ಹಾಸನ ಜಿಲ್ಲೆಗೆ ಹೊರ ರಾಜ್ಯದವರು ಬರುವುದನ್ನು ತಡೆಗಟ್ಟಿ; ಸರ್ಕಾರಕ್ಕೆ ಜಿಲ್ಲೆಯ ಶಾಸಕರ ಮನವಿ

ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ 16 ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂಬ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತರಲ್ಲಿ ಹೊರರಾಜ್ಯದಿಂದ ಬಂದವರಾಗಿದ್ದು, ಜಿಲ್ಲೆಗೆ ಬಂದ ತಕ್ಷಣವೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಅವರಿಂದ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

news18-kannada
Updated:May 15, 2020, 9:37 PM IST
ಹಾಸನ ಜಿಲ್ಲೆಗೆ ಹೊರ ರಾಜ್ಯದವರು ಬರುವುದನ್ನು ತಡೆಗಟ್ಟಿ; ಸರ್ಕಾರಕ್ಕೆ ಜಿಲ್ಲೆಯ ಶಾಸಕರ ಮನವಿ
ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ.
  • Share this:
ಹಾಸನ; ಹಾಸನ ಜಿಲ್ಲೆ ಇದುವರೆಗೂ ಗ್ರೀನ್ ಝೋನ್​ನಲ್ಲಿತ್ತು. ಈಗ ದಿಢೀರನೇ ಬಾಂಬೆ ನಂಟಿನಿಂದ ರೆಡ್ ಝೋನ್​ಗೆ ಬಂದಿದೆ. ಇಂದು ಒಂದೇ ದಿನ 7 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಇಡೀ ಜಿಲ್ಲೆಯಲ್ಲಿ 16 ಪಾಸಿಟಿವ್ ಪ್ರಕರಣಗಳಿವೆ. ಇದು ಇಡೀ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದು, ಹೊರ ರಾಜ್ಯದಿಂದ ಬರುವ ಜನರನ್ನು ಕರ್ನಾಟಕಕ್ಕೆ ಬರಲು ಬಿಡಬೇಡಿ ಎಂದು ಜಿಲ್ಲೆಯ ಶಾಸಕರು ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ಒತ್ತಾಯ ಮಾಡಿದರು. ಆಗ ಸಚಿವ ಮಾಧುಸ್ವಾಮಿ ಅವರು, ಇದು ಕೇಂದ್ರ ಸರ್ಕಾರದ ಆದೇಶವೆಂದು ಹೇಳಿದಾಗ, ಕನಿಷ್ಠ ಪಕ್ಷ ಹಾಸನ ಜಿಲ್ಲೆಗೆ ಹೊರ ರಾಜ್ಯದವರನ್ನು ಬಿಡಬೇಡಿ ಎಂದು ಶಾಸಕರು ಮನವಿ ಮಾಡಿದ್ದಾರೆ.

ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೋನಾ ಸಂಬಂಧ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಎಂಎಲ್​ಸಿ ಗೋಪಾಲಸ್ವಾಮಿ ಅವರು ಮೊದಲು ಇದ್ದ ಹಾಗೆ ದಿನ ಬಿಟ್ಟು ದಿನ ಇಡೀ ಜಿಲ್ಲೆಯನ್ನು ಲಾಕ್ ಡೌನ್ ಮಾಡಿ ಎಂದು ಸಚಿವ ಮಾಧುಸ್ವಾಮಿಗೆ ಮನವಿ ಮಾಡಿದರು.

ಹಾಸನ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಮತ್ತಷ್ಟು ಸನ್ನದ್ದವಾಗಬೇಕಿದೆ. ಸರ್ಕಾರ ಕೂಡ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲೆಯ ಜನರಿಗೆ ಮತ್ತಷ್ಟು ಅರಿವು ಮೂಡಿಸಬೇಕಿದೆ ಎಂದು ಗೋಪಾಲಸ್ವಾಮಿ ಹೇಳಿದರು.

ಎಂಎಲ್​ಸಿ ಗೋಪಾಲಸ್ವಾಮಿ


ಹಿರಿಯ ಶಾಸಕ ಶಿವಲಿಂಗೇಗೌಡ ಅವರು ಮಾತನಾಡಿ, ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರುವವರನ್ನು ಬಿಡಬೇಡಿ. ಮನೆಯೊಳಗೆ ಮಾರಿ ಕೂಡಿಕೊಳ್ಳಲು ಆಗುತ್ತಾ ಎಂದು ಆತಂಕ ಹೊರಹಾಕಿದರು. ಪ್ರಧಾನಿಯವರು ಏನೇ ನಿರ್ಧಾರ ತೆಗೆದುಕೊಂಡರೂ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಬೇಕು. ಇನ್ನೂ ಸ್ವಲ್ಪ ದಿನ ಬೇರೆ ರಾಜ್ಯದಿಂದ ಯಾರೂ ಬರದಂತೆ ತಡೆಹಿಡಿಯಬೇಕು. ಯಾರು ಎಲ್ಲಿ ಬದುಕುತ್ತಿದ್ದಾರೆ ಅಲ್ಲೇ ಬದುಕಲಿ ಎಂದು‌ ಸಚಿವರ ಮೂಲಕ ಸರ್ಕಾರವನ್ನ ಒತ್ತಾಯಿಸಿದರು.

ಸತ್ತರೆ ಅಲ್ಲೇ ಸಾಯಲಿ, ಬದುಕಿದರೆ ಅಲ್ಲೇ ಬದುಕಲಿ, 25 ವರ್ಷದಿಂದ ಅಲ್ಲೇ ಬದುಕಿ ಈಗ ಕರ್ನಾಟಕ ಸೇಫ್ ಆಗಿದೆ ಎಂದು ಬರುತ್ತಾರೆ. ಹಿಂದೆ ಪ್ಲೇಗ್ ಬಂದಾಗ ಒಂದೇ ಮನೆಯಲ್ಲಿ 16 ಕ್ಕೂ ಹೆಚ್ಚು ಜನ ಸತ್ತ ವಿಷ್ಯ ಕೇಳಿದ್ದೇವೆ. ಯಾವುದೇ ಕಾರಣಕ್ಕೂ ಹೊರರಾಜ್ಯದಿಂದ ಬರುವವರಿಗೆ ಅವಕಾಶ ಮಾಡಿಕೊಡಬೇಡಿ. ನಮ್ಮ‌ಜಿಲ್ಲೆ ಸೇಫ್ ಆಗಿದೆ ಎಂದು ಸಚಿವ ಮಾಧುಸ್ವಾಮಿ ಬಳಿ ಶಾಸಕ ಶಿವಲಿಂಗೇಗೌಡ ಮನವಿ ಮಾಡಿದ್ದಲ್ಲದೇ ಬಾಂಬೆ ಸಹವಾಸ, ಹೊರ ರಾಜ್ಯದ ಸಹವಾಸವೇ ನಮಗೆ ಬೇಡ ಎಂದು ಪದೇ ಪದೇ ಸರ್ಕಾರವನ್ನು ಒತ್ತಾಯಿಸಿದರು.

JDS MLA Shivalingegowda hits out at Forest Officers in Meeting at Hassan.
ಜೆಡಿಎಸ್​ ಶಾಸಕ ಶಿವಲಿಂಗೇಗೌಡ
ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಹೊರಗೆ ಕಳುಹಿಸಿ ಕೆಲಸ ಮಾಡಲು ಆಗಲ್ಲ, ಕಾರ್ಮಿಕರನ್ನು ವಾಪಸ್ ಅವರ ರಾಜ್ಯಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಶಾಸಕ ಪ್ರೀತಂಗೌಡ ವಿರೋಧ ವ್ಯಕ್ತಪಡಿಸಿದರು. ಆರ್ಥಿಕತೆ ಮುಂದುವರಿಯಬೇಕು ಅಂದರೆ ಕಾರ್ಮಿಕರು ಇಲ್ಲಿಂದ ಹೋಗಬಾರದು. ಕೆಲವೊಂದು ಕೆಲಸದಲ್ಲಿ ಹೊರರಾಜ್ಯದಿಂದ ಬಂದಿರುವ ಕಾರ್ಮಿಕರು ನುರಿತರಿದ್ದಾರೆ. ನಮ್ಮ ಕೆಲಸ ಅವರಿಗೆ ಮಾಡಲು ಆಗಲ್ಲ. ಅವರ ಕೆಲಸ ನಾವು ಮಾಡಲು ಆಗಲ್ಲ. ಲಾಕ್‌ಡೌನ್ ಸಡಿಲಿಕೆಯಿಂದ ರೋಗ ಹರಡಲು ವ್ಯವಸ್ಥೆ ಮಾಡಿದ್ದೇವೆ. ಲಾಕ್‌ಡೌನ್ ಸಡಿಲಿಕೆಯಿಂದ ಅರ್ಥಿಕ ಚಟುವಟಿಕೆ ನಡೆಸಲು ಆಗುತ್ತಿಲ್ಲ. ನಮ್ಮ‌ ಕೆಲಸ ಕಾರ್ಯ ನಡೆಯಬೇಕು ಅಂದರೆ ಕಾರ್ಮಿಕರನ್ನು ಕಳುಹಿಸುವುದು ಸರಿಯಲ್ಲ. 5 ವರ್ಷದಿಂದ ಕೆಲಸ ಮಾಡಿ ಈಗ ಕೊರೋನಾ ಬಂದಿದೆ ವಾಪಸ್ ಹೋಗುತ್ತೇವೆ ಅಂದರೆ ಬಂಡವಾಳ ಹಾಕಿರುವವನು ಏನು ಮಾಡಬೇಕು ಎಂದು ಶಾಸಕ ಪ್ರತೀಮ್ ಗೌಡ ಹೇಳಿದರು.

ಸಚಿವ ಮಾಧುಸ್ವಾಮಿ ಮಾತನಾಡಿ, ಲಾಕ್​ಡೌನ್ ಮತ್ತು ಜನ ಸಮಾನ್ಯರ ಪ್ರಯಾಣ ತಡೆ ಮಾಡುವ ಬಗ್ಗೆ ಮತ್ತು ಇನ್ನೂ ಲಾಕ್ ಡೌನ್ ಮಾಡೋದು ಅಸಾಧ್ಯ ಎಂಬ ಅಭಿಪ್ರಾಯ ಹೊರಹಾಕಿದರು. ಇಡೀ ದೇಶವೇ ಎಷ್ಟು ದಿನ ಲಾಕ್ ಡೌನ್ ಮಾಡಲು ಸಾಧ್ಯ. ಎರಡು ತಿಂಗಳು ಲಾಕ್ ಡೌನ್ ಮಾಡಿದ್ದೇ ಎಷ್ಟು ಹೊಡೆತ ಕೊಟ್ಟಿದೆ ಅನ್ನೊದನ್ನು ವಿದ್ಯಾವಂತರು ಯೋಚಿಸಬೇಕು ಎಂದರು.

ಇದನ್ನು ಓದಿ: ಮದುವೆ ಸಮಾರಂಭಗಳಿಗೆ ಮಾರ್ಗಸೂಚಿ ಸಿದ್ಧ; ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿ 17 ನಿಯಮ ಕಡ್ಡಾಯ

ಅಮೆರಿಕ ಅಧ್ಯಕ್ಷ ಟ್ರಂಪ್ ನಂಥವರು ಇದೇ ಕಾರಣಕ್ಕೆ ಲಾಕ್ ಡೌನ್ ಮಾಡದೇ ಫ್ರೀ ಬಿಟ್ಟಿದ್ದರು. ಲಾಕ್ ಡೌನ್ ತಂಟೆಗೆ ಹೋಗಲಿಲ್ಲ. ರೆವಿನ್ಯೂ ಇದ್ರೆ ಟ್ರೀಟ್ ಮಾಡಬಹುದು ಅನ್ನೋದು ಅವರ ಆಲೋಚನೆಯಾಗಿತ್ತು. ಇಲ್ಲಿವರೆಗೂ ಏನು ಮಾಡಬೇಕು ಆ ಹಂತ ದಾಟಿದ್ದೇವೆ. ಇನ್ನು ಮುಂದೆ ಕೊರೋನಾ ವೈರಸ್ ಜೊತೆ ಬದುಕಬೇಕು. ಬೇರೆ ದಾರಿ ಇಲ್ಲ ಕೊರೋನಾ ಜೊತೆ ಬದುಕುತ್ತೆವೆ ಎಂಬುದು ಸಾಧ್ಯವಾಗಬೇಕಿದೆ. ಜಿಲ್ಲೆಯಿಂದ ಜಿಲ್ಲೆಗೆ ಹೋಗುವರನ್ನು ತಡೆಯಲಾಗುವುದಿಲ್ಲ. ಕೇವಲ ಹೊರರಾಜ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕಿದೆ ಎಂದರು.

ಅಲ್ಲದೇ, ಶಾಸಕರಾದ ಗೋಪಾಲಸ್ವಾಮಿ ಮತ್ತು  ಶಿವಲಿಂಗೇಗೌಡರ ಮನವಿಗೆ ಸ್ಪಂದಿಸಿದ ಸಚಿವ ಮಾಧುಸ್ವಾಮಿ ಹಾಸನ ಜಿಲ್ಲೆಗೆ ಹೊರ ರಾಜ್ಯದಿಂದ ಬರುವುದನ್ನು ತಡೆಯುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ ಎಂಬ ಭರವಸೆ ನೀಡಿದರು.

ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ 16 ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂಬ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತರಲ್ಲಿ ಹೊರರಾಜ್ಯದಿಂದ ಬಂದವರಾಗಿದ್ದು, ಜಿಲ್ಲೆಗೆ ಬಂದ ತಕ್ಷಣವೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಅವರಿಂದ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

ಹೊರಗಡೆಯಿಂದ ಯಾರಾದರೂ ಬಂದಿದ್ದಾರೆ ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ. ಇದರಿಂದ ಸುತ್ತಮುತ್ತಲಿನ ಜನರಿಗೂ ಒಳ್ಳೆಯದಾಗುತ್ತದೆ ಎಂದರು. ಹೊರರಾಜ್ಯದಿಂದ ಬಂದವರಲ್ಲಿ 16 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಅವರು ಯಾರೊಂದಿಗೂ ಸಂಪರ್ಕ ಹೊಂದದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಜಿಲ್ಲೆಗಳಿಗೆ ಬಿಡಲಾಗುತ್ತದೆ ಎಂದು ಹೇಳಿದರು.

ಹೊರರಾಜ್ಯದಿಂದ ಬಂದವರನ್ನು ತಪಾಸಣೆ ಮಾಡಿದ ನಂತರ ಫಲಿತಾಂಶ ಋಣಾತ್ಮಕ ವಾಗಿದ್ದರೆ ಅವರನ್ನು ಕಡ್ಡಾಯವಾಗಿ ಹದಿನಾಲ್ಕು ದಿನಗಳ ಕ್ವಾರಂಟೈನ್  ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದರಲ್ಲದೆ, ಹದಿನಾಲ್ಕು ದಿನಗಳ ನಂತರ ಫಲಿತಾಂಶ ಋಣಾತ್ಮಕವಾಗಿ ಬಂದರೆ ಅಂತಹವರನ್ನು ಪುನಃ 14 ದಿನಗಳ ಹೋಂ ಕೊರಂಟೈನ್ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಧುಸ್ವಾಮಿ ಅವರು ತಿಳಿಸಿದ್ದಾರೆ.

17 ರಂದು ಪ್ರಧಾನ ಮಂತ್ರಿಯವರು ಹೊಸ ಕ್ರಮ ಜರುಗಿಸಲಿದ್ದು ಅವರ ಆದೇಶದಂತೆ ಜಿಲ್ಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಕ್ವಾರಂಟೈನ್ ಕೇಂದ್ರದಲ್ಲಿರುವವರನ್ನು ಒಬ್ಬೊಬ್ಬರನ್ನೇ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಇನ್ನೊಬ್ಬರೊಂದಿಗೆ ಸಂಪರ್ಕ ಹೊಂದಿದಂತೆ ಕ್ರಮ ಕೈಗೊಂಡು ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡುವ ಕ್ರಮಕೈಗೊಳ್ಳಲಾಗಿದೆ ಎಂದರು.

ಲಾಕ್ ಡೌನ್ ಮೊದಲ ದಿನದಿಂದ ರೈತರ ಯಾವುದೇ ಕೃಷಿ ಚಟುವಟಿಕೆಗಳಿಗೆ ನಿರ್ಬಂಧಿಸಿಲ್ಲ. ಅವರು ಬೆಳೆದ ತರಕಾರಿ ಹಣ್ಣು ಹೂಗಳಲ್ಲಿ ನಷ್ಟವಾದರೆ ಅವರಿಗೆ ಪ್ಯಾಕೇಜ್ ನೀಡಲಾಗುತ್ತಿದ್ದು, ಪ್ರಾಕೃತಿಕವಾಗಿ ರೈತರಿಗೆ ನಷ್ಟವಾದರೆ ಪರಿಹಾರ ನೀಡಲಾಗುತ್ತದೆ ಎಂದರು.

ಹಾಸನ ಜಿಲ್ಲೆಗೆ ಬಾಂಬೆ ಕಂಟಕವಾಗಿದ್ದು, ಬಾರೀ  ಹೊಡೆತ ಬಿದ್ದಿದೆ. ಹಾಸನ ಜಿಲ್ಲೆಯಲ್ಲಿ ಯಾವುದೇ ಒಂದು ಪಾಸಿಟಿವ್ ಕೇಸ್ ಇಲ್ಲದೇ ಗ್ರೀನ್ ಝೋನ್ ನಲ್ಲಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ 16 ಪಾಸಿಟಿವ್ ಕೇಸ್ ಆಗಿದ್ದು ರೆಡ್ ಝೋನ್ ಆಗಿದೆ. ಬಾಂಬೆಯಿಂದ ಹಾಸನಕ್ಕೆ ಬಂದವರಲ್ಲಿ ಆಯಾ ಕುಟುಂಬದವರಿಗೇ ಕೊರೋನಾ ಸೋಂಕು ತಗುಲಿದ್ದು, ಜನಪ್ರತಿನಿಧಿಗಳು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟಾರೆ ಹೊರ ರಾಜ್ಯದಿಂದ ಹಾಸನ ಜಿಲ್ಲೆಗೆ ಬರುವವರನ್ನು ತಡೆದರೆ ಈಗಲಾದರೂ ಕೊರೋನಾ ಮಹಾಮಾರಿಯಿಂದ ಸ್ವಲ್ಪಮಟ್ಟಿಗೆ ಹಾಸನ ಜಿಲ್ಲೆಯನ್ನು ಪಾರು ಮಾಡಬಹುದಾಗಿದೆ.
First published: May 15, 2020, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading