• Home
  • »
  • News
  • »
  • coronavirus-latest-news
  • »
  • ಕಡಿಮೆ ಅವಧಿ ಹಾಗೂ ವೆಚ್ಚದಲ್ಲಿ ಕೋವಿಡ್-19 ಪರೀಕ್ಷೆ ನಡೆಸಲು ಕ್ರಮ: ಶ್ರೀರಾಮುಲು

ಕಡಿಮೆ ಅವಧಿ ಹಾಗೂ ವೆಚ್ಚದಲ್ಲಿ ಕೋವಿಡ್-19 ಪರೀಕ್ಷೆ ನಡೆಸಲು ಕ್ರಮ: ಶ್ರೀರಾಮುಲು

ಹಾಸನ ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಶ್ರೀರಾಮುಲು

ಹಾಸನ ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಶ್ರೀರಾಮುಲು

ಈವರೆಗೆ ಕೊರೋನಾ ಸೋಂಕು ತಡೆ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಿದ್ದು ಮುಂದಿನ ಕೆಲವು ತಿಂಗಳೂ ಇದೇ ರೀತಿಯ ಸಹಕಾರ ನಿರೀಕ್ಷೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

  • Share this:

ಹಾಸನ: ಜಿಲ್ಲೆಗಳಲ್ಲಿ ಕಡಿಮೆ ಅವಧಿ ಹಾಗೂ ವೆಚ್ಚದಲ್ಲಿ ಕೋವಿಡ್ 19 ಪರೀಕ್ಷೆ ನಡೆಸುವ ಕುರಿತು ಸರ್ಕಾರ ಸೂಕ್ತ ಕ್ರಮವಹಿಸುತ್ತಿದ್ದು ಎಲ್ಲಾ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರು ತಿಳಿಸಿದ್ದಾರೆ.


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಸಿದ ಸಚಿವರು, ಕೊರೊನಾ ತಪಾಸಣೆ ಹಾಗೂ ಚಿಕಿತ್ಸೆಗೆ ಸುಧಾರಿತ ಕ್ರಮಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.


ಈವರೆಗೆ ಕೊರೋನಾ ಸೋಂಕು ತಡೆ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಿದ್ದು ಮುಂದಿನ ಕೆಲವು ತಿಂಗಳೂ ಇದೇ ರೀತಿಯ ಸಹಕಾರ ನಿರೀಕ್ಷೆ ಮಾಡುವುದಾಗಿ ಅವರು ತಿಳಿಸಿದರು.


ರಾಜ್ಯದಲ್ಲಿ ಲಾಕ್‍ಡೌನ್ ವೇಳೆ ಕಟ್ಟುನಿಟ್ಟಿನ ನಿಯಮ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡ ಕಾರಣ ಕೋವಿಡ್-19 ನಿಯಂತ್ರಣದಲ್ಲಿದೆ ಎಂದು ಹೇಳಿದ ಅವರು, ಲಾಕ್‍ಡೌನ್ ಕಾರಣದಿಂದ ರಕ್ತನಿಧಿಯಲ್ಲಿ ರಕ್ತ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ಆಸಕ್ತರು ಹೆಲ್ಪ್​ಲೈನ್ ಸಂಖ್ಯೆಗೆ ಕರೆ ಮಾಡಿದರೆ ಅವರಿದ್ದ ಜಾಗಕ್ಕೆ ಹೋಗಿ ರಕ್ತ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಶ್ರೀರಾಮುಲು ಹೇಳಿದರು.


ಇದನ್ನೂ ಓದಿ: ಬಡವರ ಬದುಕನ್ನೇ ಲಾಕ್ ಮಾಡಿದ ಲಾಕ್​ಡೌನ್; ವಿಶೇಷಚೇತನ ಪುತ್ರನಿಗೆ ಚಿಕಿತ್ಸೆ ಕೊಡಿಸಲಾಗದೇ ದಂಪತಿ ಪರದಾಟ


ಲೋಕ ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ಮಾತನಾಡಿ, ಅಂತರಾಜ್ಯ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೇ 3 ನಂತರ ಎದುರಾಗಬಹುದಾದ ಸವಾಲುಗಳು ಹಾಗೂ ಅದನ್ನು ನಿಭಾಯಿಸಲು  ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.


ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ಅರಸೀಕೆರೆ, ಚನ್ನರಾಯಪಟ್ಟಣ ಮತ್ತಿತರ ತಾಲ್ಲೂಕುಗಳಿಗೆ ಸಾವಿರಾರು ಮಂದಿ ಬರುವ ನಿರೀಕ್ಷೆ ಇದ್ದು, ಇವರೆಲ್ಲರನ್ನು ಸಾಮೂಹಿಕವಾಗಿ ಒಂದೆಡೆ ಕ್ವಾರಂಟೈನ್‍ನಲ್ಲಿ ಇಡುವುದು ಅಪಾಯ. ಅದರ ಬದಲು ಕಡಿಮೆ ವೆಚ್ಚದಲ್ಲಿ ದೊರೆಯುವ ಜಿಯೋ ಟ್ಯಾಗ್‍ಗಳನ್ನು ಹಾಕಿ ಮನೆಯಲ್ಲಿ ಇರಿಸಿ ನೆಟ್ವರ್ಕ್ ಮೂಲಕವೇ ಚಲನವಲನಗಳ ಬಗ್ಗೆ ನಿಗಾವಹಿಸಬಹುದು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಹೆಚ್ಚುವರಿಯಾಗಿ ಎರೆಡೆರೆಡು ವೆಂಟಿಲೇಟರ್‍ಗಳನ್ನು ಪೂರೈಸಬೇಕು ಎಂದರು.


ಸರ್ಕಾರಿ ಕಚೇರಿಗಳು ಹಾಗೂ ವಾಣಿಜ್ಯ ಚಟುವಟಿಕೆ ಪ್ರಾರಂಭವಾಗುವುದರಿಂದ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್‍ಗಳು ಮತ್ತು ಮಾಸ್ಕ್‍ಗಳನ್ನು ಪೂರೈಸಬೇಕಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.


ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ, ಈ ಬಾರಿ ಆರೋಗ್ಯ ಇಲಾಖೆಯ ಕಟ್ಟಡಗಳ ದುರಸ್ತಿ ಹಾಗೂ ನವೀಕರಣ ವೆಚ್ಚ ಕೈಬಿಟ್ಟು ಆ ಅನುದಾನದಲ್ಲಿ ವೆಂಟೆಲೇಟರ್‍ಗಳ ಖರೀದಿಗೆ ಬಳಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಉತ್ತಮಗೊಳ್ಳಬೇಕು ಕೊರೋನಾ ವಾರಿಯರ್ಸ್‍ಗೆ ಹೆಚ್ಚಿನ ಸೌಲಭ್ಯ ದೊರೆಯಬೇಕು ಎಂದು ಹೇಳಿದರು.


ಇದನ್ನೂ ಓದಿ: ಮಹಿಳೆಯರಿಗೆ ಉದ್ಯೋಗ; ವಾರಿಯರ್ಸ್​ಗೆ ಮಾಸ್ಕ್: ಕನಕಪುರದ ಕನಕಾಂಬರಿ ಮಹಿಳಾ ಒಕ್ಕೂಟಕ್ಕೆ ಶ್ಲಾಘನೆ


ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಮಾತನಾಡಿ, ಕೋವಿಡ್-19 ಹೋರಾಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ 100-200 ರೂ ಭತ್ಯೆ ನೀಡಬೇಕು ಎಂದರು.


ಶಾಸಕರಾದ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲ್ಲೂಕುಗಳಿಗೆ ಹೆಚ್ಚಿನ ಪಿಪಿಇ ಕಿಟ್​ಗಳನ್ನು ಪೂರೈಸಬೇಕು ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚುತ್ತಿದ್ದು, ಕನಿಷ್ಠ ಕೆರೆಗಳಿಗಾದರೂ ಹೇಮಾವತಿ ನಾಲೆಯಿಂದ ಕುಡಿಯುವ ಉದ್ದೇಶಕ್ಕೆ ನೀರು ಹರಿಸಬೇಕು ಎಂದು ಮನವಿ ಮಾಡಿದರು.


ಶಾಸಕರಾದ ಪ್ರೀತಂ ಜೆ.ಗೌಡ ಮಾತನಾಡಿ, ಕೇಂದ್ರ ಸರ್ಕಾರ ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗೆ 7 ನೇ ವೇತನ ಆಯೋಗದ ಸೌಲಭ್ಯ ಜಾರಿ ಮಾಡಿದ್ದು, ರಾಜ್ಯ ಸರ್ಕಾರದಲ್ಲಿಯೂ ಆರೋಗ್ಯ ಸೇವಕರಿಗೆ ಈ ಸೌಕರ್ಯ ಕಲ್ಪಿಸಬೇಕು ಎಂದರು.


ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕುಗಳಿಗೆ ಹೊರರಾಜ್ಯಗಳಿಂದ ಬರುತ್ತಿರುವ ಸ್ಥಳೀಯರು ಮತ್ತು ಅವರಿಂದಾಗುತ್ತಿರುವ ಅಪಾಯಗಳ ಬಗ್ಗೆ ಗಮನಸೆಳೆದು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ತಿಳಿಸಿದರು.


ಶಾಸಕರುಗಳಾದ ಎ.ಟಿ. ರಾಮಸ್ವಾಮಿ ಮತ್ತು ಕೆ.ಎಸ್. ಲಿಂಗೇಶ್ ಅವರು ಸಹ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿ ಮುಂದಿನ ದಿನಗಳಲ್ಲಿಯೂ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ಜಿಲ್ಲೆಯ ಕೊರೋನಾ ಸ್ಥಿತಿಗತಿ, ತಪಾಸಣೆಗಳು, ಕ್ವಾರಂಟೈನ್ ವ್ಯವಸ್ಥೆ, ನಿಯಂತ್ರಣ ಕ್ರಮಗಳು ಹಾಗೂ ನಿರಂತರ ನಿಗಾಕ್ಕೆ ಅನುಸರಿಸುತ್ತಿರುವ ಮುಂಜಾಗ್ರತೆಗಳ ಬಗ್ಗೆ ವಿವರಿಸಿದರು.


ವರದಿ: ಡಿಎಂಜಿ ಹಳ್ಳಿ ಅಶೋಕ್


Published by:Vijayasarthy SN
First published: