ಕೊಪ್ಪಳಕ್ಕೆ ಕೊರೋನಾ ಕಂಟಕ ತಂದಿದ್ದ ಗುರು ಬಸವರಾಜ ಸೇಫ್; ಹೊಳಗುಂದಿ ಪ್ರಕರಣಕ್ಕೆ ಎಳ್ಳು ನೀರು!

ಬಿಜೆಪಿಯ ಕ್ರಾಸ್ ಚೆಕ್ ಕೆಲಸವನ್ನು ಮೊದಲೇ ಅರಿತಿದ್ದ ಹೊಳಗುಂದಿ ಒಡನಾಡಿ ಬಿಜೆಪಿ ನಾಯಕರು ಮೊದಲೇ ನಿರ್ಧರಿಸಿದಂತೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸದಲ್ಲಿ ಯಶ ಸಾಧಿಸಿದರು.

ಗುರು ಬಸವರಾಜ

ಗುರು ಬಸವರಾಜ

  • Share this:
ಕೊಪ್ಪಳ; ಜಿಲ್ಲೆಯಲ್ಲಿ ಕೊರೊನಾ ಭೀತಿಗೆ ಕಾರಣನಾಗಿದ್ದ ಬಿಜೆಪಿ ಗುರುಬಸವರಾಜ ಹೊಳಗುಂದಿ ಬಹುತೇಕ ಸೇಫ್ ಆಗಿದ್ದಾನೆ. ಹೊಳಗುಂದಿಯ ಪ್ರಭಾವಲಯ ಕೊನೆಗೂ ಆತನಿಗೆ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ದಕ್ಷ ಅಧಿಕಾರಿ ಪಿ.ಸುನೀಲ್‍ಕುಮಾರ್ ಅವರ ಜನಹಿತ ಕ್ರಮಕ್ಕೆ, ರಾಜಕಾರಣಿಗಳು ಪೊಲೀಸ್ ಇಲಾಖೆ ಸಾಥ್ ನೀಡದೇ ಮುಚ್ಚಲ್ಪಡುವ ದುಷ್ಕೃತ್ಯಗಳ ಪಟ್ಟಿಗೆ ಹೊಳಗುಂದಿ ಪ್ರಕರಣವನ್ನೂ ಸೇರಿಸಿ ಮೊಳೆ ಹೊಡೆದಿದ್ದಾರೆ.

ಕೊರೊನಾ ವಿಷಯದಲ್ಲಿ ಕೊಪ್ಪಳ ಇಂದಿಗೂ ಸೇಫ್. ಸುಮಾರು 785 ಜನರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿದ್ದು ಎಲ್ಲವೂ ನೆಗೆಟಿವ್ ರಿಜಲ್ಟ್ ಬಂದಿವೆ. ಸುಮಾರು ಎರಡು ವಾರಗಳ ಹಿಂದೆ ಹೊಳಗುಂದಿ ತಂದಿಟ್ಟ ಮುಂಬೈ ಮೂಲದ ಯುವತಿ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.

ಜಿಲ್ಲಾಧಿಕಾರಿ ಸುನೀಲ್‍ಕುಮಾರ್ ಯಾರ ಮುಲಾಜನ್ನೂ ನೋಡದ ಪರಿಣಾಮ ಡಿಸಿಯವರ ಆದೇಶದನ್ವಯ ತಹಶೀಲ್ದಾರ್ ಮಜ್ಜಿಗೆಯವರು ಹೊಳಗುಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಹೊಳಗುಂದಿಯನ್ನ ಕ್ವಾರಂಟೈನ್‍ಗೆ ಹಾಕಿದ್ದರು.ಈ ಪ್ರಕರಣ ಜಿಲ್ಲೆಯಾದ್ಯಂತ ದೊಡ್ಡ ಸದ್ದು ಮಾಡಿ ಸಂಚಲನದ ಜೊತೆಗೆ ಜನರಲ್ಲಿ ಆತಂಕವನ್ನು ತಂದೊಡ್ಡಿತ್ತು.

ರಾಜೀ ರಾಜಕಾರಣಕ್ಕೆ ಹೆಸರಾದ ಕಾಂಗ್ರೆಸ್‍ನವರು ಕೊನೆಗೂ ಬಿಜೆಪಿ ವಿರುದ್ಧ ಹರಿ ಹಾಯ್ದು ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದರು. ವಿಷಯದ ಗಂಭೀರತೆ ಅರಿತು ಸರಕಾರ, ಪ್ರಕರಣವನ್ನು ಸಿಬಿಐಗೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಹತ್ತಾರು ವರದಿ ತರಿಸಿಕೊಂಡ ಬಿಜೆಪಿ:

ಕೊಪ್ಪಳದ ಹೊಳಗುಂದಿ ಪ್ರಕರಣದಿಂದ ಮುಜುಗರಕ್ಕೊಳಗಾದ ಸರಕಾರ ಹಾಗೂ ಬಿಜೆಪಿ ವರಿಷ್ಠರು, ಆರ್ ಎಸ್‍ಎಸ್‍ ನಾಯಕರು ಹೊಳಗುಂದಿಗೆ ಸಂಬಂಧಿಸಿದಂತೆ ಹತ್ತಾರು ಕಡೆಯಿಂದ ವರದಿ ತರಿಸಿಕೊಂಡರು. ವರದಿ ಕಳಿಸಿದ ಜಿಲ್ಲೆಯ ಎಲ್ಲ ಮುಖಂಡರು, ಗುರುಬಸವರಾಜ ಹೊಳಗುಂದಿ ಬಿಜೆಪಿಗೆ ಸಂಬಂಧಪಟ್ಟವನೇ ಅಲ್ಲ. ಅವನೊಬ್ಬ “ಉದ್ಯಮಿ” ಎಂದು ವರದಿ ನೀಡಿದ್ದರಿಂದ ನಿರಾಳಗೊಂಡ ಸರಕಾರ ಕಾಟಾಚಾರಕ್ಕೆ ಎಂಬಂತೆ ಪ್ರಕರಣವನ್ನು ಐಜಿ ತನಿಖೆಗೆ ನೀಡಿತು.

ಬಿಜೆಪಿಯ ಕ್ರಾಸ್ ಚೆಕ್ ಕೆಲಸವನ್ನು ಮೊದಲೇ ಅರಿತಿದ್ದ ಹೊಳಗುಂದಿ ಒಡನಾಡಿ ಬಿಜೆಪಿ ನಾಯಕರು ಮೊದಲೇ ನಿರ್ಧರಿಸಿದಂತೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸದಲ್ಲಿ ಯಶ ಸಾಧಿಸಿದರು. ಹೊಳಗುಂದಿಯನ್ನು ಬಿಜೆಪಿ ಮುಖಂಡ ಎಂದು ಒಪ್ಪಿಕೊಂಡಿದ್ದರೆ ಪಕ್ಷದ ಆಂತರಿಕ ಕ್ರಮದ ಜೊತೆಗೆ ಕಾನೂನು ಕ್ರಮವನ್ನು ಹೊಳಗುಂದಿ ಎದುರಿಸಬೇಕಿತ್ತು.

ಈ ವರದಿಯಿಂದ ಹೊಳಗುಂದಿ ಜೊತೆಗಿನ ಬಾಂಧವ್ಯವೂ ಉಳಿಯುವಂತಾಯಿತು. ಹೊಳಗುಂದಿಯೂ ಸೇಫ್ ಆದಂತಾಯಿತು. ಅಬ್ಬಬ್ಬಾ ಎಂದರೆ ಬಹಿರಂಗವಾಗಿ ಮಾತ್ರ ಹೊಳಗುಂದಿ ಬಿಜೆಪಿಗೆ ಸಂಬಂಧಪಟ್ಟಿಲ್ಲ ಅಂತ ಹೇಳಬಹುದಷ್ಟೇ. ಅದೂ ಪ್ರಕರಣದ ಬಿಸಿ ಆರುವವರೆಗೆ ಮಾತ್ರ. ಮತ್ತೊಂದು ಚುನಾವಣೆ ಬಂತೆಂದರೆ ಹೊಳಗುಂದಿ ಮತ್ತೇ ಮೇಲ್ಪಂಕ್ತಿಗೆ ಬರಬಹುದು.ಜಿಲ್ಲಾಡಳಿತದ ದೂರನ್ನ ಆಧರಿಸಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಇಡೀ ಪ್ರಕರಣವನ್ನು ಅರಿತಿದೆ.

ಆದರೆ ಸಮರ್ಪಕ ಸಾಕ್ಷಿ, ಆಧಾರ ಬಯಸುವ ನ್ಯಾಯಾಲಯದಲ್ಲಿ ಹೊಳಗುಂದಿ ಪರ ವಕಾಲತ್ತು ವಹಿಸಿಕೊಳ್ಳಲು ಸಾಕಷ್ಟು ಜನ ಮುಂದಿದ್ದಾರೆ. ಹಾಗಾಗಿ ಹೊಳಗುಂದಿ ಸದ್ಯ ಕ್ವಾರೆಂಟೈನ್ ಅವಧಿಯಲ್ಲಿದ್ದು, ನಂತರ ಕಾನೂನು ಪ್ರಕಾರ ವಿಚಾರಣೆ ನಡೆಸಿ, ಖುಲಾಸೆಯಾಗಿ ಹೊರಬರುತ್ತಾನೆ. ಅಲ್ಲಿಗೇ  ಅನ್ಯಾಯದ ಎಲ್ಲ ಕೇಸುಗಳಂತೆ ಈ ಪ್ರಕರಣದ ದಾಖಲೆಗಳೂ ಸಹ ಪೊಲೀಸ್ ಠಾಣೆಯ ರ್ಯಾಕ್‍ನಲ್ಲಿ ಧೂಳು ತಿನ್ನುತ್ತಾ ಬೀಳುತ್ತವಷ್ಟೇ.

ಇಬ್ಬರ ಜಗಳ ಮೂರನೇಯವನಿಗೆ ನಷ್ಟ!:

ವಾಸ್ತವವಾಗಿ ಹೊಳಗುಂದಿ ಪ್ರಕರಣ ಬಯಲಾಗಲು ಕಾರಣ ಪೊಲೀಸ್ ಇಲಾಖೆಯ ಇಬ್ಬರು ಉನ್ನತಾಧಿಕಾರಿಗಳ ಮಾಮೂಲು ಸಂಗ್ರಹದ ಒಳಜಗಳ ಎಂಬ ಗುಸುಗುಸು ಕೇಳಲಾರಂಭಿಸಿದೆ. ಈ ಅಧಿಕಾರಿಗಳ ಹಾಗೂ ರಾಜಕಾರಣಿಗಳ ನಡುವೆ ಬಹುತೇಕ ವ್ಯವಹಾರಗಳ ಮಧ್ಯವರ್ತಿಯಾಗಿದ್ದ ಹೊಳಗುಂದಿ, ಅವರ ಜಗಳದಲ್ಲಿ ಬೇಳೆ ಬೇಯಿಸಿಕೊಳ್ಳಲು ಬಾಣಲೆಯ ಬಳಿ ಹೋಗಿ ಬೆಂಕಿಗೆ ಬಿದ್ದಂತಾಗಿದೆ.

(ವರದಿ - ಬಸವರಾಜ ಕರುಗಲ್)

 

ಇದನ್ನೂ ಓದಿ : ಕೊರೊನಾ ಸೋಂಕಿತನೊಂದಿಗೆ ಫೋನಲ್ಲಿ ಮಾತಾಡಿದವರು ಕ್ವಾರಂಟೈನ್​ಗೆ; ಇದನ್ನು ಪ್ರಶ್ನಿಸಿದ ಪತ್ರಕರ್ತ ಜೈಲಿಗೆ\
First published: