ಸರ್ಕಾರದಿಂದಲೇ ಖಾಸಗಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ - ಸಚಿವ ಡಾ.ಕೆ‌ ಸುಧಾಕರ್

ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆ ಸಾಮರ್ಥ್ಯದಲ್ಲಿ ಶೇ.50ರಷ್ಟನ್ನು ಕೋವಿಡ್‌ ಚಿಕಿತ್ಸೆಗಾಗಿ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ.50 ಹಾಸಿಗೆಗಳನ್ನು ಖಾಸಗಿಯವರು ಕೋವಿಡ್‌ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂಬ ನಿರ್ಧಾರಕ್ಕೆ ಬರಲಾಯ್ತು.

ಸಚಿವ ಡಾ.ಕೆ ಸುಧಾಕರ್​​

ಸಚಿವ ಡಾ.ಕೆ ಸುಧಾಕರ್​​

  • Share this:
ಬೆಂಗಳೂರು(ಜು.22): ರಾಜ್ಯದ ಕೋವಿಡ್‌-19 ಟಾಸ್ಕ್ ಫೋಸ್‌೯ ಸಭೆಯೂ ಮಂಗಳವಾರ ನಡೆಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಎಲ್ಲ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಸಭೆಯಲ್ಲಿ ಪಾಲ್ಗೊಂಡು ಮಹತ್ವದ ನಿರ್ಧಾರಗಳನ್ನು ಕೈಗೊಂಡರು.

ಟಾಸ್ಕ್ ಫೋರ್ಸ್ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ಲಕ್ಷ ರ‍್ಯಾಪಿಡ್ ಆಂಟಿಜನ್‌ ಕಿಟ್ ಮತ್ತು ಐದು ಲಕ್ಷ ಕಿಟ್‌ ಖರೀದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಕೋವಿಡ್‌-19 ನಿರ್ವಹಣೆಗೆ ಹೆಚ್ಚುವರಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ. ರ‍್ಯಾಪಿಡ್ ಆಂಟಿಜನ್​​ ಟೆಸ್ಟ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ಸರ್ವ ಸಮ್ಮತದಿಂದ ತೀರ್ಮಾನ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆ ಸಾಮರ್ಥ್ಯದಲ್ಲಿ ಶೇ.50ರಷ್ಟನ್ನು ಕೋವಿಡ್‌ ಚಿಕಿತ್ಸೆಗಾಗಿ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ.50 ಹಾಸಿಗೆಗಳನ್ನು ಖಾಸಗಿಯವರು ಕೋವಿಡ್‌ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂಬ ನಿರ್ಧಾರಕ್ಕೆ ಬರಲಾಯ್ತು.

ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ(ಎಬಿ-ಎಆರ್‌ಕೆ) ಯೋಜನೆಯ ಪ್ಯಾಕೇಜ್‌ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಯೂಸರ್‌ ಚಾರ್ಜ್​​ ಆಧಾರದ ಮೇಲೆ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಯಿತು.

ಕೋವಿಡ್‌ ನಿರ್ವಹಣೆಗೆ ವೈದ್ಯಕೀಯ ಪರಿಕರ, ಔಷಧಿ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಎಸಿಎಸ್‌, ಐಟಿಬಿಟಿ ಇಲಾಖೆ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಅನುಮೋದನೆ ನೀಡಲಾಗಿದೆ. ಕೋವಿಡ್‌ ನಿರ್ವಹಣೆಯಲ್ಲಿ ಕಾರ್ಯ ನಿರತರಾಗಿರುವ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ 2,59,263 ಎನ್‌ -95 ಮಾಸ್ಕ್, 2,59,263 ಪಿಪಿಇ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

ಕೋವಿಡ್‌ ನಿರ್ವಹಣೆಗೆ ಉದ್ದೇಶಕ್ಕಾಗಿ 17 ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ 4,736 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‌ಲೈನ್‌ ಅಳವಡಿಕೆ ಮತ್ತು ಇತರೆ ಅಗತ್ಯ ಪರಿಕರಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ನಮಗೆ ಹೆಚ್ಚುವರಿ ಹೈಪ್ಲೋ ಆಕ್ಸಿಜನ್‌ ಹಾಸಿಗೆಗಳು ಲಭ್ಯ ಆಗಲಿದ್ದು, ಭವಿಷ್ಯದ ಬಳಕೆಗೂ ಲಭ್ಯ ಆಗಲಿವೆ ಎಂದು ಸಚಿವರುಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಸಚಿವ ಸುಧಾಕರ್​​, ಹೊಸದಾಗಿ 16–ಆರ್‌ಟಿ – ಪಿಸಿಆರ್‌ ಮತ್ತು 15- ಆಟೋಮೇಟೆಡ್‌ ಆರ್‌ಎನ್‌ಎ ಎಕ್ಸಟ್ರಾಕ್ಷನ್‌ ಲ್ಯಾಬ್ ಸ್ಥಾಪನೆ ಮಾಡಲಾಗುವುದು. ಇದರಿಂದ ಈಗ ಲಭ್ಯವಿರುವ ಲ್ಯಾಬ್‌ಗಳ ಜತೆಗೆ ಹೆಚ್ಚುವರಿಯಾಗಿ ಸೇರ್ಪಡೆ ಆಗಲಿವೆ. ಟೆಸ್ಟ್‌ಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದ್ದು, ದಿನಕ್ಕೆ ಐವತ್ತು ಸಾವಿರ ಟೆಸ್ಟ್‌ಗಳ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.ಆಯುಷ್‌ ವೈದ್ಯರಿಗೆ ನೀಡುತ್ತಿರುವ ವೇತನ ನಲವತ್ತೆಂಟು ಸಾವಿರಕ್ಕೆ, ಎಂಬಿಬಿಎಸ್‌ ವೈದ್ಯರಿಗೆ ಎಂಬತ್ತು ಸಾವಿರಕ್ಕೆ ಹಾಗೂ ನಸ್‌೯ಗಳಿಗೆ 30 ಸಾವಿರ ರೂ.ಗಳನ್ನು ಮಾಸಿಕ ವೇತನ ನೀಡಲು ನಿರ್ಣಯಿಸಲಾಗಿದೆ. ಇದು ಆರು ತಿಂಗಳಿಗೆ ಅನ್ವಯ ಆಗಲಿದೆ. ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುವ ರೆಮಿಡಿಸ್ವಿಯರ್‌ ಔಷಧಿಗೆ ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಹೀಗಾಗಿ ಸರ್ಕಾರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಲು ನಿರ್ಧರಿಸಲಾಗಿದೆ ಎಂದರು.
Published by:Ganesh Nachikethu
First published: