• ಹೋಂ
  • »
  • ನ್ಯೂಸ್
  • »
  • Corona
  • »
  • ಸೋಂಕಿತರು ಬಾದಾಮಿ, ರಾಗಿ ಸೇರಿ ಈ 5 ಆಹಾರ ಸೇವಿಸಿದ್ರೆ ಸಾಕಂತೆ; ಕೇಂದ್ರದಿಂದಲೇ ಅಧಿಕೃತ ಸಲಹೆ

ಸೋಂಕಿತರು ಬಾದಾಮಿ, ರಾಗಿ ಸೇರಿ ಈ 5 ಆಹಾರ ಸೇವಿಸಿದ್ರೆ ಸಾಕಂತೆ; ಕೇಂದ್ರದಿಂದಲೇ ಅಧಿಕೃತ ಸಲಹೆ

ರಾಗಿ-ಬಾದಾಮಿ

ರಾಗಿ-ಬಾದಾಮಿ

ಈ 5 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಹಾರ ಸೇವಿಸುತ್ತಾ ಬಂದಲ್ಲಿ ದೇಹಕ್ಕೆ ಅಗತ್ಯ ಪ್ರಮಾಣದ ಪೋಷಕಾಂಶ ದೊರೆಯುತ್ತದೆ. ಒಳ್ಳೆಯ ಪ್ರೊಟೀನ್​, ವಿಟಮಿನ್​ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ವೈರಸ್​ನಿಂದ ಆದಷ್ಟು ಬೇಗ ಗುಣಮುಖರಾಗಬಹುದು.

  • Share this:

ನವದೆಹಲಿ: ದೇಶಾದ್ಯಂತ ನಿತ್ಯ 4 ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ಗುಣಮುಖರಾಗಲು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಡಿಮೆ ರೋಗ ಲಕ್ಷಣಗಳಿರುವವರು ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗೆ ಸೋಂಕಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವವರು ಆರೋಗ್ಯ ದೃಷ್ಟಿಯಿಂದ ಏನನ್ನು ತಿನ್ನಬೇಕೆಂದು ಕೇಂದ್ರ ಸರ್ಕಾರವೇ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.


ಸುಲಭವಾಗಿ ದೊರೆಯುವ ಈ 5 ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೋಂಕಿನಿಂದ ಗುಣಮುಖರಾಗಬಹುದು ಎಂದು ತಿಳಿಸಲಾಗಿದೆ. ಮೊದಲನೆಯದಾಗಿ ಸೋಂಕಿತರು ಮುಂಜಾನೆ ಎದ್ದ ಕೂಡಲೇ ನೆನೆಸಿದ ಬಾದಾಮಿ ಹಾಗೂ ಒಣದ್ರಾಕ್ಷಿಯನ್ನು ತಿನ್ನಬೇಕು. ಬಾದಾಮಿ ಉತ್ತಮ ಪ್ರೊಟೀನ್​ ನೀಡಿದರೆ, ಒಣದ್ರಾಕ್ಷಿ ಅಗತ್ಯ ಪ್ರಮಾಣದ ಕಬ್ಬಿಣಾಂಶವನ್ನು ನೀಡುತ್ತೆ. ಸೋಂಕಿನಿಂದ ಗುಣಮುಖರಾಗಲು ಒಳ್ಳೆಯ ಪ್ರೊಟೀನ್​, ಕಬ್ಬಿಣಾಂಶ ಮುಖ್ಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇನ್ನು ಸೋಂಕಿತರು ಬೆಳಗಿನ ಉಪಹಾರಕ್ಕೆ ರಾಗಿ ದೋಸೆ ತಿನ್ನುವುದು ಉತ್ತಮ. ರಾಗಿಯಲ್ಲಿ ಆರೋಗ್ಯಕರ ಅಂಶಗಳು ಹೇರಳವಾಗಿದ್ದು, ರಾಗಿಯನ್ನು ಸೇವಿಸುವುದು ಲಾಭದಾಯಕ ಎಂದು ಸಲಹೆ ನೀಡಿದ್ದಾರೆ. ಕರ್ನಾಟಕದ ಆಹಾರ ಪದ್ಧತಿಯಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸಲಾಗುತ್ತೆ. ಮಧ್ಯಾಹ್ನ-ರಾತ್ರಿ ರಾಗಿ ಮುದ್ದೆ ತಿನ್ನುವವರು ಬೆಳಗ್ಗೆ ಬ್ರೇಕ್​ಫಾಸ್ಟ್​​ಗೂ ರಾಗಿಯನ್ನು ಬಳಸಬಹುದು. ಊಟದ ನಂತರ ಅಥವಾ ಊಟದ ಜೊತೆ ಬೆಲ್ಲ-ತುಪ್ಪವನ್ನು ಜೊತೆಗಾಗಿ ಸೇವಿಸಬೇಕು. ರಾಗಿ ದೋಸೆ ಜೊತೆಗೆ ಬೆಲ್ಲ-ತುಪ್ಪವನ್ನು ಬೆರಸಿ ತಿನ್ನುವುದು ಅತ್ಯಂತ ಆರೋಗ್ಯಕರ ಎಂದಿದ್ದಾರೆ.


ಇನ್ನು ರಾತ್ರಿಯ ಊಟ ಆದಷ್ಟು ಹಗುರವಾಗಿರಲಿ ಎಂದು ಸೂಚಿಸಿದ್ದಾರೆ. ಸಿಂಪಲ್​ ಕಿಚಡಿ ಅಂದರೆ ಹದವಾಗಿ, ಮೃದುವಾಗಿ ಬೇಯಿಸಿದ (ಪೊಂಗಲ್​​ ಮಾದರಿ) ಆಹಾರವನ್ನು ತಿನ್ನಬೇಕು. ಕಿಚಡಿಯಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ರಾತ್ರಿಯ ಊಟ ಹೀಗೆ ಮೃದುವಾಗಿ ಇದ್ದರೆ ಹೊಟ್ಟೆ ಭಾರವೆನಿಸುವುದಿಲ್ಲ. ರಾತ್ರಿ ನಿದ್ದೆ ಸಹ ಚನ್ನಾಗಿ ಬರುತ್ತೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಕೊರೋನಾ ಸೋಂಕಿಗೆ ಒಳಗಾದವರು ಬಹು ಮುಖ್ಯವಾಗಿ ಅತ್ಯಂತ ಹೆಚ್ಚು ನೀರನ್ನು ಸೇವಿಸಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದಿನವೀಡಿ ಅಗತ್ಯ ಪ್ರಮಾಣದಲ್ಲಿ ಶುದ್ಧ ನೀರನ್ನು ಸೇವಿಸುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಲಾಗಿದೆ. ಈ 5 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಹಾರ ಸೇವಿಸುತ್ತಾ ಬಂದಲ್ಲಿ ದೇಹಕ್ಕೆ ಅಗತ್ಯ ಪ್ರಮಾಣದ ಪೋಷಕಾಂಶ ದೊರೆಯುತ್ತದೆ. ಒಳ್ಳೆಯ ಪ್ರೊಟೀನ್​, ವಿಟಮಿನ್​ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ವೈರಸ್​ನಿಂದ ಆದಷ್ಟು ಬೇಗ ಗುಣಮುಖರಾಗಬಹುದು.



ಅತ್ಯಂತ ಕಡಿಮೆ ಪ್ರಮಾಣದ ರೋಗ ಲಕ್ಷಣಗಳಿರುವವರಿಗೆ ಉತ್ತಮ ಆಹಾರವೇ ಒಳ್ಳೆಯ ಔಷಧ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇನ್ನೇಕೆ ತಡ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ನಿಮ್ಮ ಆಹಾರ ಪದ್ಧತಿಯತ್ತ ಗಮನ ಹರಿಸಿ ಆರೋಗ್ಯವಂತರಾಗಿರಲು ಪ್ರಯತ್ನಿಸಿ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು