Haveri: ಕೊರೋನಾ ಅಟ್ಟಹಾಸ; ಹೊಟ್ಟೆಪಾಡಿಗಾಗಿ ಹಣ್ಣಿನ ವ್ಯಾಪಾರ, ಕೂಲಿ ಕೆಲಸಕ್ಕಿಳಿದ ಹಾವೇರಿಯ ಅತಿಥಿ ಉಪನ್ಯಾಸಕರು!

Haveri Coronavirus | ಕೊರೊನಾ ಆರ್ಭಟ ಶುರುವಾದ ನಂತರದ‌ ಕೆಲವು ತಿಂಗಳುಗಳಿಂದ ಹಾವೇರಿಯ ಅತಿಥಿ ಉಪನ್ಯಾಸರಿಗೆ ಸಂಬಳವೂ ಇಲ್ಲದೆ, ಕೆಲಸವೂ ಇಲ್ಲದಂತಾಗಿದೆ. ಹೀಗಾಗಿ ಹೊಟ್ಟೆಪಾಡಿಗೆ ಕೆಲವರು ಮಾವಿನಹಣ್ಣು ಮಾರಾಟ ಮಾಡ್ತಿದ್ರೆ, ಮತ್ತೆ ಕೆಲವರು ಉದ್ಯೋಗ ಖಾತ್ರಿ ಕೆಲಸ ಮಾಡ್ತಿದ್ದಾರೆ.

ಹಾವೇರಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕ

ಹಾವೇರಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕ

 • Share this:
  ಹಾವೇರಿ: ಹೆಮ್ಮಾರಿ ಕೊರೊನಾ ಅದೆಷ್ಟೋ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲೂ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡ್ತಿದ್ದವರ ಪಾಡಂತೂ ಹೇಳತೀರದು. ಕೊರೊನಾ ಆರ್ಭಟ ಶುರುವಾದ ನಂತರದ‌ ಕೆಲವು ತಿಂಗಳುಗಳಿಂದ ಅತಿಥಿ ಉಪನ್ಯಾಸರಿಗೆ ಸಂಬಳವೂ ಇಲ್ಲದೆ, ಕೆಲಸವೂ ಇಲ್ಲದಂತಾಗಿದೆ. ಹೀಗಾಗಿ ಹೊಟ್ಟೆಪಾಡಿಗೆ ಕೆಲವರು ಮಾವಿನಹಣ್ಣು ಮಾರಾಟ ಮಾಡ್ತಿದ್ರೆ, ಮತ್ತೆ ಕೆಲವರು ಉದ್ಯೋಗ ಖಾತ್ರಿ ಕೆಲಸ ಮಾಡ್ತಿದ್ದಾರೆ.

  ಹೌದು, ಹಣ್ಣು ಮಾರಾಟ ಮಾಡ್ತಿರೋ ಇವರು ಮೂಲತಃ ಹಣ್ಣಿನ ವ್ಯಾಪಾರಿ ಅಲ್ಲ. ಹಾವೇರಿ ನಗರದ ಹೊರವಲಯದಲ್ಲಿರೋ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರು. ಕ್ರಿಮಿನಾಲಜಿಯಲ್ಲಿ ಎಂಎ ಪದವಿ ಪಡೆದು ಸೆಟ್‌ ಪರೀಕ್ಷೆ ಪಾಸಾಗಿ ಅತಿಥಿ ಉಪನ್ಯಾಸಕರಾಗಿ ಕೆಲಸ‌ ಮಾಡುತ್ತಿದ್ದರು. ಆದರೆ ಕೊರೊನಾ ಆರ್ಭಟ ಶುರುವಾದಮೇಲೆ ಕಳೆದ ಕೆಲವು ತಿಂಗಳುಗಳಿಂದ ಸರಕಾರ ಅತಿಥಿ‌ ಉಪನ್ಯಾಸಕರ ಸೇವೆ ಸ್ಥಗಿತಗೊಳಿಸಿತ್ತು. ನಂತರದಲ್ಲಿ ಶೇ.50ರಷ್ಟು ಅತಿಥಿ ಉಪನ್ಯಾಸಕರನ್ನ ಮಾತ್ರ ವಾಪಾಸ್ ಕರೆಸಿಕೊಂಡಿತು. ಕೊರೊನಾ‌ ಮೊದಲನೆ ಅಲೆ ಆರಂಭದ ನಂತರದಿಂದ ಅತಿಥಿ ಉಪನ್ಯಾಸಕರಿಗೆ ಎಲ್ಲಿಲ್ಲದ ಸಮಸ್ಯೆ ಎದುರಾಯ್ತು. ಆಗ ಸರಕಾರ ಕೆಲವು ತಿಂಗಳ ಸಂಬಳ ನೀಡಿತು. ಆದರೆ, ಈಗ ಕೆಲವು ತಿಂಗಳಿಂದ ಸಂಬಳವೂ ಇಲ್ಲ, ನೂರಾರು ಜನ ಅತಿಥಿ ಉಪನ್ಯಾಸಕರಿಗೆ ಕೆಲಸವೂ ಇಲ್ಲದಂತಾಗಿದೆ.

  Haveri Coronavirus | Haveri Guest Lecturers Selling Fruits Doing Daily Vage Works after Covid-19 Pandemic.
  ಹಾವೇರಿಯಲ್ಲಿ ಹಣ್ಣು ಮಾರುತ್ತಿರುವ ಅತಿಥಿ ಉಪನ್ಯಾಸಕ


  ಹೀಗಾಗಿ, ಹೊಟ್ಟೆಪಾಡಿಗೆ ಹಾಗೂ ಕುಟುಂಬ ನಿರ್ವಹಣೆಗೆ ಕೆಲವರು ಹಣ್ಣು ಮಾರಾಟ ಮಾಡುತ್ತಿದ್ದರೆ ಮತ್ತೆ ಕೆಲವರು ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಅದು ಇದು ಅಂತ ಏನೇನೋ ಕೆಲಸ‌ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿನ ಅತಿಥಿ ಉಪನ್ಯಾಸಕರ ಪೈಕಿ‌ 20ಕ್ಕೂ ಅಧಿಕ ಜನರು ವಿವಿಧ ತಾಲೂಕುಗಳಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ‌ ಕೂಲಿ ಕೆಲಸ ಮಾಡ್ತಿದ್ದಾರೆ. ನಾಲ್ಕೈದು ಜನರು ಕಾಳುಕಡಿ ವ್ಯಾಪಾರ‌ ಮಾಡ್ತಿದ್ದಾರೆ. ಕೆಲವರು ಗಾರೆ ಕೆಲಸ ಮಾಡ್ಕೊಂಡಿದ್ರೆ, ಮತ್ತೆ ಕೆಲವರು ಊರೂರು ತಿರುಗಾಡಿ ಹಣ್ಣು ಮಾರಾಟ ಮಾಡ್ತಿದ್ದಾರೆ. ಕಷ್ಟಪಟ್ಟು ಸ್ನಾತಕೋತ್ತರ ಪದವಿ ಪಡೆದು, ಪರೀಕ್ಷೆಗಳನ್ನ ಪಾಸಾಗಿ‌ ವಿವಿಧ ಸರಕಾರಿ ಪ್ರಥಮ‌ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರಿಗೆ ಈಗ ಇಂತಹ ಪರಿಸ್ಥಿತಿ ಎದುರಾಗಿದೆ.

  ಕೊರೊನಾ ಮೊದಲೆ ಅಲೆಯ ಆರ್ಭಟದಿಂದಲೆ ಕಾಲೇಜುಗಳು ಸರಿಯಾಗಿ ನಡೆಯದಂತಹ ಸ್ಥಿತಿಗೆ ತಲುಪಿದ್ದವು. ಆಗಾಗ ಕಾಲೇಜುಗಳು ನಡೆದರೂ ಸರಕಾರ ಮೊದಲು ಕಾರ್ಯ ನಿರ್ವಹಿಸ್ತಿದ್ದವರಲ್ಲಿ ಶೇ. 50ರಷ್ಟು ಅತಿಥಿ ಉಪನ್ಯಾಸಕರನ್ನ ಮರಳಿ ಕಾಲೇಜಿಗೆ ಕರೆದುಕೊಂಡಿತು. ಕೊರೊನಾ ಸಮಯದಲ್ಲಿ ಕೆಲವು ತಿಂಗಳುಗಳ ಸಂಬಳ ನೀಡಿತು. ನಂತರದಲ್ಲಿ ಸಂಬಳವೂ ಇಲ್ಲದಂತಾಗಿ ನೂರಾರು ಜನ ಅತಿಥಿ ಉಪನ್ಯಾಸಕರು ಕೆಲಸವಿಲ್ಲದಂತಾಗಿ ಕುಟುಂಬದ ನಿರ್ವಹಣೆಗಾಗಿ ಹಣ್ಣು ಮಾರಾಟ, ಉದ್ಯೋಗ ಖಾತ್ರಿ ಕೆಲಸ ಅಂತಾ ಕೆಲಸ ಮಾಡ್ಕೊಂಡಿದ್ದಾರೆ. ಹೀಗಾಗಿ ಸರಕಾರ ಸುಮಾರು ವರ್ಷಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರಿಗೆ ಇಂಥಾ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಬೇಕಿದೆ. ಅತಿಥಿ ಉಪನ್ಯಾಸಕರ ಕುಟುಂಬ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಪ್ಯಾಕೇಜ್ ಘೋಷಣೆ ಮಾಡಬೇಕಿದೆ.

  ಹಾವೇರಿ ಜಿಲ್ಲೆಯಲ್ಲಿ ಹಣ್ಣು ಮಾರಾಟ, ಉದ್ಯೋಗ ಖಾತ್ರಿ ಕೆಲಸ, ಕಾಳು ಕಡಿ ವ್ಯಾಪಾರ ಅದು ಇದು ಅಂತಾ ಕೆಲಸ ಮಾಡ್ತಿರೋರ ಪೈಕಿ ಕೆಲವರು ಎಂಎ, ಎಂಎ ಮುಗಿಸಿ ಸೆಟ್ ಪಾಸಾದವರಿದ್ದಾರೆ. ಎಂಎ, ಪಿಎಚ್ ಡಿ ಪದವಿ ಪಡೆದವರಿದ್ದಾರೆ. ಆದ್ರೆ ಸರಕಾರದ ನೆರವು ಸಿಗದೆ ಈಗ ಏನೆಲ್ಲ ಪದವಿ ಪಡೆದಿದ್ದರೂ ಹಣ್ಣು ಮಾರಾಟ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೂಡಲೆ ಸರಕಾರ ರಾಜ್ಯದ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಬೇಕಿದೆ.

  (ವರದಿ: ಮಂಜುನಾಥ ತಳವಾರ)
  Published by:Sushma Chakre
  First published: