ದೊಡ್ಡಬಳ್ಳಾಪುರ: ಪ್ರಪಂಚಕ್ಕೆ ವಕ್ಕರಿಸಿರುವ ಮಹಾಮಾರಿ ಕೊರೊನಾ ವೈರಸ್ ಯಾರನ್ನೂ ಬಿಡದೇ ಕಾಡುತ್ತಿದೆ. ಬೆಳೆ ಬೆಳೆದ ರೈತರಂತೂ ಅಕ್ಷರಶಃ ಕಂಗಾಲಾಗಿದ್ದಾರೆ. ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದೆ ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿಯಲ್ಲಿ ಪ್ರಭಾಕರ್ ಎಂಬ ರೈತರೊಬ್ಬರು 10 ಲಕ್ಷಕ್ಕೂ ಹೆಚ್ಚು ಹಣ ನಷ್ಟದ ಭೀತಿಯಲ್ಲಿದ್ದಾರೆ.
ಪ್ರಭಾಕರ್ 3 ಎಕರೆಯಲ್ಲಿ ದಿಲ್ ಖುಷ್ ದ್ರಾಕ್ಷಿಯನ್ನ ಬೆಳೆದಿದ್ದರು. ಈ ಸಲ ಭರ್ಜರಿ ಫಸಲು ಬಂದು ತೋಟದಲ್ಲಿ 50 ರಿಂದ 60 ಟನ್ ದ್ರಾಕ್ಷಿ ಗೊನೆಗಳು ತೂಗುತ್ತಿದ್ದವು. ಬರೋಬರಿ 12 ರಿಂದ 15 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ರೈತ ಕೃಷಮೂರ್ತಿಯ ಕನಸುಗಳನ್ನ ನೂಚ್ಚುನೂರು ಮಾಡಿದೆ ದೇಶದ್ಯಾಂತ ಜಾರಿಯಲ್ಲಿರುವ ಲಾಕ್ ಡೌನ್.
ದಿಲ್ ಖುಷ್ ದ್ರಾಕ್ಷಿಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಪ್ರಮುಖ ಮಾರುಕಟ್ಟೆ. ಆದರೆ ಲಾಕ್ ಡೌನ್ನಿಂದಾಗಿ ಫಸಲಿಗೆ ಬಂದಿರುವ ದ್ರಾಕ್ಷಿ ಹೊರರಾಜ್ಯಗಳಿಗೆ ಕಳುಹಿಸಲಾರದೆ ತೋಟದಲ್ಲೇ ಕೊಳೆಯುವಂತೆ ಮಾಡಿದೆ. 145 ದಿನಗಳೊಳಗೆ ದ್ರಾಕ್ಷಿಯನ್ನ ಕಟಾವ್ ಮಾಡಿ ಮಾರುಕಟ್ಟೆಗೆ ಸಾಗಿಸಬೇಕಿತ್ತು, ಈಗಾಗಲೇ 145 ದಿನಗಳು ಮೀರಿ ಗೊನೆಗಳಿಂದ ದ್ರಾಕ್ಷಿ ಉದುರಲು ಪ್ರಾರಂಭಿಸಿದೆ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್; ಬೆಳೆದ ತರಕಾರಿಯನ್ನು ಉಚಿತವಾಗಿ ಹಂಚಿದ ಕೊಡಗು ರೈತ
ತೋಟಕ್ಕೆ ಬರುತ್ತಿದ್ದ ಏಜೆಂಟರು ದ್ರಾಕ್ಷಿ ಖರೀದಿ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ನಿಂದ ಏಜೆಂಟರು ಸಹ ತೋಟದತ್ತ ಸುಳಿದಿಲ್ಲ. ಇತ್ತ ನಾವೇ ಮಾರುಕಟ್ಟೆಗೆ ಸಾಗಿಸಲು ಹೊರರಾಜ್ಯದವರು ಅನುಮತಿ ಕೊಡುತ್ತಿಲ್ಲ. ಇದರಿಂದಾಗಿ ತೋಟದಲ್ಲಿಯೇ ಲಕ್ಷಾಂತರ ಮೌಲ್ಯದ ದ್ರಾಕ್ಷಿ ಕೊಳೆಯುವಂತಾಗಿದೆ ಎಂದು ರೈತ ಪ್ರಭಾಕರ್ ತಮ್ಮ ನೋವು ತೊಡಿಕೊಂಡಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಒಂದು ಕಿಲೋ ದಿಲ್ಖುಷ್ ದ್ರಾಕ್ಷಿಗೆ 30 ರಿಂದ 40 ರೂಪಾಯಿಗೆ ದರ ಇದೆ. ಪ್ರಭಾಕರ್ ಅವರ ತೋಟದಲ್ಲಿ 50 ರಿಂದ 60 ಟನ್ ಫಸಲು ಬಂದಿದೆ. ಮಾರಾಟವಾಗಿದ್ದಲ್ಲಿ 12 ರಿಂದ 25 ಲಕ್ಷ ಹಣ ಸಿಗುತ್ತಿತ್ತು, ಆದರೀಗ ಮಾರುಕಟ್ಟೆಗೆ ಸಾಗಿಸಲಾಗದೆ ಲಕ್ಷಾಂತರ ರೂಪಾಯಿ ತೋಟದಲ್ಲಿಯೇ ಕೊಳೆಯುವಂತಾಗಿದೆ. ಬೆಳೆಗಾಗಿ ಮಾಡಿದ 3 ಲಕ್ಷ ರೂಪಾಯಿ ಸಾಲದ ಹೊರೆ ಇದೆ. ಇನ್ನು ದ್ರಾಕ್ಷಿಯನ್ನ ಸಮಯಕ್ಕೆ ಸರಿಯಾಗಿ ಕಟಾವ್ ಮಾಡದಿದ್ದಲ್ಲಿ ಗಿಡಕ್ಕೆ ತೊಂದರೆಯಾಗಲಿದೆ, ಇಂತಹ ಸಮಯದಲ್ಲಿ ಸರ್ಕಾರ ನಮ್ಮ ಕೈ ಹಿಡಿಯಲಿ ಎನ್ನುವ ಆಸೆಯಲ್ಲಿ ದ್ರಾಕ್ಷಿ ಬೆಳೆಗಾರ ಇದ್ದಾನೆ.
ಇಂತಹ ಸಮಯದಲ್ಲಿ ಸರ್ಕಾರ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಆತ ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವುದಾಗಲೀ, ಅಥವಾ ಪರಿಹಾರ ನೀಡುವುದಾಗಲೀ ಮಾಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ