Health Tips: ಗರ್ಭಿಣಿಯರಲ್ಲಿ ಹೆಚ್ಚಾಗ್ತಿದೆ ಕೋವಿಡ್ ಸೋಂಕು; ತಪ್ಪದೇ ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ

ಹೆಚ್ಚಿನ ವೈದ್ಯರುಗಳು ಕೋವಿಡ್-ಪಾಸಿಟಿವ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿದ್ದು ಅವರಿಗೂ ಸೋಂಕು ತಗುಲಿದೆ. ವೈದ್ಯರುಗಳು ಮನೆಯಲ್ಲೇ ಐಸೋಲೇಟ್ ಆಗಿದ್ದು ಸೌಮ್ಯ ರೋಗ ಲಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್ ಪಾಸಿಟಿವ್ (COVID Positive Cases)ಪ್ರಕರಣಗಳು ಗರ್ಭಿಣಿಯರಲ್ಲಿ ಏರಿಕೆಯಾಗುತ್ತಿದ್ದು ಗರ್ಭಿಣಿಯರು(Pregnant Women) ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂಬುದಾಗಿ ಸ್ತ್ರೀರೋಗತಜ್ಞರು ಸಲಹೆ ನೀಡಿದ್ದಾರೆ. ಇತರ ಕೋವಿಡ್ ಪ್ರಕರಣಗಳಂತೆಯೇ ಹೆಚ್ಚಿನ ಗರ್ಭಿಣಿಯರು ಮೇಲ್ಭಾಗದ ಶ್ವಾಸೇಂದ್ರಿಯ ಭಾಗಗಳಲ್ಲಿ ಸೌಮ್ಯ ರೋಗ ಲಕ್ಷಣಗಳನ್ನು(Mild Symptoms) ಹೊಂದಿದ್ದಾರೆ ವರದಿಯಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ(Vani Vilas Hospital) 12ಕ್ಕಿಂತ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿವೆ ಎಂಬುದಾಗಿ ದಾಖಲಾಗಿದೆ. ಪ್ರಸ್ತುತ ಹೊಸ ರೂಪಾಂತರವು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ವೈದ್ಯರಿಗೂ ಸೋಂಕು ತಗುಲಿದ್ದು ವರದಿಯಾಗಿದೆ.

ಗರ್ಭಿಣಿಯರನ್ನು ತಪಾಸಣೆ ಮಾಡಿರುವ ವೈದ್ಯರಿಗೂ ಹರಡಿದ ಸೋಂಕು:

14ಕ್ಕಿಂತ ಹೆಚ್ಚಿನ ವೈದ್ಯರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಇದು ಡೆಲ್ಟಾ ರೂಪಾಂತರವೇ ಅಥವಾ ಓಮಿಕ್ರಾನ್ ರೂಪಾಂತರವೇ ಎಂಬುದು ನಮಗೆ ತಿಳಿದಿಲ್ಲ. ಹೆಚ್ಚಿನ ವೈದ್ಯರುಗಳು ಕೋವಿಡ್-ಪಾಸಿಟಿವ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿದ್ದು ಅವರಿಗೂ ಸೋಂಕು ತಗುಲಿದೆ. ವೈದ್ಯರುಗಳು ಮನೆಯಲ್ಲೇ ಐಸೋಲೇಟ್ ಆಗಿದ್ದು ಸೌಮ್ಯ ರೋಗ ಲಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ ಎಂಬುದಾಗಿ ವಾಣಿ ವಿಲಾಸ್ ಆಸ್ಪತ್ರೆಯ ಒಬಿಜಿ ವಿಭಾಗದ ಹಿರಿಯ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಪ್ರತಿಯೊಬ್ಬರಿಗೂ ತಗುಲುತ್ತೆ Omicron, ಬೆಂಗಳೂರಿನಲ್ಲಿ ಪವರ್ ಕಟ್, ಬೆಳಗಿನ ಟಾಪ್ ನ್ಯೂಸ್​ಗಳು

ಮಹಿಳೆಯರು ಹಾಗೂ ಮಕ್ಕಳಲ್ಲಿ ಏರಿಕೆಯಾಗುತ್ತಿರುವ ಸೋಂಕು:

ಮಹಿಳೆಯರು ಹಾಗೂ ಮಕ್ಕಳಲ್ಲಿ ಪ್ರಕರಣಗಳು ಏರಿಕೆಯಾಗುತ್ತಿರುವುದಾಗಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ ಹಾಗೂ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಆಸ್ಪತ್ರೆ ಹಾಗೂ ಘೌಸಿ ಹೆರಿಗೆ ಆಸ್ಪತ್ರೆ ಸೇರಿ ಎರಡು ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳೆಂದು ಘೋಷಿಸಲಾಗಿದೆ.

ಪೋಷಕಾಂಶ ಭರಿತ ಆಹಾರ ಸೇವನೆ:

ಆ್ಯಸ್ಟರ್ ಆರ್‌ವಿ ಆಸ್ಪತ್ರೆಯ ಸಮಾಲೋಚಕರು, ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರಾದ ಡಾ. ಸ್ಮೃತಿ ಡಿ. ನಾಯಕ್ ಹೇಳುವಂತೆ ಕಳೆದ ಒಂದು ವಾರದಿಂದ 10 ರಿಂದ 15 ಗರ್ಭಿಣಿಯರು ಕೋವಿಡ್‌ಗೆ ತುತ್ತಾಗಿದ್ದು ಹೆಚ್ಚಿನ ರೋಗಿಗಳು ಪ್ರಯಾಣ ಇತಿಹಾಸವನ್ನು ಹೊಂದಿದ್ದಾರೆ. ಹೆಚ್ಚಿನ ಗರ್ಭಿಣಿಯರು ಶೀತ, ಗಂಟಲು ನೋವಿನಿಂದ ಬಳಲುತ್ತಿದ್ದಾರೆ. ಇನ್ನು ಕೆಲವರಲ್ಲಿ ಜ್ವರದ ಲಕ್ಷಣ ಕಂಡುಬಂದಿದೆ. ಇನ್ನು ಐಸಿಯು ಅಗತ್ಯವಿರುವ ಗಂಭೀರ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಇದುವರೆಗೆ ಪತ್ತೆಯಾಗಿಲ್ಲ.

ಕೋವಿಡ್-19 ಪಾಸಿಟಿವ್ ಆಗಿರುವ ಗರ್ಭಿಣಿಯರು ಈ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗಬಾರದು ಹಾಗೂ ಮಗುವಿನ ಚಲನವಲನಗಳ ಮೇಲೆ ನಿಗಾವಹಿಸಬೇಕು. ಅಂತೆಯೇ ಸಮಯಕ್ಕೆ ಸರಿಯಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು. ಹಾಗೂ, ರಕ್ತಸ್ರಾವ, ವಾಟರ್ ಲೀಕ್ ಇಲ್ಲವೇ ಭ್ರೂಣದ ಚಲನವಲನಗಳಲ್ಲಿ ಇಳಿಕೆ ಕಂಡುಬಂದರೆ ಸ್ತ್ರೀ ರೋಗತಜ್ಞರನ್ನು ಕಾಣಬೇಕು ಎಂಬುದಾಗಿ ಸ್ಮೃತಿ ನಾಯಕ್ ತಿಳಿಸಿದ್ದಾರೆ.

ಪೋಷಕಾಂಶ ಭರಿತ ಆಹಾರಗಳನ್ನು ಗರ್ಭಿಣಿಯರು ಈ ಸಮಯದಲ್ಲಿ ಸೇವಿಸಬೇಕು ಹಾಗೂ ಗರ್ಭಿಣಿಯರು ಇರುವ ಕೊಠಡಿಯಲ್ಲಿ ಚೆನ್ನಾಗಿ ಗಾಳಿ ಬೆಳಕು ಆಡುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಅವರು ಹೆಚ್ಚು ಸಕ್ರಿಯರಾಗಿರಬೇಕು ಎಂಬುದಾಗಿಯೂ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:Omicron: ಬೂಸ್ಟರ್ ಡೋಸ್ ತಗೊಂಡ್ರೂ ಬಿಡಲ್ಲ ಈ ಓಮೈಕ್ರಾನ್​, ಎಲ್ಲರನ್ನೂ ಕಾಡುತ್ತೆ ಅಂತಿದ್ದಾರೆ ತಜ್ಞರು

ಸೌಮ್ಯ ರೋಗಲಕ್ಷಣಗಳು ಪತ್ತೆ:

ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಮಾತೃತ್ವ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಮಂಜುಳ ಎಸ್. ಪಾಟೀಲ್ ಕಳೆದ ಒಂದು ವಾರದಲ್ಲಿ 8 ಗರ್ಭಿಣಿಯರಿಗೆ ಕೋವಿಡ್ ಪಾಸಿಟಿವ್ ಇರುವುದನ್ನು ಖಾತ್ರಿಪಡಿಸಿದ್ದಾರೆ.

ಸೋಂಕಿತ ಗರ್ಭಿಣಿಯರು ತಮ್ಮ ಮೊದಲ ಹಾಗೂ ಎರಡನೇ ತ್ರೈಮಾಸಿಕದಲ್ಲಿದ್ದು, ಸೋಂಕು ಎಲ್ಲಾ ಮೂರೂ ತ್ರೈಮಾಸಿಕದಲ್ಲಿರುವ ಗರ್ಭಿಣಿಯರಿಗೂ ಹರಡಿದೆ. ಆದರೆ ಒಂದು ಸಮಾಧಾನಕರ ಸಂಗತಿ ಎಂದರೆ ಎಲ್ಲಾ ಗರ್ಭಿಣಿಯರು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಹಾಗೂ ಮನೆಯಲ್ಲಿಯೇ ಇದ್ದು ಚೇತರಿಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸರಕಾರದ ಆದೇಶಗಳ ಪ್ರಕಾರ ಸೌಮ್ಯ ರೋಗ ಲಕ್ಷಣಗಳಿರುವ ಗರ್ಭಿಣಿಯರು ಮನೆಯಲ್ಲಿಯೇ 7 ದಿನಗಳ ಕಾಲ ಪ್ರತ್ಯೇಕವಾಗಿರುವಂತೆ ನಾವು ತಿಳಿಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯಕೀಯ ತಂಡವು ರೋಗಿಗಳ ನಿರಂತರ ಸಂಪರ್ಕದಲ್ಲಿದ್ದು ಅವರ ಆರೋಗ್ಯದ ಮೇಲೆ ನಿಗಾ ಇರಿಸುತ್ತಿದೆ. ಉಸಿರಾಟ ಸಮಸ್ಯೆ, ದೇಹದ ಉಷ್ಣಾಂಶದಲ್ಲಿ ಏರಿಕೆ ಮೊದಲಾದ ಎಚ್ಚರಿಕೆಯ ಚಿಹ್ನೆ ಇರುವವರು ವೈದ್ಯರನ್ನು ತುರ್ತಾಗಿ ಕಾಣಬೇಕು ಎಂಬುದಾಗಿ ತಿಳಿಸಲಾಗಿದೆ. ಇನ್ನು ಕೋವಿಡ್ ಇಲ್ಲದ ಗರ್ಭಿಣಿಯರು ಕೂಡ ತಮ್ಮನ್ನು ಸ್ವಯಂ ರಕ್ಷಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಜುಳಾ ತಿಳಿಸಿದ್ದಾರೆ. ಸಾಧ್ಯವಾದಷ್ಟು ತಮ್ಮ ವೈದ್ಯರ ಸಂಪರ್ಕದಲ್ಲಿದ್ದು ಆನ್‌ಲೈನ್ ಸಮಾಲೋಚನೆಯನ್ನು ಸಾಧ್ಯವಾದಷ್ಟು ಆರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

  
Published by:Latha CG
First published: