ಮಾಸ್ಕ್, ಸ್ಯಾನಿಟೈಸರ್ ಇಲ್ಲ ಅಂತೀರಿ, ಆಮೇಲೆ ದುಡ್ಡು ಹೊಡೀತೀರಿ: ಸರ್ಕಾರಕ್ಕೆ ಹೆಚ್​ಡಿಕೆ ತರಾಟೆ

ಸರ್ಕಾರ ಘೋಷಿಸಿದ 1,610 ಕೋಟಿ ಪ್ಯಾಕೇಜ್​ನಲ್ಲಿ ಆಟೋ ಚಾಲಕರಿಗೆ ಮತ್ತು ಟ್ಯಾಕ್ಸಿ ಚಾಲಕರಿಗೆ 20 ಕೋಟಿ ರೂ ಎತ್ತಿಟ್ಟಿದ್ದಾರೆ. ಈ ಹಣ ಎಷ್ಟು ಮಂದಿಗೆ ಕೊಡಲು ಸಾಧ್ಯ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ

 • Share this:
  ಬೆಂಗಳೂರು(ಮೇ 19): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ರಾಜ್ಯ ಸರ್ಕಾರ ಪ್ರಕಟಿಸಿದ ಪ್ಯಾಕೇಜ್ ಬಗ್ಗೆ ಲೇವಡಿ ಮಾಡಿದ ಕುಮಾರಸ್ವಾಮಿ, ಆಟೋಚಾಲಕರಿಗೆ, ಟ್ಯಾಕ್ಸಿ ಚಾಲಕರ ಕಿವಿಗೆ ಸರ್ಕಾರ ಹೂ ಮುಡಿಸಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

  ಸರ್ಕಾರ ಘೋಷಿಸಿದ 1,610 ಕೋಟಿ ಪ್ಯಾಕೇಜ್​ನಲ್ಲಿ ಆಟೋ ಚಾಲಕರಿಗೆ ಮತ್ತು ಟ್ಯಾಕ್ಸಿ ಚಾಲಕರಿಗೆ 20 ಕೋಟಿ ರೂ ಎತ್ತಿಟ್ಟಿದ್ದಾರೆ. ಈ ಹಣ ಎಷ್ಟು ಮಂದಿಗೆ ಕೊಡಲು ಸಾಧ್ಯ? ಈ ಚಾಲಕರ ಪರಿಸ್ಥಿತಿ ಹೇಗಿದೆ ಎಂದು ನೋಡಿದ್ದೀರಾ? ಇಂಥ ಬಿಕ್ಕಟ್ಟಿನ ಸಮಯದಲ್ಲಿ ಅವರ ಜೀವನದ ಜೊತೆ ಆಟವಾಡಬೇಡಿ ಎಂದು ಎಚ್ಚರಿಸಿದರು.

  ಪ್ರತೀ ದಿನ ಮೀಟಿಂಗ್ ಅಂತೀರಿ. ಯಾವುದೇ ಪೂರ್ವತಯಾರಿ ಮಾಡಿಕೊಳ್ಳುವುದಿಲ್ಲ. ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಇಲ್ಲ ಅಂತೀರಿ. ಆಮೇಲೆ ದುಡ್ಡು ಹೊಡೀತೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್​ಡಿಕೆ ಗಂಭೀರ ಆರೋಪ ಮಾಡಿದರು.

  ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ ಕೊರೋನಾಗೆ 3 ಬಲಿ: 12 ಗಂಟೆಯಲ್ಲಿ 127 ಕೇಸ್​​ ಪತ್ತೆ; ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ

  ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ವಿರುದ್ಧ ಇನ್ನಷ್ಟು ಹರಿತವಾಗಿ ಹರಿಹಾಯ್ದರು.

  ನಮ್ಮ ದೇಶದಲ್ಲಿ ಒಂದೊಂದು ರಾಜ್ಯದಲ್ಲೂ ಒಂದೊಂದು ಸಮಸ್ಯೆ ಇದೆ. ಕೋವಿಡ್ ಬಿಕ್ಕಟ್ಟಿನಿಂದ ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. 20 ಲಕ್ಷ ಕೋಟಿ ರೂ ಪ್ಯಾಕೇಜ್​ನಲ್ಲಿ ರಾಜ್ಯಗಳಿಗೆ ಹೇಗೆ ಹಂಚಿಕೆ ಮಾಡುತ್ತೀರಿ. ಪರಿಹಾರ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ಹೇಗೆ ಕೊಡುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

  ಮೊದಲ ಪ್ಯಾಕೇಜ್​ನಲ್ಲಿ 6.5 ಲಕ್ಷ ಕೋಟಿ ಘೋಷಣೆ ಮಾಡಿದರು. 13ನೇ ಬಜೆಟ್​ಗೆ ಸೇರಿದ ಹಣವೇ ಈಗ ವ್ಯಯವಾಗುವುದು. ಇವರು ಕೊಡುತ್ತಿರುವುದು ಕೇವಲ 2,500 ಕೋಟಿ ಮಾತ್ರ. ಇದರಿಂದ ಆರ್ಥಿಕ ಚೇತರಿಕೆ ಸಾಧ್ಯವಿಲ್ಲ. 13ನೇ ತಾರೀಖಿನ ಪ್ಯಾಕೇಜ್ ಭಾರತಕ್ಕೆ ದೊಡ್ಡ ಮಟ್ಟದ ನೆರವಿಗೆ ಬರುವುದಿಲ್ಲ. ಮೊದಲು ಘೋಷಿಸಿದ್ದ 6,500 ಕೋಟಿ ಪ್ಯಾಕೇಜ್ ಬರೀ ಸುಳ್ಳಿನ ಕಂತೆ, ಮೂರ್ಖತನದ ಘೋಷಣೆ ಅಷ್ಟೇ ಎಂದು ಹೆಚ್​ಡಿಕೆ ಟೀಕಿಸಿದರು.

  ಇದನ್ನೂ ಓದಿ: ಹಳಿ ಮೇಲಿನ ಕೊರೋನಾ ಆಸ್ಪತ್ರೆಗೆ ಇಲ್ಲ ಧಾವಂತ; ಸಜ್ಜಾಗಿ ಒಂದು ತಿಂಗಳಾದರೂ ಬಳಕೆಯಾಗದ ರೈಲ್ವೆ ಐಸೋಲೇಶನ್ ವಾರ್ಡ್​ಗಳು

  ಕೇಂದ್ರ ಸರ್ಕಾರ ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ. ಫೆಬ್ರವರಿ 29ಗೆ ಮುನ್ನ ಎಷ್ಟು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. ನಂತರ ಎಷ್ಟು ದಿವಾಳಿಯಾದವು ಎಂಬುದರ ಸರ್ವೇ ಮಾಡಿ ಮಾಹಿತಿ ಸಂಗ್ರಹಿಸಬೇಕಿತ್ತು ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

  ಇನ್ನು, ಸಣ್ಣ ಉದ್ಯಮಗಳಿಗೆ 3 ಲಕ್ಷ ಕೋಟಿ ರೂ ಸಾಲ ಕೊಡುವ ಬಗ್ಗೆ ಅವರು ವ್ಯಂಗ್ಯ ಮಾಡಿದರು. “2019ರಲ್ಲಿ ಎಂಎಸ್​ಎಂಇಗಳಿಗೆ ಬ್ಯಾಂಕ್​ಗಳು 88.46 ಲಕ್ಷ ಕೋಟಿ ರೂ ಸಾಲ ಕೊಟ್ಟಿದ್ದವು. ಇವರಿಗೆ 100 ಲಕ್ಷ ಕೋಟಿ ರೂ ಸಾಲ ಕೊಡುವ ತಾಕತ್ತು ಬ್ಯಾಂಕುಗಳಿಗೆ ಇದೆ. ಇವರು ಕೊಡುವ 3 ಲಕ್ಷ ಕೋಟಿ ಸಾಲದಿಂದ MSMEಗಳಿಗೆ ಶಕ್ತಿ ತುಂಬಲು ಸಾಧ್ಯವಿಲ್ಲ” ಎಂದು ಜೆಡಿಎಸ್ ನಾಯಕರೂ ಆದ ಅವರು ಕಳವಳಪಟ್ಟರು.

  First published: