ಕೊರೋನಾದಿಂದಾಗಿ ನಷ್ಟಕ್ಕೊಳಗಾಗಿರುವ ವಿಮಾನಯಾನ ಸಂಸ್ಥೆಗಳು; ಕೇಂದ್ರ ಸರ್ಕಾರದಿಂದ 12 ಸಾವಿರ ಕೋಟಿ ಪ್ಯಾಕೇಜ್

ವಿಶ್ವದಾದ್ಯಂತ ಬೆದರಿಕೆ ಒಡ್ಡಿರುವ ಕೊರೋನಾ ವೈರಸ್‌ ತಹಬಂದಿಗೆ ಬಂದು ವಾಯುಯಾನ ಕ್ಷೇತ್ರ ಮತ್ತೆ ಹಳಿಗೆ ಮರಳುವವರೆಗೆ ವಿವಿಧ ತೆರಿಗೆಗಳನ್ನು ಮುಂದೂಡಲು ಮತ್ತು ಬಡ್ಡಿ ರಹಿತ ಪಾವತಿಗೆ ಕಂಪೆನಿಗಳಿಗೆ ಅನುಮತಿ ನೀಡಲು ಉದ್ದೇಶಿಸಲಾಗಿದೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಕೊರೋನಾ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಲಾಗಿದ್ದು, ಬಹುತೇಕ ವಿಮಾನಯಾನ ಸಂಸ್ಥೆಗಳು ಸ್ಥಗಿತಗೊಂಡಿವೆ. ಹೀಗಾಗಿ ನಷ್ಟಕ್ಕೊಳಗಾಗಿರುವ ಭಾರತೀಯ ವಿಮಾನಯಾನ ಸಂಸ್ಥೆಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ 12,000 ಕೋಟಿ ಪ್ಯಾಕೇಜ್ ಘೋಷಿಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ರಾಯ್ಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿವೆ.

ವಾಯುಯಾನ ಇಂಧನ ತೆರಿಗೆಯನ್ನು ಮುಂದೂಡುವುದು ಸೇರಿದಂತೆ ಈ ವಲಯದ ಮೇಲೆ ವಿಧಿಸಲಾಗುವ ಹೆಚ್ಚಿನ ತೆರಿಗೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಹಣಕಾಸು ಸಚಿವಾಲಯ ಪರಿಗಣಿಸುತ್ತಿದೆ ಎನ್ನಲಾಗುತ್ತಿದೆ.

ಅಲ್ಲದೆ, ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು ಪ್ರಸ್ತಾಪಿಸಿರುವ ಪಾರುಗಾಣಿಕಾ ಪ್ಯಾಕೇಜ್ 100-120 ಬಿಲಿಯನ್ ರೂಪಾಯಿಗಳಷ್ಟು ಮೌಲ್ಯದ್ದಾಗಿರಲಿದೆ ಎಂದೂ ತಿಳಿದುಬಂದಿದೆ.

ವಿಶ್ವದಾದ್ಯಂತ ಬೆದರಿಕೆ ಒಡ್ಡಿರುವ ಕೊರೋನಾ ವೈರಸ್‌ ತಹಬಂದಿಗೆ ಬಂದು ವಾಯುಯಾನ ಕ್ಷೇತ್ರ ಮತ್ತೆ ಹಳಿಗೆ ಮರಳುವವರೆಗೆ ವಿವಿಧ ತೆರಿಗೆಗಳನ್ನು ಮುಂದೂಡಲು ಮತ್ತು ಬಡ್ಡಿ ರಹಿತ ಪಾವತಿಗೆ ಕಂಪೆನಿಗಳಿಗೆ ಅನುಮತಿ ನೀಡಲು ಉದ್ದೇಶಿಸಲಾಗಿದೆ.

ಕೊರೋನಾ ಕಾರಣದಿಂದಾಗಿ ಈಗಾಗಲೇ ವಿಶ್ವದ ಎಲ್ಲಾ ದೇಶಗಳ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಅಪಾರ ನಷ್ಟಕ್ಕೆ ಒಳಗಾಗಿವೆ. ನಷ್ಟವನ್ನು ಸರಿದೂಗಿಸಲು ಉದ್ಯೋಗ ಕಡಿತ ಮಾಡುವ ಚಿಂತನೆಗೂ ಮುಂದಾಗಿವೆ. ಈ ನಷ್ಟವನ್ನು ತುಂಬಲು 200 ಶತಕೋಟಿಗಿಂತ ಹೆಚ್ಚಿನ ಮೊತ್ತದ ಹಣ ಅಗತ್ಯವಿದೆ ಎಂದು ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಅಂದಾಜಿಸಿದೆ.

ಅಮೆರಿಕದ ವಿಮಾನಯಾನ ಸಂಸ್ಥೆಗಳು ನಷ್ಟಕ್ಕೊಳಗಾಗಿದ್ದು ಇದನ್ನು ತುಂಬುವ ಸಲುವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬುಧವಾರ 50 ಬಿಲಿಯನ್ ಸುರಕ್ಷಿತ ಸಾಲದ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದ್ದಾರೆ.

ಸಿಂಗಾಪುರ್ ಏರ್ಲೈನ್ಸ್ ಮತ್ತು ಭಾರತದ ಟಾಟಾ ಗ್ರೂಪ್‌ನ ಜಂಟಿ ಉದ್ಯಮವಾದ ವಿಸ್ಟಾರಾ ಮತ್ತು ಗೋಏರ್ ತಮ್ಮ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಭಾರತದ ಅತಿದೊಡ್ಡ ವಾಹಕವಾದ ಇಂಡಿಗೊ ಹಲವಾರು ಸಾಗರೋತ್ತರ ವಿಮಾನಗಳನ್ನು ರದ್ದುಗೊಳಿಸಿದೆ ಮತ್ತು ದೇಶೀಯ ವಿಮಾನ ಪ್ರಯಾಣವೂ ಕುಸಿಯುವುದರಿಂದ ಕೆಲವು ವಿಮಾನಗಳನ್ನು ನಿಲುಗಡೆ ಮಾಡಲು ಒತ್ತಾಯಿಸಬಹುದಾಗಿದೆ.

ದೇಶದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಹೊರತುಪಡಿಸಿ ಭಾರತೀಯ ವಿಮಾನಯಾನ ಸಂಸ್ಥೆಗಳು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 600 ಮಿಲಿಯನ್ ನಷ್ಟವನ್ನು ಅನುಭವಿಸಿವೆ ಎಂದು ಸಿಎಪಿಎ ಅಂದಾಜಿಸಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಷ್ಟದ ಪ್ರಮಾಣ ಇ‌ನ್ನಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ.

ಇದೇ ಕಾರಣಕ್ಕೆ ಇದೀಗ ವಿಮಾನಯಾನ ಸಂಸ್ಥೆಗಳ ಪುನಶ್ಚೇತಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಲು ಮತ್ತು ತೆರಿಗೆ ದರವನ್ನು ಕಡಿತಗೊಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೊರೋನಾ ಎಫೆಕ್ಟ್‌; ನಿರಂತರ ಕುಸಿತದ ಹಾದಿಯಲ್ಲಿ ವಿಶ್ವ ಷೇರುಪೇಟೆ, ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿ

First published: