ಕೊರೊನಾ ಸೋಂಕಿಗೆ ಗೋಮೂತ್ರ ಸಗಣಿಯೊಂದೇ ಪರಿಹಾರ; ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಹೇಳಿಕೆ

ಕೊರೊನಾ ವೈರಸ್ ನಂತಹ ಮಾರಕ ಸೋಂಕನ್ನೂ ಸಹ ಗೋಮೂತ್ರ ಮತ್ತು ಸಗಣಿಯಿಂದ ಗುಣಪಡಿಸಬಹುದು ಎಂದು ನಾನು ನಂಬುತ್ತೇನೆ. ಅಲ್ಲದೆ, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕವಾಗಿ ಹಿಂದೂ ಧಾರ್ಮಿಕ ಆಚರಣೆಯ ಪವಿತ್ರ ವಸ್ತುಗಳಾಗಿದ್ದು, ಇದನ್ನು ಗೊಬ್ಬರ ಮತ್ತು ಇಂಧನ ಸೇರಿದಂತೆ ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಬಿಜೆಪಿ ಶಾಸಕ ಸುಮನ್ ಹರಿಪ್ರಿಯಾ ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಅಸ್ಸಾಂ (ಮಾರ್ಚ್ 03); ಇಲ್ಲಿನ ಬಿಜೆಪಿ ಶಾಸಕ ಸುಮನ್​ ಹರಿಪ್ರಿಯಾ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ "ಗೋಮೂತ್ರ ಮತ್ತು ಹಸುವಿನ ಸಗಣಿ ಮಾರಣಾಂತಿಕ ಕೊರೊನಾ ವೈರಸ್​ಗೆ ಸೂಕ್ತ ಪರಿಹಾರ. ಅಲ್ಲದೆ, ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳನ್ನೂ ಸಹ ಹಸುವಿನ ಮೂತ್ರ ಮತ್ತು ಸಗಣಿ ಗುಣಪಡಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇಡೀ ಜಗತ್ತು ಕೊರೊನಾ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಈಗಾಗಲೇ ಸಾವಿನ ಸಂಖ್ಯೆ 3 ಸಾವಿರ ದಾಟಿದ್ದು, ಚೀನಾದಲ್ಲಿ ಆರಂಭವಾದ ಈ ಮಾರಣಾಂತಿಕ ವೈರಸ್ ಇರಾನ್, ತಾಯ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಭಾರತಕ್ಕೂ ಕಾಲಿಟ್ಟಿದೆ. ಈ ಸೋಂಕಿಗೆ ಸೂಕ್ತ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ವೈದ್ಯರು-ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ, ಈ ನಡುವೆ ಬಿಜೆಪಿ ಶಾಸಕ ಕೊರೊನಾಗೆ ಗೋಮೂತ್ರ ಪರಿಹಾರ ಎಂದು ಹೇಳುವ ಮೂಲಕ ಇದೀಗ ಸುದ್ದಿಯಾಗುತ್ತಿದ್ದಾರೆ.

ಸೋಮವಾರ ಅಸ್ಸಾಂನಲ್ಲಿ ಬಜೆಟ್ ಮೇಲಿನ ಅಧಿವೇಶನದ ವೇಳೆ, ಅಸ್ಸಾಂನಿಂದ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನುಕಳ್ಳ ಸಾಗಾಣಿಕೆ ಮಾಡುವ ಕುರಿತ ಚರ್ಚೆಯಲ್ಲಿ ಮಾತನಾಡಿರುವ ಶಾಸಕ ಸುಮನ್ ಹರಿಪ್ರಿಯಾ, “ಹಸುವಿನ ಸಗಣಿಯಿಂದ ಎಷ್ಟು ಸಹಾಯಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತೆಯೇ, ಹಸುವಿನ ಮೂತ್ರವನ್ನು ಸಿಂಪಡಿಸಿದಾಗ ಅದು ಒಂದು ಪ್ರದೇಶವನ್ನು ಶುದ್ಧೀಕರಿಸುತ್ತದೆ.

ಇದನ್ನೂ ಓದಿ : ರಾಜ್ಯಕ್ಕೂ ಕಾಲಿಟ್ಟ ಕೊರೊನ ವೈರಸ್?; ಮಗಳ ಮದುವೆ ಬದಿಗಿಟ್ಟು ಆರೋಗ್ಯ ಸಚಿವ ಶ್ರೀರಾಮುಲು ತುರ್ತು ಸಭೆ

ಕೊರೊನಾ ವೈರಸ್ ನಂತಹ ಮಾರಕ ಸೋಂಕನ್ನೂ ಸಹ ಗೋಮೂತ್ರ ಮತ್ತು ಸಗಣಿಯಿಂದ ಗುಣಪಡಿಸಬಹುದು ಎಂದು ನಾನು ನಂಬುತ್ತೇನೆ. ಅಲ್ಲದೆ, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕವಾಗಿ ಹಿಂದೂ ಧಾರ್ಮಿಕ ಆಚರಣೆಯ ಪವಿತ್ರ ವಸ್ತುಗಳಾಗಿದ್ದು, ಇದನ್ನು ಗೊಬ್ಬರ ಮತ್ತು ಇಂಧನ ಸೇರಿದಂತೆ ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ದೆಹಲಿ ಮತ್ತು ತೆಲಂಗಾಣದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪೈಕಿ ಓರ್ವ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈದ್ರಾಬಾದ್ ಮೂಲದ ಟೆಕ್ಕಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರವೇ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಈವರೆಗೆ ಒಟ್ಟು ಐದು ಸಕಾರಾತ್ಮಕ ಕೊರೊನಾ ಪ್ರಕರಣಗಳು ವರದಿಯಾಗಿದೆ. ದೇಶಾದ್ಯಂತ 25,738 ಜನರು ಸಮುದಾಯ ಕಣ್ಗಾವಲಿನಲ್ಲಿದ್ದರೆ, COVID-19 ರೋಗಲಕ್ಷಣಗಳನ್ನು ಹೊಂದಿರುವ ಶಂಕಿತ 37 ಜನರನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರೋನವೈರಸ್ನಿಂದಾಗಿ ಚೀನಾದಲ್ಲಿ ಮಾತ್ರ ಈವರೆಗೆ 2,912ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇನ್ನೂ ವಿಶ್ವದಾದ್ಯಂತ ಈ ಸಂಖ್ಯೆ 3,000 ಗಡಿ ದಾಟಿದೆ.

ಇದನ್ನೂ ಓದಿ : ಹೈದರಾಬಾದ್ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಪ್ರಕರಣ; ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ
First published: