ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ವಾರಾಂತ್ಯದ ಲಾಕ್‌ಡೌನ್‌ ಪ್ರಕ್ರಿಯೆಗೆ ಮೊರೆಹೋದ ಹರಿಯಾಣ ಸರ್ಕಾರ

ಕೊರೋನಾ ವೈರಸ್ ಉಲ್ಬಣಗೊಂಡಿರುವ ಕಾರಣಕ್ಕಾಗಿ ಈಗಾಗಲೇ ಪಂಜಾಬ್ 167 ನಗರಗಳು ಮತ್ತು ಪಟ್ಟಣಗಳಲ್ಲಿ ದೈನಂದಿನ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ ಡೌನ್ ಘೋಷಿಸಿದ ಒಂದು ದಿನದ ನಂತರ ಹರಿಯಾಣ ರಾಜ್ಯವೂ ಇದೇ ಕ್ರಮಕ್ಕೆ ಮುಂದಾಗಿರುವುದು ಉಲ್ಲೇಖಾರ್ಹ.

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

  • Share this:
ಹರಿಯಾಣ (ಆಗಸ್ಟ್‌ 21); ರಾಷ್ಟ್ರ ರಾಜಧಾನಿ ದೆಹಲಿಯ ಜೊತೆಗೆ ಗಡಿ ಹಂಚಿಕೊಂಡಿರುವ ಹರಿಯಾಣದಲ್ಲಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹರಿಯಾಣದಲ್ಲಿ ಈವರೆಗೆ 50,000ಕ್ಕೂ ಹೆಚ್ಚು ಜನ ಕೊರೋನಾ ವೈರಸ್‌ಗೆ ತುತ್ತಾಗಿದ್ದಾರೆ. ಅಲ್ಲದೆ, 578 ಜನ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಹರಿಯಾಣ ಸರ್ಕಾರ ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಪ್ರತಿ ಶನಿವಾರ ಮತ್ತು ಭಾನುವಾರ ತನ್ನ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

ವಾರಾಂತ್ಯದ ಪ್ರತಿ ಶನಿವಾರ ಮತ್ತು ಭಾನುವಾರ ಹರಿಯಾಣ ರಾಜ್ಯದಲ್ಲಿ ಅಗತ್ಯ ವಸ್ತುಗಳ ಹೊರತು ಬೇರೆ ಯಾವ ಅಂಗಡಿಗಳು ಹಾಗೂ ಕಚೇರಿಗಳು ತೆರೆದಿರುವುದಿಲ್ಲ. ಎಲ್ಲವನ್ನೂ ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಸಚಿವ ಅನಿಲ್ ವಿಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ, ಈ ವೇಳೆ ಜನರ ಚಲನವಲನಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಕೊರೋನಾ ವೈರಸ್ ಉಲ್ಬಣಗೊಂಡಿರುವ ಕಾರಣಕ್ಕಾಗಿ ಈಗಾಗಲೇ ಪಂಜಾಬ್ 167 ನಗರಗಳು ಮತ್ತು ಪಟ್ಟಣಗಳಲ್ಲಿ ದೈನಂದಿನ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ ಡೌನ್ ಘೋಷಿಸಿದ ಒಂದು ದಿನದ ನಂತರ ಹರಿಯಾಣ ರಾಜ್ಯವೂ ಇದೇ ಕ್ರಮಕ್ಕೆ ಮುಂದಾಗಿರುವುದು ಉಲ್ಲೇಖಾರ್ಹ.

ಆಗಸ್ಟ್ 31 ರವರೆಗೆ ಪಂಜಾಬ್‌ನಲ್ಲಿನ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ, ಸಾರ್ವಜನಿಕ ಕೂಟಗಳ (ಮದುವೆ ಮತ್ತು ಅಂತ್ಯಕ್ರಿಯೆಗಳನ್ನು ಹೊರತುಪಡಿಸಿ) ಮೇಲಿನ ನಿರ್ಬಂಧವೂ ಮುಂದುವರೆಯುತ್ತದೆ. ಇದಲ್ಲದೆ, ಕೊರೋನಾ ಪೀಡಿತ ಜಿಲ್ಲೆಗಳಲ್ಲಿ ಅನಿವಾರ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಶೇ.50 ರಷ್ಟು ಅಂಗಡಿಗಳನ್ನು ಮುಚ್ಚುವಂತೆಯೂ ಆದೇಶಿಸಲಾಗಿದೆ.

ಇದನ್ನೂ ಓದಿ : ಬೌದ್ದಿಕ ದಾರಿದ್ಯ್ರದಿಂದಾಗಿ ಬಿಜೆಪಿ ನಾಯಕರು ನಳಿನ್ ಎಂಬ ನಕಲಿ ಶ್ಯಾಮನನ್ನು ಅಧ್ಯಕ್ಷ ಸ್ಥಾನಕ್ಕೇರಿಸಿದ್ದಾರೆ; ಸಿದ್ದರಾಮಯ್ಯ ಕಿಡಿ

ಕಳೆದ ಜನವರಿಯಲ್ಲಿ ಕೊರೋನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ 27ನೇ ಸ್ಥಾನದಲ್ಲಿತ್ತು. ಆದರೆ, ಪ್ರಸ್ತುತ ಅಮೆರಿಕ ಮತ್ತು ಬ್ರೆಜಿಲ್ ನಂತರದ ಮೂರನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿ ಭಾರತ ಗುರುತಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಒಂದೇ ದಿನದಲ್ಲಿ ದೇಶದಲ್ಲಿ 68,898 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 29 ಲಕ್ಷಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೋನಾ ಸೋಂಕಿನಿಂದ ದೇಶಾದ್ಯಂತ ಸುಮಾರು 21 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಳೆದ 17 ದಿನಗಳಿಂದ ಭಾರತವು ಅತಿ ಹೆಚ್ಚು ದೈನಂದಿನ COVID-19 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಆದರೆ, ಸಾವಿನ ಪ್ರಮಾಣವು ಶೇ.1.89 ಕ್ಕೆ ಇಳಿದಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
Published by:MAshok Kumar
First published: