ಹಾಸನ (ಮೇ. 24): ಎರಡನೇ ಅಲೆಯ ಮಾಹಾಮಾರಿ ಕೊರೋನಾ ಸೋಂಕು ಅದೆಷ್ಟು ಕುಟುಂಬಗಳನ್ನು ಅನಾಥವಾಗಿಸಿವೆ ಲೆಕ್ಕಕ್ಕೆ ಇಲ್ಲ. ಮನೆಯಲ್ಲಿ ಒಬ್ಬರು ಸೋಂಕಿನಿಂದ ಹುಷಾರಾದರು ಎನ್ನುವಷ್ಟರಲ್ಲಿ ಮತ್ತೊಬ್ಬರು ಜೀವ ಕಳೆದುಕೊಂಡು ಕಂಗಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಅರಸೀಕೆರೆಯಲ್ಲೂ ಕೂಡ ಕುಟುಂಬವೊಂದು ಸೋಂಕಿಗೆ ತುತ್ತಾಗಿ ಇಂದು ಚಿಕಿತ್ಸೆಗೂ ಹಣವಿಲ್ಲದಂತಹ ಕರುಣಾಜನಕ ಸ್ಥಿತಿಯಲ್ಲಿದೆ. ಸೋಂಕಿಗೆ ತುತ್ತಾದ ಮಗಳ ರಕ್ಷಣೆಗೆ ಮುಂದಾಗಿದ್ದ ತಂದೆ ಆಕೆಯನ್ನು ಉಳಿಸಿಕೊಳ್ಳಲು ಇದ್ದ ಎರಡು ಎಕರೆ ಜಮೀನು ಮಾರಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೇನು ಮಗಳು ಆರಾಮಾಗಿ ಮನೆಗೆ ಸೇರಿದಳು ಎನ್ನುವಷ್ಟರಲ್ಲಿ ಹೆಂಡತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೆಂಡತಿ ಶವ ಸಂಸ್ಕಾರ ಮುಗಿಸಿ ಮನೆಗೆ ಬಂದಾಗ ಮಂಜುನಾಥ್ ಮತ್ತು ಅವರ ಮಗ ಕೂಡ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದಾರೆ.
ಏನಿದು ಘಟನೆ
ಹಾಸನದ ಅರಸೀಕೆರೆ ತಾಲೂಕಿನ ಬೆಲವತ್ತಳ್ಳಿಯ ಮಂಜುನಾಥ್ ಎಂಬುವವರ 18 ವರ್ಷದ ಮಗಳು ಮೇ 12ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನ ಹಿನ್ನಲೆ ಆಕೆಯನ್ನು ಅರಸೀಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯ ಬಿಲ್ 3. 5 ಲಕ್ಷ ಬಂದಿದ್ದು, ಇದಕ್ಕಾಗಿ ಮಂಜುನಾಥ್ ತಮ್ಮ ಎರಡು ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಹೋದರೆ ಹೋಯಿತು. ಮಗಳು ಆರಾಮಗೆ ಮನೆಗೆ ಬಂದಳು ಎಂದು ಸಂತಸ ಪಡುವ ವೇಳೆಗೆ ಮಂಜುನಾಥ್ ಹೆಂಡತಿ ಪುಷ್ಪಾಗೆ ಸೋಂಕು ಕಾಣಿಸಿಕೊಂಡಿದೆ. ತಕ್ಷಣಕ್ಕೆ ಆವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ, 48 ವರ್ಷದ ಪುಷ್ಪಾ ಕಳೆದ ಗುರುವಾರ ಸಾವನ್ನಪ್ಪಿದ್ದರು.
ಈಗಾಗಲೇ ಮಗಳ ಚಿಕಿತ್ಸೆಗೆ ಇದ್ದ ಜಮೀನು ಮಾರಾಟ ಮಾಡಿದ್ದ ಕುಟುಂಬಕ್ಕೆ ಹೆಂಡತಿ ಶವವನ್ನು ಪಡೆಯಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೇ ಒಂದು ಲಕ್ಷ ಬಿಲ್ ಕಟ್ಟಲು ಹಣವಿಲ್ಲದೇ ಕುಟುಂಬ ಕಂಗಲಾಗಿತ್ತು. ಹಣ ಕಟ್ಟದೇ ಶವವನ್ನು ಕೊಡುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದರು. ಈ ಸುದ್ದಿ ತಿಳಿದ ತಕ್ಷಣ ಎಚ್ಡಿ ರೇವಣ್ಣ ನೆರವಿಗೆ ಧಾವಿಸಿದ್ದರು. ತಕ್ಷಣಕ್ಕೆ ಆಸ್ಪತ್ರೆ ಮತ್ತು ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿ 20 ಸಾವಿರ ಹಣ ಕೊಟ್ಟು ಶವನ್ನು ನೀಡಿದ್ದರು.
ಇದನ್ನು ಓದಿ: ರಾಜ್ಯದ ಮೊದಲ ವೈಟ್ ಫಂಗಸ್ ಪ್ರಕರಣ ರಾಯಚೂರಿನಲ್ಲಿ ಪತ್ತೆ
ಹೆಂಡತಿ ಶವ ಪಡೆದು ಅಂತ್ಯ ಕ್ರಿಯೆ ಮುಗಿಸಿ ಬಂದ ಮಂಜುನಾಥ್ ಮತ್ತ ಅವರ ಮಗನಿಗೂ ಈಗ ಸೋಂಕು ತಗುಲಿದೆ. ಚಿಕಿತ್ಸೆಗೆ ಹಣವಿಲ್ಲದೇ ಕುಟುಂಬ ಕಣ್ಣೀರಿಡುತ್ತಿದೆ. ಇತ್ತ ಅಮ್ಮನ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ನೆರವಾಗಿ ಎಂದು ಮಂಜುನಾಥ್ ಅಂಗಲಾಚುತ್ತಿದ್ದಾರೆ.
ಚಿಕಿತ್ಸೆಗೆ ಆಸ್ಪತ್ರೆ ದಾಖಲಾದ ಗಂಡಸರು, ಮಹಿಳೆಯರ ಮೇಲೆ ಗ್ರಾಮಸ್ಥರ ದೌರ್ಜನ್ಯ
ಎರಡನೇ ಅಲೆ ಕೊರೋನಾ ಹೆಚ್ಚು ತೀವ್ರತೆ ಹೊಂದಿದ್ದು, ಸಾಕಷ್ಟು ಸಮಸ್ಯೆಯನ್ನು ತಂದೊಡ್ಡುತ್ತಿದೆ. ಅಲ್ಲದೇ ಈ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹಬ್ಬಿದ್ದು, ಹಳ್ಳಿ ಜನರಲ್ಲೂ ಕೂಡ ಸಾಕಷ್ಟು ಆತಂಕ ತಂದೊಡ್ಡಿದೆ. ಗ್ರಾಮದಲ್ಲಿ ಯಾರೇ ಸೋಂಕಿತರು ಕಂಡು ಬಂದರೂ ಗ್ರಾಮಸ್ಥರು ಬೆಚ್ಚುತ್ತಿದ್ದಾರೆ. ಹಾಸನದ ಜಿಲ್ಲೆಯ ಅರಕಲ ಗೂಡು ತಾಲೂಕಿನ ಎಸ್ಆರ್ಪಿ ವಡ್ಡರಹಳ್ಳಿ ಗ್ರಾಮದಲ್ಲಿ ಮನೆಯ ಕುಟುಂಬದ ಪುರುಷ ಸದಸ್ಯರು ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಿಂದ ಗಾಬರಿಗೊಂಡ ಊರ ಜನ ಮನೆಯ ಮಹಿಳಾ ಸದಸ್ಯರಿಗೆ ದೌರ್ಜನ್ಯ ನಡೆಸುತ್ತಿರುವ ಘಟನೆ ನಡೆದಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಯಿಂದ ಹೊರ ಬಾರದಂತ ಸ್ಥಿತಿ ನಿರ್ಮಿಸಿದ್ದು, ಮಹಿಳೆಯರು ಕಂಗಾಲಾಗಿದ್ದಾರೆ. ಗ್ರಾಮಸ್ಥರ ದೌರ್ಜನ್ಯ ಖಂಡಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಅಲ್ಲೂ ಕೂಡ ದೂರು ಸ್ವೀಕರಿಸುತ್ತಿಲ್ಲ. ಗ್ರಾಮಸ್ಥರಿಂದ ರಕ್ಷಣೆ ನೀಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
(ಮಾಹಿತಿ : ಶಶಿಧರ್) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ