news18-kannada Updated:March 18, 2020, 1:29 PM IST
ಹೆಚ್.ಡಿ. ರೇವಣ್ಣ
ಬೆಂಗಳೂರು (ಮಾ.18): ಮಾಜಿ ಸಚಿವ ಎಚ್.ಡಿ. ರೇವಣ್ಣ ಕಾನೂನು ಹಾಗೂ ನಿಯಮಕ್ಕಿಂತ ಜ್ಯೋತಿಷ್ಯ ಶಾಸ್ತ್ರವನ್ನು ಹೆಚ್ಚು ನಂಬುತ್ತಾರೆ. ಅಧಿಕಾರ ಸ್ವೀಕರಿಸುವಾಗ ಅವರು ಎಂದಿಗೂ ಚಪ್ಪಲಿ ಧರಿಸುವುದಿಲ್ಲ. ತಮ್ಮ ಬಳಿ ಸದಾ ಒಂದಷ್ಟು ನಿಂಬೆಹಣ್ಣನ್ನು ಇಟ್ಟುಕೊಂಡಿರುತ್ತಾರೆ. ಹೀಗೆಯೇ ಸಾಕಷ್ಟು ಶಾಸ್ತ್ರಗಳನ್ನು ಅವರು ಪಾಲಿಸುತ್ತಾರೆ. ಈಗ ವಿಶ್ವಾದ್ಯಂತ ಕೊರೋನಾ ಭೀತಿ ಎದುರಾಗಿದೆ. ಈ ಮಹಾಮಾರಿ ವೈರಸ್ ತಡೆಯಲು ದೇಶಾದ್ಯಂತ ಸಾಕಷ್ಟು ಕ್ರಮಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಸಚಿವ ರೇವಣ್ಣ ಮಾತ್ರ ಶಾಸ್ತ್ರಕ್ಕಾಗಿ ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದಾರೆ.
ರಾಜ್ಯ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಅಧಿವೇಶನಕ್ಕೆ ಬರುವ ಎಲ್ಲ ಶಾಸಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಕೂಡ ನೀಡಲಾಗುತ್ತಿದೆ. ಕೊರೋನಾ ವೈರಸ್ ಹರಡದಂತೆ ತಡೆಯಲು ಮುಂಜಾಗೃತ ಕ್ರಮವಾಗಿ ಈ ರೀತಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಶಾಸಕರು ಈ ನಿಯಮ ಪಾಲಿಸಿದ್ದಾರೆ.
ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಓಡಾಟ ನಡೆಸಿದ ಕೊರೋನಾ ಸೋಂಕಿತೆ; ಕಂಗಾಲಾದ ವೈದ್ಯರು
ಆದರೆ, ರೇವಣ್ಣ ಅವರು ಮಾತ್ರ ನಿಯಮವನ್ನು ಗಾಳಿಗೆ ತೂರಿ ಅಧಿವೇಶನ ಪ್ರವೇಶಿಸಿದ್ದಾರೆ. ಹೌದು, ರೇವಣ್ಣ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ಮುಂದೆ ಬಂದರು. ಆದರೆ, ತಾವು ಈ ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ಹಾಗೆಯೇ ನಡೆದರು. ಇನ್ನು, ಹ್ಯಾಂಡ್ ಸ್ಯಾನಿಟೈಸರ್ ನೀಡಿದರೂ ಅದನ್ನೂ ಬಳಸದೆ ರೇವಣ್ಣ ಒಳಗೆ ತೆರಳಿದ್ದಾರೆ. ಶಾಸ್ತ್ರ ಪಾಲಿಸುವ ಉದ್ದೇಶದಿಂದ ಅವರು ಈ ರೀತಿ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಬೆಲೆ ಕೊಡದ ರೇವಣ್ಣ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಾದರಿಯಾಗಿ ನಿಲ್ಲಬೇಕಾದ ಶಾಸಕರೇ ಈ ರೀತಿ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
First published:
March 18, 2020, 1:29 PM IST