಿಯನ್ನು ನೋಡಿಕೊಳ್ಳಬೇಕಾಗುತ್ತದೆ.‌ ಅಲ್ಲದೇ ಚಿಕಿತ್ಸೆ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಹಾಗಾಗಿ ಕಾಡ್ಚಿಚ್ಚಿನಂತೆ ಹರಡುತ್ತಿರುವ ಕೊರೋನಾ ಸೋಂಕಿನ ಸಂದರ್ಭದಲ್ಲಿ ಇದು ಸುರಕ್ಷಿತವಲ್ಲ ಎಂದು ನಿರ್ಧರಿಸಲಾಗಿದೆ.

ಬದಲಿ ಅಂಗಗಳ‌ ಅವಶ್ಯಕತೆ ಇರುವ ರೋಗಿಗಳು ಕರ್ನಾಟಕದಲ್ಲಿ ಜೀವಸಾರ್ಥಕತೆ ಎನ್ನುವ ಸಂಸ್ಥೆಯ ಮೂಲಕ ಇದನ್ನು ಪಡೆಯಬಹುದು. ಕಳೆದ 4 ತಿಂಗಳಿನಿಂದ ಇಲ್ಲಿಗೆ ಒಂದೇ ಒಂದು ಹೊಸಾ ದಾನಿಯ ಹೆಸರು ನೋಂದಣಿಯಾಗಿಲ್ಲ. ರಸ್ತೆ ಅಪಘಾತಗಳಲ್ಲಿ ಬ್ರೇನ್ ಡೆಡ್ ಆದವರ ಅಂಗಗಳನ್ನು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಅವಶ್ಯಕತೆ ಇರುವ ರೋಗಿಗಳಿಗೆ ನೀಡಲಾಗುತ್ತದೆ. ಆದರೆ, ಕೊರೋನಾ ವೈರಸ್ ಬಗ್ಗೆಯೇ ಹೆಚ್ಚಿನ ಮಾಹಿತಿ ಇಲ್ಲದಿರುವಾಗ ಅಂಗಗಳನ್ನು ಪಡೆಯುವುದು ಮತ್ತು ನೀಡುವುದು ಎರಡೂ ಬಹಳ ಅಪಾಯಕಾರಿಯಾಗಬಹುದು. ಹಾಗಾಗಿ ಸದ್ಯದ ಮಟ್ಟಿಗೆ ಅಂಗಾಂಗ ಕಸಿ ಸಂಪೂರ್ಣ ನಿಂತಿದೆ.

ಮೊದಲೆಲ್ಲಾ ತಿಂಗಳಿಗೆ ಸರಾಸರಿ 300 ನೋಂದಣಿ ಆಗುತ್ತಿತ್ತು. ಕೊರೋನಾ ಕೇಕೆ ಶುರುವಾದ ನಂತರ ತಿಂಗಳಿಗೆ 10-20 ನೋಂದಣಿಗಳು ಮಾತ್ರ ಆಗುತ್ತಿವೆ ಎನ್ನುತ್ತಾರೆ ಜೀವಸಾರ್ಥಕತೆ ಅಧಿಕಾರಿಗಳು.

ಕೊರೋನಾ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ತಿಳಿದು ನೋಂದಣಿ ಮಾಡಿಕೊಳ್ಳುವುದನ್ನು ಜನ ಕೂಡಾ ಮುಂದೂಡುತ್ತಿದ್ದಾರೆ.

ಇದನ್ನೂ ಓದಿ :  Coronavirus India : ದೇಶದಲ್ಲಿ 2 ಲಕ್ಷ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ಬ್ರೇನ್ ಡೆಡ್ ಆದ ವ್ಯಕ್ತಿಯಿಂದ ಹೃದಯ, ಲಿವರ್, ಕಣ್ಣು, ಪ್ಯಾಂಕ್ರಿಯಾಸ್, ಚರ್ಮ, ರಕ್ತನಾಳ, ಕಿಡ್ನಿಗಳನ್ನು ಕಸಿ ಮಾಡಬಹುದು. ಆದರೆ, ಯಾವಾಗಲೂ ಮೂತ್ರಪಿಂಡ ಕಸಿಗಾಗಿ ಕಾಯುವವರ ಸಂಖ್ಯೆಯೇ ಎಲ್ಲಕ್ಕಿಂತ ಹೆಚ್ಚಾಗಿರುತ್ತದೆ. ನಿರಂತರ ಡಯಾಲಿಸಿಸ್ ಮೇಲೆ ಇರುವ ಇವರು ಬದಲಿ ಕಿಡ್ನಿಗಾಗಿ ವರ್ಷಗಟ್ಟಲೆ ಕಾಯುತ್ತಿರುತ್ತಾರೆ. ಈ ಕಾಯುವಿಕೆ ಮತ್ತಷ್ಟು ಸಮಯ ಮುಂದುವರಿಯುವ ಸಾಧ್ಯತೆಯಿದೆ. ಕೊರೋನಾ ಸೋಂಕಿನ ಸಮಸ್ಯೆ ಹತೋಟಿಗೆ ಬರುವವರಗೆ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
First published: