ರಾಮನಗರ (ಮಾರ್ಚ್ 28); ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸಕ್ಕೆ ಈವರೆಗೆ 3 ಜನ ಬಲಿಯಾಗಿದ್ದರೆ, ಸುಮಾರು 66ಕ್ಕೂ ಅಧಿಕ ಜನ ಈ ಸೋಂಕಿಗೆ ಒಳಗಾಗಿದ್ದಾರೆ. ರಾಜ್ಯದ 30 ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ಈವರೆಗೆ ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿಲ್ಲ. ಹೀಗಾಗಿ ಆರೋಗ್ಯ ಸಚಿವ ಶ್ರೀರಾಮುಲು ಎಲ್ಲಾ ಜಿಲ್ಲೆಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲಾಧಿಕಾರಿ ಭವನದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿರುವ ಸಚಿವ ಶ್ರೀರಾಮುಲು ಜಿಲ್ಲೆಗೆ ಈ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ , ಎಸ್ಪಿ ಅನೂಪ್ ಎ ಶೆಟ್ಟಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡುವುದನ್ನು ತಡೆಯಲು ಯಾವೆಲ್ಲಾ ಕ್ರಮ ಜರುಗಿಸಬೇಕು ಎಂಬ ಕುರಿತೂ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಕೊರೋನಾ ಸೋಂಕಿಗೆ ಭಾರತದಲ್ಲಿ ಈವರೆಗೆ ಒಟ್ಟಾರೆ 20 ಜನ ಮೃತಪಟ್ಟಿದ್ದರೆ, 800ಕ್ಕೂ ಅಧಿಕ ಜನರಿಗೆ ಮಾರಣಾಂತಿಕ ಸೋಂಕು ತಗುಲಿದೆ. ಹೀಗಾಗಿ ಭವಿಷ್ಯದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
(ವರದಿ - ಎ.ಟಿ. ವೆಂಕಟೇಶ್)
ಇದನ್ನೂ ಓದಿ : ಕಾಫಿನಾಡಲ್ಲಿ ಲಾಕ್‌ಡೌನ್‌ಗಿಲ್ಲ ಕವಡೆ ಕಾಸಿನ ಕಿಮ್ಮತ್ತು; ದಿನಬಳಕೆ ವಸ್ತುಗಳಿಗಾಗಿ ನೂಕು ನುಗ್ಗಲು!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ