Covid Crisis: ಭಾರತದಲ್ಲಿ ಕೊರೊನಾ ಪರಿಸ್ಥಿತಿ ನೋಡಿ ನನಗೆ ಆಘಾತವಾಗಿದೆ. ಗೂಗಲ್ ಮತ್ತು ಇಲ್ಲಿನ ಸದಸ್ಯರು ಅಗತ್ಯ ಔಷಧ ಮತ್ತು ಉಪಕರಣಗಳ ಖರೀದಿಗೆ, ಹೆಚ್ಚು ಸೂಕ್ಷ್ಮ ಸಮುದಾಯದ ಬೆಂಬಲಕ್ಕೆ ನಿಂತಿರುವ ಸಂಸ್ಥೆಗಳಿಗೆ ಮತ್ತು ತುರ್ತು ಮಾಹಿತಿಗಳನ್ನು ತಲುಪಿಸಲು ಅಗತ್ಯವಿರು ಕಡೆ ಬಳಕೆಗಾಗಿ 135 ಕೋಟಿ ರೂಪಾಯಿಗಳನ್ನು UNICEF ಮತ್ತು GiveIndia ಸಂಸ್ಥೆಗಳ ಮೂಲಕ ತಲುಪಿಸುತ್ತಿದ್ದೇವೆ ಎಂದು Google ಸಂಸ್ಥೆಯ ಸಿಇಒ ಸುಂದರ್ ಪಿಚಾಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಭಾರತೀಯ ಮೂಲದ ಇವರು ತಮ್ಮ ದೇಶದ ಜನ ನರಳುವುದನ್ನು ಕಂಡು ಬಹಳ ನೋವಾಗಿದೆ, ಯುಎಸ್ ಸರ್ಕಾರ ಈ ಸಂದರ್ಭದಲ್ಲಿ ಭಾರತಕ್ಕೆ ಅಗತ್ಯ ನೆರವು ನೀಡುತ್ತಿರುವುದು ಸ್ವಾಗತಾರ್ಹ ವಿಚಾರ ಎಂದೂ ತಿಳಿಸಿದ್ದಾರೆ.
ಈ ಹಣದ ಮೊದಲ ಭಾಗ GiveIndia ಎನ್ನುವ ಸ್ವಸಹಾಯ ಸಂಸ್ಥೆಗೆ 20 ಕೋಟಿ ರೂಪಾಯಿಗಳನ್ನು ನೀಡಲಿದ್ದು ಇದು ಕೋವಿಡ್ನಿಂದ ಅತೀ ಹೆಚ್ಚು ಹೊಡೆತಕ್ಕೊಳಗಾದ ಕುಟುಂಗಳಿಗೆ ಅವರ ದೈನಂದಿನ ಖರ್ಚುಗಳಿಗೆ ಅಗತ್ಯವಾದ ಹಣವನ್ನು ನೀಡಲು ಬಳಸಲಾಗುತ್ತದೆ. ಎರಡನೇ ಭಾಗ ತುರ್ತು ಔಷಧ, ಆಕ್ಸಿಜನ್, ಪರೀಕ್ಷಾ ಸಲಕರಣೆಗಳು ಅತ್ಯಂತ ಅವಶ್ಯಕವಾಗಿ ಭಾರತದ ಯಾವ ಭಾಗಕ್ಕೆ ಬೇಕೋ ಅಲ್ಲಿಗೆ ತಲುಪಿಸಲು ಯೂನಿಸೆಫ್ಗೆ ನೀಡಲಾಗುತ್ತದೆ. ಗೂಗಲ್ ಸಂಸ್ಥೆಯ 900ಕ್ಕೂ ಹೆಚ್ಚು ನೌಕರರು ಸುಮಾರು 3.7 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ನೀಡಿದ್ದಾರೆ.
ಜನರಿಗೆ ಅವರವರ ಭಾಷೆಯಲ್ಲೇ ಖಾಯಿಲೆ ಮತ್ತು ಚಿಕಿತ್ಸೆ, ಸೌಕರ್ಯ, ಎಚ್ಚರಿಕೆ ಮುಂತಾದ ವಿಚಾರಗಳ ಬಗ್ಗೆ ಅಗತ್ಯ ಮಾಹಿತಿ ತಲುಪಿಸುವುದು ಕೂಡಾ ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿದೆ. ಈ ಕೆಲಸಕ್ಕೆ ಕಳೆದ ವರ್ಷದಿಂದಲೇ ಕೆಲವು ಸ್ವಸಹಾಯ ಸಂಸ್ಥೆ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಮೂಲಕ ಗೂಗಲ್ ಕೆಲಸ ಮಾಡುತ್ತಿದ್ದು ಈ ಹೆಚ್ಚುವರಿಯಾಗಿ 112 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದು ಗೂಗಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:
https://kannada.news18.com/news/explained/dos-and-donts-after-taking-covid-vaccine-that-everyone-should-know-sktv-556421.html
Corona ಸಂಕಷ್ಟ ಕಾಲದಲ್ಲಿ ತಮ್ಮ ದೇಶದ ಸಹಾಯಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಿರುವ ಗೂಗಲ್ನ ಸಿಇಒ ಸುಂದರ್ ಪಿಚಾಯ್ಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ಕೇಳಿಬರುತ್ತಿದೆ. ಅವರು ನೀಡಿದ ಸಹಾಯದ ಹಣ ಸದುಪಯೋಗವಾಗಲಿ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ