ಏ. 14ರವರೆಗೆ ಸಂತೆ ರದ್ದು; ಮನೆಬಾಗಿಲಿಗೇ ತರಕಾರಿ ಗಾಡಿ; ಸಾಮಾಜಿಕ ಅಂತರ ಕಡ್ಡಾಯ: ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್

ರಸ್ತೆಗಳಲ್ಲಿ ಅನಾವಶ್ಯಕವಾಗಿ ಅಲೆದಾಡುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆ ಅರಿತು ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ತಿಳಿಸಿದರು.

news18-kannada
Updated:March 27, 2020, 11:40 AM IST
ಏ. 14ರವರೆಗೆ ಸಂತೆ ರದ್ದು; ಮನೆಬಾಗಿಲಿಗೇ ತರಕಾರಿ ಗಾಡಿ; ಸಾಮಾಜಿಕ ಅಂತರ ಕಡ್ಡಾಯ: ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್
ಅಂಗಡಿಗಳ ಮುಂದೆ ಗೆರೆ ಹಾಕುತ್ತಿರುವ ಹಾಸನ ಪೊಲೀಸರು.
  • Share this:
ಹಾಸನ: ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ಯಾವುದೇ ದಿನಸಿ ಅಂಗಡಿ ಅಥವಾ ಔಷಧಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಮಾರ್ಕಿಂಗ್ ಹಾಗೂ ಮೇಲ್ವಿಚಾರಣೆ ಮಾಡದಿದ್ದರೆ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದರು.

ಇನ್ನು ಮುಂದೆ, ಏ.14 ರವರೆಗೆ ಜಿಲ್ಲೆಯಲ್ಲಿ ಎಲ್ಲಾ ಸಂತೆಗಳನ್ನು ರದ್ದುಪಡಿಸಬೇಕು. ಸಂತೆಗೆ ಬರುತ್ತಿದ್ದ ತರಕಾರಿಗಳ ವಾಹನಗಳನ್ನು ವಾರ್ಡ್‍ವಾರು ಕಳಿಸಿ ಮನೆಗಳ ಬಾಗಿಲ ಮುಂದೆಯೇ ಜನರಿಗೆ ಖರೀದಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಎಲ್ಲಾ ಪಾರ್ಕ್​ಗಳು ಹಾಗೂ ಮೈದಾನಗಳಲ್ಲಿ ಬೆಳಗಿನ ವಾಕಿಂಗ್ ನಿರ್ಬಂಧಿಸಲಾಗಿದ್ದು, ಜನರು ಇದನ್ನು ಪಾಲನೆ ಮಾಡಬೇಕು. ಎಲ್ಲಾ ತಾಲ್ಲೂಕುಗಳಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿ ತರಬೇತಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹಾಗೂ ಇತರೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಬಳಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: ರಿಪೋ ದರ 75, ರಿವರ್ಸ್ ರೆಪೋ 90 ಮೂಲಾಂಕ ಇಳಿಕೆ; 3 ತಿಂಗಳು ಸಾಲ ಮರುಪಾವತಿಗೆ ವಿನಾಯಿತಿ

ಮಹಾರಾಷ್ಡ್ರ, ಬೆಂಗಳೂರು-ಕೇರಳ ಕಡೆಯಿಂದ ಬಂದವರ ಮೇಲೆ ವಿಶೇಷ ನಿಗಾವಹಿಸಿ. ಶುಕ್ರವಾರ ಮಧ್ಯಾಹ್ನದ ಒಳಗೆ ಈ ಬಗ್ಗೆ ಮನೆ ಮನೆ ಸರ್ವೆ ನಡೆಸಿ ಆರೋಗ್ಯ ವರದಿ ಹಾಗೂ ಸೋಂಕು ತಗುಲಿರಬಹುದಾದ ಸಂಭವನೀಯತೆ ಪಟ್ಟಿ ಮಾಡಿ ತಮಗೆ ನೀಡುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ತಿಳಿಸಿದರು.

ಎಲ್ಲಾ ತಹಶೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಆಶಾ ಕಾರ್ಯಕರ್ತೆಯರನ್ನು ಗ್ರಾಮ ಸಹಾಯಕರುಗಳನ್ನು ಬಳಸಿಕೊಂಡು ತಕ್ಷಣ ಗುರಿ ಮುಗಿಸಿ ಎಂದು ಹೇಳಿದರು.

ಏ. 14 ರವರೆಗೆ ರಾಗಿ ಮತ್ತು ಭತ್ತವನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ತಹಶೀಲ್ದಾರರು ಸ್ಥಳೀಯವಾಗಿ ನಿರ್ಧಾರ ಮಾಡಿ ಮಾನವ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಿ. ಹಣಕಾಸು ವಹಿವಾಟು ನಡೆಸುವ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕು, ಇದೇ ರೀತಿ ತುರ್ತು ಸೇವಾ ಇಲಾಖೆಗಳು ದೈನಂದಿನ ಕೆಲಸ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.ಇದನ್ನೂ ಓದಿ: ಲಾಠಿ ಬಳಸದಂತೆ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರು ಮಾತನಾಡಿ, ಅನೇಕ ಪೋಷಕರು ತಮ್ಮ ಮಕ್ಕಳು ಹೊರ ಜಿಲ್ಲೆಗಳಲ್ಲಿ ಹಾಸ್ಟೆಲ್‍ಗಳಲ್ಲಿದ್ದು, ಅವರನ್ನು ಕರೆತರಬೇಕೆಂದು ಮನವಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹವುಗಳನ್ನು ಪ್ರೋತ್ಸಾಹಿಸಲಾಗುವುದಿಲ್ಲ. ವಿದ್ಯಾರ್ಥಿಗಳನ್ನು ಸರಿಯಾಗಿ ನೋಡಿಕೊಳ್ಳದೆ ಮನೆಗೆ ಹೋಗಿ ಎಂದು ಒತ್ತಾಯಿಸುವುದು ಹಾಗೂ ಊಟ ತಿಂಡಿ ನೀಡದ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‍ಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆಗಳಲ್ಲಿ ಅನಾವಶ್ಯಕವಾಗಿ ಅಲೆದಾಡುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆ ಅರಿತು ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ತಿಳಿಸಿದರು.

ವರದಿ: ಡಿಎಂಜಿ ಹಳ್ಳಿ ಅಶೋಕ್

First published: March 27, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading