news18-kannada Updated:May 22, 2020, 12:04 PM IST
ಸಾಂದರ್ಭಿಕ ಚಿತ್ರ
ಹಾವೇರಿ(ಮೇ 22): ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಯನ್ನು ಮುಂಬೈ ನಂಟು ಆರೆಂಜ್ ಝೋನ್ಗೆ ಪರಿವರ್ತಿಸಿದೆ. ಈಗ ಅದೇ ಮುಂಬೈನಿಂದ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಜನರನ್ನು ರೈಲಿನ ಮೂಲಕ ಕರೆತರುವ ಸಿದ್ಧತೆ ನಡೆದಿದ್ದು, ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಮೇ 3ರವರಗೆ ಕೊರೋನಾ ಮುಕ್ತವಾಗಿದ್ದ ಜಿಲ್ಲೆಗೆ ಮುಂಬೈನಿಂದ ಬಂದ ಮೂವರು ಸೋಂಕು ಹೊತ್ತು ತಂದ ಪರಿಣಾಮ ಜಿಲ್ಲೆಯು ಹಸಿರು ವಲಯದಿಂದ ಕಿತ್ತಳೆ ವಲಯವಾಗಿ ಮಾರ್ಪಟ್ಟಿದೆ. ಆದರೂ ಸದ್ಯ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿರುವ ಈ ಸಮಯದಲ್ಲಿ ಮಹಾರಾಷ್ಟ್ರದ ಮುಂಬೈನಿಂದ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಇಲ್ಲಿಗೆ ಕರೆ ತರುವ ಕಾರ್ಯ ನಡೆದಿದೆ. ಹಾವೇರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 1,200 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಶೀಘ್ರದಲ್ಲಿಯೇ ಜಿಲ್ಲೆಗೆ ಬರಲಿದೆ.
ಈ ರೈಲನ್ನು ಬರಮಾಡಿಕೊಳ್ಳಲು ಜಿಲ್ಲೆಯ ಅಧಿಕಾರಿಗಳು ಅಗತ್ಯ ಸಿದ್ಧತಾ ಕ್ರಮಗಳನ್ನು ಈಗಾಗಲೇ ನಡೆಸಿದ್ದಾರೆ. ಮುಂಬೈನಿಂದ ರೈಲು ಮಹಾರಾಷ್ಟ್ರದಲ್ಲಿ ವಿವಿಧ ಕೆಲಸಗಳಿಗೆ ಹೋಗಿ ಸಿಲುಕಿಕೊಂಡಿರುವವರು ಹಾಗೂ ಅಲ್ಲಿ ವಲಸೆ ಹೋಗಿದ್ದ ರಾಜ್ಯದವರನ್ನು ರಾಜ್ಯಕ್ಕೆ ಕರೆತರುವ ಸರ್ಕಾರದ ಕ್ರಮದ ಪರಿಣಾಮವಾಗಿ ಮುಂಬೈನಿಂದ ನೇರವಾಗಿ ಹಾವೇರಿಗೇ ವಿಶೇಷ ರೈಲು ಬರಲಿದೆ. ಶೀಘ್ರದಲ್ಲಿಯೇ ರೈಲು ಮುಂಬೈನಿಂದ ಹೊರಡುವ ದಿನಾಂಕ, ಸಮಯ ಪ್ರಕಟವಾಗುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಈ ಕುರಿತು ಸೂಚನೆಯೂ ಬಂದಿದ್ದು, ರೈಲಿನಲ್ಲಿ ಬರುವ ಪ್ರಯಾಣಿಕರನ್ನು ಯಾವ ರೀತಿ ಅವರ ಊರಿಗೆ ಕಳುಹಿಸಬೇಕು, ಜಿಲ್ಲೆಯವರನ್ನು ಎಲ್ಲಿ ಕ್ವಾರಂಟೈನ್ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ವಿಶೇಷ ರೈಲಿನಲ್ಲಿ ಸುಮಾರು 1,200 ಪ್ರಯಾಣಿಕರು ಬರಲಿದ್ದಾರೆ. ಇದರಲ್ಲಿ ಶೇ. 60ರಷ್ಟು ಪ್ರಯಾಣಿಕರು ಹಾವೇರಿ ಜಿಲ್ಲೆಯವರೇ ಆಗಿರುವುದರಿಂದ ಮಹಾರಾಷ್ಟ್ರದಿಂದ ನೇರವಾಗಿ ಹಾವೇರಿ ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸಲಿದೆ. ಸುತ್ತಮುತ್ತಲಿನ ಜಿಲ್ಲೆಯವರು ಸೇರಿ ಎಲ್ಲರನ್ನೂ ಹಾವೇರಿ ನಿಲ್ದಾಣದಲ್ಲಿಯೇ ಇಳಿಸಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಕಣಕೇಕೆ ಹಾಕುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮಹಾರಾಷ್ಟ್ರದಿಂದ ಬಂದವರಿಂದಲೇ ಸೋಂಕು ವ್ಯಾಪಿಸುತ್ತಿದೆ. ಆದ್ದರಿಂದ ವಿಶೇಷ ರೈಲಿನಲ್ಲಿ ಸಾವಿರಾರು ಜನರು ಬಂದರೆ ಅವರಿಂದ ಜಿಲ್ಲೆಯಲ್ಲೂ ಸೋಂಕು ಹಬ್ಬುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರಿಗೆ ಆತಂಕ ಶುರುವಾಗಿದೆ.
ರೈಲಿನ ಪ್ರತಿ ಬೋಗಿಯಲ್ಲಿ 50ಜನರು ಪ್ರಯಾಣಿಸಲು ಮಾತ್ರ ಅವಕಾಶ ಕೊಡಲಾಗಿದೆ. ಅಂದಾಜು 22 ರಿಂದ 24 ಬೋಗಿಗಳಲ್ಲಿ ಪ್ರಯಾಣಿಕರು ಹಾವೇರಿ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರಂಗೆ ಬಂದಿಳಿಯಲ್ಲಿದ್ದಾರೆ. ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಇಳಿಯಲಿರುವ ಜಿಲ್ಲೆಯ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ಗೆ ಕಳುಹಿಸಲು ತಾಲೂಕಾವಾರು ಕೌಂಟರ್ಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಧಾರವಾಡ, ಬೆಳಗಾವಿ, ಗದಗ, ಉತ್ತರಕನ್ನಡ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬೀದರ, ವಿಜಯಪುರ, ಯಾದಗಿರಿ ಒಳಗೊಂಡಂತೆ ವಿವಿಧ ಜಿಲ್ಲೆಯ ಪ್ರಯಾಣಿಕರಿಗೆ ಜಿಲ್ಲಾವಾರು ಕೌಂಟರ್ ತೆರೆಯಲಾಗುತ್ತಿದೆ.
ಆರೋಗ್ಯ ತಪಾಸಣೆ ನಡೆಸಿ ಇಲ್ಲಿಂದ ಆಯಾ ತಾಲೂಕು ಹಾಗೂ ಜಿಲ್ಲೆಗಳಿಗೆ ಕರೆದೊಯ್ಯಲು ಬಸ್ಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ. ಸವಣೂರಿನಲ್ಲಿ ಪತ್ತೆಯಾಗಿರುವ ಎರಡು ಕೊರೋನಾ ಪಾಸಿಟಿವ್ ಮತ್ತು ಶಿಗ್ಗಾಂವಿ ತಾಲೂಕು ಅಂದಲಗಿಯ ಒಬ್ಬ ವ್ಯಕ್ತಿಯಲ್ಲಿ ಕೊರೋನಾ ಕೇಸ್ ಪತ್ತೆಯಾಗಿದೆ. ಈ ಮೂವರೂ ಮುಂಬೈನಿಂದ ಬಂದವರು ಎನ್ನುವುದು ವಿಶೇಷ.
ಇದನ್ನೂ ಓದಿ :
ಅಮವಾಸ್ಯೆ ಎಫೆಕ್ಟ್- ಬಾರದ ಪ್ರಯಾಣಿಕರು; ವಿಜಯಪುರದಲ್ಲಿ ಬಸ್ಗಳ ಸಂಚಾರದಲ್ಲಿ ಭಾರಿ ಕಡಿತಸದ್ಯದ ಪರಿಸ್ಥಿತಿಯಲ್ಲಿ ಮುಂಬೈನಿಂದ ಬಂದವರೆಂದರೆ ಆತಂಕ ಬರುವಂತಾಗಿದೆ. ಆದ್ದರಿಂದ ಇಂಥ ಸಂದರ್ಭದಲ್ಲಿ ಸಾವಿರಾರು ಜನರು ಮುಂಬೈನಿಂದ ಬರುತ್ತಾರೆ ಎನ್ನುವುದು ಭಯಕ್ಕೆ ಕಾರಣವಾಗಿದೆ. ಆದ್ದರಿಂದ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹುಬ್ಬಳ್ಳಿ ನಿಲ್ದಾಣದಲ್ಲೇ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಕರೆತರುವ ಕಾರ್ಯ ಮಾಡಬೇಕು.
(ವರದಿ : ಸಂಕನಗೌಡ ಎಂ ದೇವಿಕೊಪ್ಪ)
First published:
May 22, 2020, 11:30 AM IST