ಬೆಂಗಳೂರು: ನಾನು ಆದೇಶ ಕೊಡಲು ಡಿಸಿಗಳ ಸಭೆ ಕರೆದಿಲ್ಲ. ನನಗೂ ಗೊತ್ತು ಆದೇಶ ಕೊಡುವ ಅಧಿಕಾರ ನನಗೆ ಇಲ್ಲ ಎಂದು. ನಾನು ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆಯಲು ಅನುಮತಿ ಕೇಳಿದ್ದೆ. ವಿರೋಧ ಪಕ್ಷದ ನಾಯಕ ಡಿಫೆಕ್ಟೋ ಸಿಎಂ ಇದ್ದಂತೆ. ಹೀಗಾಗಿ ಸಭೆ ಮತ್ತು ಸಂವಾದ ನಡೆಸಬಹುದು. ಅವರ ಉಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಇವರು ಸಮರ್ಥವಾಗಿ ಯಾವ ಜಿಲ್ಲೆಯಲ್ಲಿಯೂ ಕೋವಿಡ್ ನಿರ್ವಹಣೆ ಮಾಡಿಲ್ಲ. ನಾನು ಸಭೆ ಮಾಡಿಬಿಟ್ರೆ ಎಲ್ಲಾ ಗೊತ್ತಾಗಿ ಬಿಡುತ್ತೆ ಅಂತ ಇವರಿಗೆ ಭಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೋನಾ ನಿರ್ವಹಣೆ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳ ಡಿಸಿಗಳ ಜೊತೆ ಸಂವಾದ ನಡೆಸಲು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಂದಾಗಿದ್ದರು. ಇದೇ ತಿಂಗಳ 21 ರಿಂದ 25 ರವರೆಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಒನ್ ಟು ಒನ್ ಸಭೆ ನಡೆಸಿ ಕೋವಿಡ್ ನಿಯಂತ್ರಣ ವಿಚಾರದ ಬಗ್ಗೆ ಸಂವಾದ ನಡೆಸಲು ಅವಕಾಶ ಮಾಡಿಕೊಡುವಂತೆ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಸಿಎಂ ಜೊತೆ ಚರ್ಚಿಸಿ ಅನುಮತಿ ಬಗ್ಗೆ ತಿಳಿಸುವುದಾಗಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದರು. ಆದರೆ ಈಗ ಆ ರೀತಿ ಸಭೆ ನಡೆಸಲು ಬರುವುದಿಲ್ಲ ಎಂದು ಸಿಎಂ ಸೂಚನೆ ಅನುಸಾರ ಪತ್ರ ಮುಖೇನ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಪ್ರತಿಪಕ್ಷನಾಯಕರು ಆಡಳಿತದ ಭಾಗವಾಗಿರುವುದಿಲ್ಲ. ಸಚಿವರಂತೆ ಸಭೆ ನಡೆಸುವ ಅವಕಾಶ ಇರುವುದಿಲ್ಲ. ನೀವು ಪತ್ರದ ಮೂಲಕ ಎಲ್ಲ ಮಾಹಿತಿ ಪಡೆಯಬಹುದು. ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದೆಂದು ಪತ್ರದ ಮೂಲಕ ಸಿದ್ದರಾಮಯ್ಯ ಅವರಿಗೆ ಡಿಸಿಗಳ ಸಭೆ ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಇಂದು ವಿಷಯವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ತಲಾ 25 ಆಕ್ಸಿಜನ್ ಕಾನ್ಸಂಟ್ರೇಟರ್ ಹಂಚಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಮತ್ತು ಡಿಕೆ ಶಿವಕುಮಾರ್ ಚಾಮರಾಜನಗರಕ್ಕೆ ಹೋಗದೆ ಇದ್ದಿದ್ದರೆ ಅಲ್ಲಿಯ ಸತ್ಯ ಹೊರಗೆ ಬರುತ್ತಿರಲಿಲ್ಲ. ಅಲ್ಲಿ ಸತ್ತವರ ಸಂಖ್ಯೆ ಕಡಿಮೆ ಹೇಳಿ ಮುಚ್ಚಾಕುವ ಪ್ರಯತ್ನ ಮಾಡಿದ್ರು. ಮೂರು ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಸುಧಾಕರ್ ಜವಾಬ್ದಾರಿ ಸ್ಥಾನದಲ್ಲಿ ಇದ್ದು ಈ ಹೇಳಿಕೆ ಕೊಟ್ಟಿದ್ದರು. ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಹಾಕಿದ ಬಳಿಕ ಸಮಿತಿ ಮಾಡಿದರು. ಇವರು ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಆಕ್ಸಿಜನ್ ಬೆಡ್ ಇಲ್ಲ, ವೆಂಟಿಲೇಟರ್ ಬೆಡ್ ಇಲ್ಲ. ತುಂಬಾ ಜನ ಇದರಿಂದಲೇ ಸಾಯುತ್ತಿದ್ದಾರೆ. ಇವರ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ