ಬೆಂಗಳೂರು(ಜೂ.22): ಈಗಾಗಲೇ ಭಯಾನಕ ರೂಪಾಂತರಿ ವೈರಸ್ ದೇಶದಲ್ಲಿ ಹಬ್ಬಲು ಶುರುವಾಗಿದೆ. ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಈ ಭಯಾನಕ ವೈರಸ್ ರಾಜ್ಯಕ್ಕೂ ಕಾಲಿಟ್ಟಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದು, ಕರ್ನಾಟಕದಲ್ಲಿ ಯಾವುದೇ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಇನ್ನು, ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ, ಮೈಸೂರಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತವು ಕೊರೋನಾ 2ನೇ ಅಲೆಯ ವಿರುದ್ಧ ಹೋರಾಡುತ್ತಿರುವ ಸಮಯದಲ್ಲೇ, ಡೆಲ್ಟಾ ರೂಪಾಂತರಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಆದರೆ ರೂಪಾಂತರಿ ವೈರಸ್ ಈಗ ಎಲ್ಲೆಡೆ ಹಬ್ಬಲು ಶುರುವಾಗಿದೆ. ಈವರೆಗೆ ಕೇರಳ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
ಭಾರತದಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಈವರೆಗೆ 21 ಡೆಲ್ಟಾ ಪ್ಲಸ್ ರೂಪಾಂತರಿ ಕೇಸ್ಗಳು ಕಾಣಿಸಿಕೊಂಡಿವೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ತೋಪ್ ಹೇಳಿದ್ದಾರೆ. ಇವುಗಳಲ್ಲಿ 9 ಪ್ರಕರಣಗಳು ಜಲ್ಗಾನ್ನಲ್ಲಿ, 7 ಪ್ರಕರಣಗಳು ಮುಂಬೈನಲ್ಲಿ ಮತ್ತು ಒಂದೊಂದು ಪ್ರಕರಣಗಳು ಸಿಂದುದರ್ಗ್, ಥಾಣೆ ಮತ್ತು ಪಾಲ್ಗಾರ್ ಜಿಲ್ಲೆಗಳಲ್ಲಿ ಪತ್ತೆಯಾಗಿವೆ ಎಂದು ತೋಪ್ ತಿಳಿಸಿದ್ದಾರೆ.
ಇದನ್ನೂ ಓದಿ:National Kissing Day 2021: ಮುತ್ತಿಗೂ ಒಂದು ದಿನ ಇದೆಯಂತೆ..!; ಇಂದು ನ್ಯಾಷನಲ್ ಕಿಸ್ಸಿಂಗ್ ಡೇ
ಪ್ರತಿಯೊಂದು ಜಿಲ್ಲೆಯಲ್ಲೂ 100 ಸ್ಯಾಂಪಲ್ಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕಳೆದ ಮೇ 15ರಿಂದ 7,500 ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 21 ಕೇಸ್ಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಂಡು ಬಂದಿದೆ ಎಂದು ತೋಪ್ ತಿಳಿಸಿದ್ದಾರೆ. ಸೋಂಕಿತರ ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಅವರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗಿದೆ ಎಂದು ಹೇಳಿದರು.
ಕೇರಳದಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಸಂಗ್ರಹಿಸಲಾದ ಸ್ಯಾಂಪಲ್ಗಳಲ್ಲಿ ಪಲಕ್ಕಾಡ್ ಮತ್ತು ಪತನಮಿತ್ತ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇರಳ ಸರ್ಕಾರದ ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಲಕ್ಕಾಡ್ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದ್ದರೆ, ಪತನಮಿತ್ತ ಜಿಲ್ಲೆಯಲ್ಲಿ ಒಂದು ಕೇಸ್ ಪತ್ತೆಯಾಗಿದೆ. 4 ವರ್ಷದ ಬಾಲಕನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ಪತನಮಿತ್ತ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ನರಸಿಂಹಹುಗಾರಿ ಟಿ.ಎಲ್.ರೆಡ್ಡಿ ತಿಳಿಸಿದ್ದಾರೆ.
ಭಾರತದಲ್ಲಿ ಮೊದಲ ಬಾರಿಗೆ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣ ಪತ್ತೆಯಾಗಿದ್ದು ಮಧ್ಯಪ್ರದೇಶದಲ್ಲಿ. ಭೂಪಾಲ್ನ 65 ವರ್ಷದ ಮಹಿಳೆಯಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿತ್ತು. ಇವರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಹೋಂ ಐಸೋಲೇಷನ್ನಲ್ಲಿದ್ದರು. ಜೊತೆಗೆ ಎರಡು ಡೋಸ್ ವ್ಯಾಕ್ಸಿನ್ ಕೂಡ ಪಡೆದಿದ್ದರು. ಮೇ 23ರಂದು ಮಹಿಳೆಯ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿತ್ತು. ಜೂನ್ 16ರಂದು ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪಾಸಿಟಿವ್ ಬಂದಿತ್ತು.
ಇದನ್ನೂ ಓದಿ:Delta Plus Variant in India: ಮೂರು ರಾಜ್ಯಗಳಲ್ಲಿ ಭಯಾನಕ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆ
ಜೂನ್ 17ರಂದು ಮಹಿಳೆಗೆ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿತ್ತು. ಆದರೆ ಆ ಸೋಂಕಿತೆ ಮಾಹಿತಿ ನೀಡಲು ನಿರಾಕರಿಸಿದರು ಎಂದು ಮಧ್ಯಪ್ರದೇಶದ ವೈದ್ಯಕೀಯ ಶೈಕ್ಷಣಿಕ ಸಚಿವ ವಿಶ್ವಾಸ್ ಸಾರಂಗ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಶಿವಪುರಿ ಜಿಲ್ಲೆಯಲ್ಲಿ ನಾಲ್ಕು ಮಂದಿಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. ಎಲ್ಲರೂ ಸಹ ವ್ಯಾಕ್ಸಿನ್ ಪಡೆದಿದ್ದು, ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ