ನವ ದೆಹಲಿ (ಮೇ 20); ಲಾಕ್ಡೌನ್ ಹಂತ ಹಂತವಾಗಿ ತೆರವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯ ರಾಜ್ಯದಲ್ಲಿ 2 ಜೋಡಿ ರೈಲು ಓಡಾಟಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ, ಈ ಪ್ರಕಟಣೆಯಲ್ಲಿ ರೈಲು ಎಲ್ಲಿಂದ-ಎಲ್ಲಿಗೆ ಸಂಚರಿಸಲಿದೆ? ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡಿದೆ.
ಪ್ರಕಟಣೆಯಲ್ಲಿ ತಿಳಿಸಿರುವಂತೆ ಒಂದು ರೈಲು ಬೆಂಗಳೂರು- ಮೈಸೂರು ನಡುವೆ ಸಂಚರಿಸಿದರೆ, ಮತ್ತೊಂದು ರೈಲು ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸಲಿದೆ. ಬೆಂಗಳೂರಿನಿಂದ ಬೆಳಗಾವಿಗೆ ಹಾಗೂ ಬೆಳಗಾವಿಯಿಂದ ಬೆಂಗಳೂರಿಗೆ ವಾರದಲ್ಲಿ ತಲಾ 3 ದಿನ ರೈಲು ಸೇವೆ ಇರಲಿದೆ. IRCTC ಮುಖಾಂತರ ಮಾತ್ರ ಟಿಕೆಟ್ ಬುಕಿಂಗ್ ನಡೆಯಲಿದ್ದು, ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಇರುವುದಿಲ್ಲ. ಟಿಕೆಟ್ ಇದ್ದವರಿಗೆ ಮಾತ್ರ ರೈಲ್ವೆ ನಿಲ್ದಾಣಕ್ಕೆ ಅನುಮತಿ ಎಂದು ತಿಳಿಸಲಾಗಿದೆ.
![tarin]()
ರೈಲ್ವೆ ಇಲಾಖೆ ಪ್ರಕಟಣೆ.
ಭಾರತೀಯ ರೈಲ್ವೆ ಇಲಾಖೆ ಮತ್ತು ಸಚಿವ ಪಿಯೂಶ್ ಗೋಯಲ್ ಈ ಹಿಂದೆಯೇ ಜೂನ್ 1 ರಿಂದ ದೇಶದಾದ್ಯಂತ ಸುಮಾರು 200 ಎಸಿ ಅಲ್ಲದ ದ್ವಿತೀಯ ದರ್ಜೆಯ ರೈಲುಗಳ ಸಂಚಾರ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದರು. ಹೀಗಾಗಿ ರಾಜ್ಯದಲ್ಲೂ ಜೂನ್ 01 ರಿಂದ ಈ ರೈಲ್ವೆ ಸೇವೆ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಕೊರೋನಾದಿಂದಾಗಿ ರಾಷ್ಟ್ರದಾದ್ಯಂತ ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ಘೋಷಿಸಲಾಗಿತ್ತು. ಹೀಗಾಗಿ ರೈಲು ಸಂಚಾರವನ್ನೂ ಸ್ಥಗಿತ ಮಾಡಲಾಗಿತ್ತು. ಆದರೆ, ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಶ್ರಮಿಕ್ ರೈಲುಗಳನ್ನು ಆರಂಭಿಸಿತ್ತು. ಅಲ್ಲದೆ, 15 ಜೋಡಿ ವಿಶೇಷ ರೈಲಿನ ಸೇವೆಗೂ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ರೈಲ್ವೆ ಇಲಾಖೆ ಇದೀಗ ಹಂತ ಹಂತವಾಗಿ ಪೂರ್ಣ ಪ್ರಮಾಣ ಸೇವೆ ಆರಂಭಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ