ಬೆಂಗಳೂರು(ಮಾ.27) : ಕೊರೋನಾ ಸೋಂಕು ತಗುಲಿದ ಶಂಕೆಯ ಮೇರೆಗೆ ಕ್ವಾರಂಟೈನ್ ಗೆ ಒಳಗಾಗಿರುವವರ ಮನೆಯ ಸುತ್ತ ಪೊಲೀಸ್ ಭದ್ರತೆ ನಿಯೋಜಿಸಬೇಕು. ಕರ್ಫ್ಯೂ ನೆಪವಾಗಿಟ್ಟುಕೊಂಡು ಸೇವೆ ಸ್ಥಗಿತಗೊಳಿಸಿದ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳು ಬಾಗಿಲು ತೆರೆಯಬೇಕು. ಇಲ್ಲವಾದರೆ ಅವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಖಾತೆಯಲ್ಲಿ 9 ಕೋಟಿ ಲಭ್ಯವಿದೆ. ವೆಂಟಿಲೇಟರ್, ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ಕಿಟ್ಗಳ ಪೂರೈಕೆ ಮಾಡಲಾಗುತ್ತಿದೆ. ಸೋಂಕು ಪೀಡಿತರ ಚಿಕಿತ್ಸೆಗೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆಯ ಪಕ್ಕದ ನೂತನ ಕಟ್ಟಡವನ್ನು ಬಳಸಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಳ್ಳಲಿದೆ.
ಕೊರೋನಾ ಸೋಂಕಿತರ ಚಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಹೋಮ್ ಕ್ವಾರಂಟೀನ್ನಲ್ಲಿ ಇರುವವರನ್ನು ಮನೆ ಖಾಲಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗೆ ಕೊರೋನಾ ವಿರುದ್ಧ ಹೋರಾಡುತ್ತಿರುವವರ ಮನೆ ಖಾಲಿ ಮಾಡಲು ಮಾಲೀಕರು ಒತ್ತಾಯಿಸುವುದು ಅಮಾನವೀಯ. ಇದನ್ನು ಗಂಭೀರ ಸ್ವರೂಪದ ಅಪರಾಧ ಎಂದು ಪರಿಗಣಿಸಿ ಮನೆ ಮಾಲೀಕರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ :
ಕೊರೋನಾ ನಿಗ್ರಹ ಹೋರಾಟ ಬೆಂಬಲಿಸಿ ಮೂರು ತಿಂಗಳ ವೇತನ ನೀಡಿದ ಶಾಸಕ ಯತ್ನಾಳ್
ಕೊರೋನಾ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಆಸ್ಪತ್ರೆ ಸೇರಿ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ನೀಡುವ ಹೊಣೆ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ಗಳ ಮೇಲೆಯೂ ಇದೆ. ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಯತ್ನಿಸಿದರೆ ದಂಡ ವಿಧಿಸಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ