news18-kannada Updated:June 12, 2020, 10:16 PM IST
ಸಾಂದರ್ಭಿಕ ಚಿತ್ರ
ಹಾಸನ (ಜೂ. 12): ಹಾಸನ ಜಿಲ್ಲೆಯಲ್ಲಿಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ಸಾವು ಸಂಭವಿಸಿದೆ. ಸುದೀರ್ಘ ಕಾಲದಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 60 ವರ್ಷದ ವ್ಯಕ್ತಿಯೋರ್ವರಿಗೆ ಕೊರೋನಾ ಸೋಂಕು ತಗುಲಿದ್ದು ಇಂದು ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಹೊಸದಾಗಿ 9 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಜಿಲ್ಲಾಧಿಕಾರಿ ಆರ್. ಗಿರೀಶ್ ಈ ವಿಷಯ ತಿಳಿಸಿದ್ದಾರೆ. ಮೃತಪಟ್ಟ ಈ ವ್ಯಕ್ತಿ ಹಾಸನ ತಾಲ್ಲೂಕಿಗೆ ಸೇರಿದವರಾಗಿದ್ದು ಈ ಹಿಂದೆ ಮೆದುಳು ಸ್ಟ್ರೋಕ್ಗೆ ಒಳಗಾಗಿದ್ದು, ಅನಿಯಮಿತ ಮಧುಮೇಹದಿಂದ ಬಳಲುತ್ತಿದ್ದರು. ಕಳೆದ 6 ತಿಂಗಳಿಂದ ತೀವ್ರ ಉಸಿರಾಟದ ಸಮಸ್ಯೆ ಕೂಡ ಎದುರಿಸುತ್ತಿದ್ದರು. ಇವರು ಜೂ.10 ರಂದು ತೀವ್ರ ಉಸಿರಾಟ ಸಮಸ್ಯೆ ಎದುರಾದ ಕಾರಣ ಸಾಲಗಾಮೆ ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡು ನಂತರ ಮನೆಗೆ ತೆರಳಿದ್ದಾರೆ. ಅನಂತರ ಸಂಜೆ ಮತ್ತೆ ಉಸಿರಾಟದ ಸಮಸ್ಯೆ ಎದುರಾದಾಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದ್ದ ಅವರನ್ನು ಕೋವಿಡ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು.
ಜೂ. 10ರಂದು ಸಂಜೆ 7.45 ಕ್ಕೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಕರಣವಿರುವುದು ಎಂಬ ಶಂಕೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ.11 ರಂದು ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಜೂ.12 ರಂದು ಬೆಳಿಗ್ಗೆ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ ಜೂ.13 ರಂದು ಮಧ್ಯಾಹ್ನ 1.15 ರ ವೇಳೆ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ನಿಯಾಮಾನುಸಾರ ನೆರವೇರಿಸಲು ಎಲ್ಲ ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಾದವಳು ಹುಡುಗನೊಂದಿಗೆ ಪರಾರಿ; ಮಗಳಿಗಾಗಿ ಪೋಷಕರ ಗೋಳಾಟ
ಮೃತ ಸೋಂಕಿತರ ಮಗ ತಮಿಳುನಾಡಿಗೆ ಪ್ರಯಾಣ ಮಾಡಿ ಬಂದ ಹಿನ್ನಲೆ ಹೊಂದಿರುವ ಮಾಹಿತಿ ಇದ್ದು ಸಂಪೂರ್ಣ ನಿಖರ ವಿವರ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು. ಹಾಸನ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 9 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 226 ಕ್ಕೆ ಏರಿಕೆಯಾಗಿದೆ. ಇಂದು 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯ ಹೊಂದಿದ್ದಾರೆ, ಒಟ್ಟಾರೆ ಈ ವರೆಗೆ 170 ಮಂದಿ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. 56 ಮಂದಿ ಸಕ್ರಿಯ ಸೋಂಕಿತರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಂದು ಸೋಂಕು ಪತ್ತೆಯಾದವರಲ್ಲಿ 7 ಮಂದಿ ಬೇಲೂರು ತಾಲ್ಲೂಕಿಗೆ ಸೇರಿದವರಾಗಿದ್ದು, ಅವರೆಲ್ಲ ಮುಂಬೈನಿಂದ ಪ್ರಯಾಣ ಬೆಳೆಸಿದ ಹಿನ್ನಲೆ ಹೊಂದಿದ್ದಾರೆ. ಮತ್ತು ಇಬ್ಬರು ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ದೃಡಪಟ್ಟಿದೆ. ಇನ್ನಿಬ್ಬರು ಅರಕಲಗೂಡು ತಾಲ್ಲೂಕಿಗೆ ಸೇರಿದವರಾಗಿದ್ದು 10 ವರ್ಷದ ಬಾಲಕ ಹಾಗೂ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಹೊರರಾಜ್ಯದಿಂದ ಬಂದವನ್ನು ಕ್ವಾರಂಟೈನ್ ಕೇಂದ್ರದಿಂದ ಕಳುಹಿಸುವ ಮುನ್ನ ಕೋವಿಡ್-19 ತಪಾಸಣೆ ನಡೆಸಿ ವರದಿ ಪಡೆದು ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಚಿಕಿತ್ಸೆ ಹಾಗೂ ಕ್ವಾರಂಟೈನ್ಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಇನ್ನು ಎರೆಡು ಚಿಕಿತ್ಸಾ ಕೇಂದ್ರಗಳನ್ನು ಗುರುತಿಸಿಡಲಾಗಿದೆ. ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಆಲೂರು ತಾಲ್ಲೂಕಿನ ವೈದ್ಯರಿಗೆ ಕೋವಿಡ್ ಸೇವೆಯಲ್ಲಿ ಸಿಗಬಹುದಾದ ಸರ್ಕಾರದ ನೆರವನ್ನು ಒದಗಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
First published:
June 12, 2020, 10:16 PM IST