ಬೆಂಗಳೂರು (ಜೂನ್ 07); ರಾಜ್ಯ ಸರ್ಕಾರ ಬಡವರಿಗೆ ಮತ್ತು ಕಾರ್ಮಿಕರಿಗೆ ನೀಡಿರುವ ಎರಡು ಆರ್ಥಿಕ ಪರಿಹಾರ ಪ್ಯಾಕೇಜ್‌ಗಳು ಬಡವರನ್ನು ಅಣಕ ಮಾಡುವಂತಿವೆ. ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸರ್ಕಾರ ಎಚ್ಚೆತ್ತುಕೊಂಡು ಸಮಗ್ರ ಪರಿಹಾರದ ಪ್ಯಾಕೇಜ್ ಒಂದನ್ನು ಘೋಷಿಸಬೇಕು. ಇಲ್ಲವಾದಲ್ಲಿ ಜೂನ್ 15 ರಂದು ರಾಜ್ಯಾದ್ಯಂತ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಮುಖ್ಯಮಂತ್ರಿಗಳ ನಿವಾಸದ ಮುಂದೆ ಖಾಲಿ ಚೀಲ ಹಿಡಿದು ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಜನಾಗ್ರಹ ಆಂದೋಲನ ಸಮಿತಿ ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದೆ. ಇಂದು ಮಧ್ಯಾಹ್ನ ಆನ್‌ಲೈನ್ ಮೂಲಕ ಪತ್ರಿಕಾಗೋಷ್ಠಿಯನ್ನು ನಡೆಸಿ ಸರ್ಕಾರದ ಮುಂದೆ 5 ಅಂಶಗಳ ಆಗ್ರಹ ಪತ್ರವನ್ನು ಮಂಡಿಸಿರುವ ಸಮಿತಿಯು ಮುಖ್ಯಮಂತ್ರಿ ಯಡಿಯೂರಪ್ಪವನವರಿಗೆ ಸಲ್ಲಿಸಲು ಮುಂದಾಗಿದೆ.
ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, “ಕರ್ನಾಟಕ ಸರ್ಕಾರ ಕೊರೋನ ವಿರುದ್ಧ ಹೋರಾಡಲು ಕೈಗೊಂಡಿರುವ ಕ್ರಮ ಯಾವುದಕ್ಕೂ ಸಾಲದು. ಜನರ ಕಣ್ಣೊರೆಸುವ ಈ ಪರಿಹಾರ ಪ್ಯಾಕೇಜ್ ನಿಂದ ಯಾರಿಗೂ ಅನುಕೂಲವಿಲ್ಲ. ರಾಜ್ಯ ಸರ್ಕಾರ ಸುಮಾರು 20 ಸಾವಿರ ಕೋಟಿ ಮೊತ್ತದ ಸಮಗ್ರ ಪ್ಯಾಕೇಜ್ ಘೋಷಿಸುವ ಮೂಲಕ ಕಷ್ಟದಲ್ಲಿರುವ ಜನರ ಜೊತೆ ನಿಲ್ಲಬೇಕು. ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಎಲ್ಲೆಡೆ ಮಳೆಯಾಗುತ್ತಿದೆ. ಬೀಜ ಗೊಬ್ಬರ ಖರೀದಿಸಲು ರೈತರ ಬಳಿ ಈಗ ಹಣ ಇಲ್ಲ. ಪ್ರತಿ ರೈತರಿಗೆ (50 ಲಕ್ಷ ಕುಟುಂಬಗಳಿಗೆ) 10,000 ಆರ್ಥಿಕ ನೆರವು ಮತ್ತು ಬೀಜ ಗೊಬ್ಬರವನ್ನು ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ನೀಡಬೇಕು” ಎಂದು ಒತ್ತಾಯಿಸಿದರು.
ಸರ್ಕಾರ ಈಗ ಘೋಷಿಸಿರುವ ಪ್ಯಾಕೇಜ್ ಎಲ್ಲಾ ಬಡವರನ್ನು ತಲುಪಿಲ್ಲ. ಹಾಗಾಗಿ ಹೊಸ ಪ್ಯಾಕೇಜ್ ಘೋಷಿಸಬೇಕು. ರಾಜ್ಯ ಸರ್ಕಾರದ ಬಳಿ ಹಣ ಇಲ್ಲವಾದರೆ ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಬಾಕಿ 30 ಸಾವಿರ ಕೋಟಿ ಹಣ, ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟಿರುವ 26 ಸಾವಿರ ಕೋಟಿ ಹಣ ಇದೆ. ಅದೇ ರೀತಿ ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ಐಷಾರಾಮಿ ಸೇವೆಗಳ ಮೇಲೆ 2% ಕೊರೋನಾ ತೆರಿಗೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನಾಗ್ರಹ ಆಂದೋಲನ ಸಮಿತಿಯ ಆಗ್ರಹ ಪತ್ರದಲ್ಲಿ ಹೇಳಲಾದ 5 ಅಂಶಗಳು..
ಇದನ್ನೂ ಓದಿ: ಮೈಸೂರಿನಿಂದ ರೋಹಿಣಿ ಸಿಂಧೂರಿ ಎತ್ತಂಗಡಿ: ಸರ್ಕಾರದ ನಡೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ
ದೇಶದ ಆರ್ಥಿಕತೆ ಜೀವಂತವಾಗಿರಬೇಕಾದರೆ ಕರ್ನಾಟಕ ರಾಜ್ಯ ಸರ್ಕಾರ ಈಗ ಘೋಷಿಸಿರುವ ಕಣ್ಣೊರೆಸುವ 1250 ಕೋಟಿ ಮೊತ್ತದ ಚಿಕ್ಕ ಪ್ಯಾಕೇಜ್ ಬಿಟ್ಟು ಎಲ್ಲರಿಗೂ ನೆರವಾಗುವಂತಹ ದೊಡ್ಡ ಪ್ಯಾಕೇಜ್ ಘೋಷಿಸಬೇಕು. ರೈತರ ಜೊತೆ ನಿಂತು ಪರಿಹಾರ ಮತ್ತು ಆರ್ಥಿಕ ಸಹಾಯವನ್ನು ಮಾಡಬೇಕು. ಇಲ್ಲವಾದಲ್ಲಿ ಈ ವರ್ಷ ಕರ್ನಾಟಕದಲ್ಲಿ ಅನ್ನಕ್ಕೂ ಕೊರತೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕುಮಾರಸ್ವಾಮಿನ ಕಿತ್ತಾಕಿ BSYನ ತಂದಿದ್ದೇವೆ, ಅವರೇ ಸಿಎಂ ಆಗಿ ಮುಂದುವರಿಯಲಿ: ಯೋಗೇಶ್ವರ್ ಯೂಟರ್ನ್?
ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ, ಸ್ವರಾಜ್ ಇಂಡಿಯಾ, ಎಸ್‌ಡಿಪಿಐ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಜನಪರ ಹೋರಾಟಗಾರರು ಭಾಗವಹಿಸಿದ್ದರು. ಸಾಮಾಜಿಕ ಹೋರಾಟಗಾರರಾದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಕೆ.ಎಲ್. ಅಶೋಕ್, ಉಮರ್ ಯು.ಹೆಚ್.ಮಹಮದ್ದ ಯೂಸುಫ್ ಕನ್ನಿ ಮುಂತಾದವರು ಪತ್ರಿಕಾಗೋಷ್ಠೀಯಲ್ಲಿ ಹಾಜರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ