ಕೊಪ್ಪಳದಲ್ಲಿ ಜಾಗೃತಿ ಮೂಡಿಸುವ ಭರದಲ್ಲಿ ಆತಂಕ ಸೃಷ್ಟಿಸಿದ ವೈದ್ಯಾಧಿಕಾರಿ.!

ಗಂಗಾವತಿಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಜನ ಆತಂಕಗೊಳ್ಳಬೇಡಿ. ಮುಂಜಾಗ್ರತೆ ವಹಿಸಿ ಎಂದು ಪ್ರಕಟಣೆ ಬಿಡುಗಡೆ ಮಾಡಿದರು

ಡಾ. ಈಶ್ವರ ಸವಡಿ

ಡಾ. ಈಶ್ವರ ಸವಡಿ

 • Share this:
  ಕೊಪ್ಪಳ(ಏ.29): ಕೊರೋನಾ ವಿಷಯದಲ್ಲಿ ಕೊಪ್ಪಳ ಜಿಲ್ಲೆ ಹಸಿರು ವಲಯದಲ್ಲಿದೆ. ಹಾಗೆಂದ ಮಾತ್ರಕ್ಕೆ ಜನ ಮೈಮರೆಯಬಾರದು. ಜಿಲ್ಲೆಯಲ್ಲಿ ಇನ್ನು ಮುಂದೆ ಕೊರೊನಾ ಪಾಸಿಟಿವ್ ಪ್ರಕರಣ ಬರಬಹುದು. ಕೆಲ ಜನರಿಗೆ ಅಪಾಯವೂ ಎದುರಾಗಬಹುದು. ಈ ಬಗ್ಗೆ ಐಸಿಎಂಆರ್ ವರದಿಯಲ್ಲಿ ಎಚ್ಚರಿಸಲಾಗಿದೆ ಎಂಬ ಮಾಹಿತಿಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ನೀಡಿದ ಹೇಳಿಕೆ ಜಿಲ್ಲಾದ್ಯಂತ ಸಂಚಲನ, ಆತಂಕ ಮೂಡಿಸಿದೆ.

  ಏಪ್ರಿಲ್ 18ರ ಬೆಳಗ್ಗೆ ಗಂಗಾವತಿಯಲ್ಲಿ ಹಸಿರು ವಲಯದ ಜಿಲ್ಲೆಗಳಿಗೆ ಸಡಿಲಿಕೆ ಹಾಗೂ ಜನರಲ್ಲಿ ಸಾಮಾಜಿಕ ಅಂತರ ಕುರಿತು ವ್ಯಾಪಾರಸ್ಥರ ಸಭೆಯನ್ನು ಪೊಲೀಸ್ ಇಲಾಖೆ ಆಯೋಜಿಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ವರ್ತಕರು, ತಮ್ಮ ಜಿಲ್ಲೆ ಹಸಿರು ವಲಯದಲ್ಲಿದೆ. ವ್ಯಾಪಾರ-ವಹೀವಾಟಿಗೆ ಆನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ವೇಳೆ ಮೈಕ್ ಕೈಗೆತ್ತಿಕೊಂಡ ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿಯವರು, ಜಾಗೃತಿಯ ಮಾತುಗಳನ್ನು ಹೇಳುವುದರ ಜೊತೆಗೆ ಐಸಿಎಂಆರ್ ವರದಿಯ ಪ್ರಕಾರ ಜಿಲ್ಲೆಗೂ ಕೊರೋನಾ ವೈರಸ್ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಮೂಲಕ, ಕೆಲ ಜನರಿಗೆ ಅಪಾಯವಾಗುವ ಮುನ್ಸೂಚನೆಗಳ ಕುರಿತು ಪ್ರಸ್ತಾಪಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

  ಡಾ.ಸವಡಿಯವರು ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿ ಜನರು ಪ್ಯಾನಿಕ್ ಆಗುವಂತಾಯಿತು. ಮಾಧ್ಯಮಗಳಿಗೆ ಈ ವಿಷಯ ಗೊತ್ತಾಗಿ ಹಿಂದಿನ ದಿನದ ವಿಡಿಯೋ ತಡಕಾಡಿದಾಗ ವಿಷಯ ಮತ್ತಷ್ಟೂ ದೊಡ್ಡದಾಯಿತು. ಡಾ. ಸವಡಿಯವರ ಪರ-ವಿರೋಧ ಚರ್ಚೆಗಳು ಶುರುವಾದವು. ಕೊನೆಗೆ ವಿಷಯದ ಗಂಭೀರತೆ ಅರಿತ ಡಾ. ಈಶ್ವರ ಸವಡಿಯವರು ಮಾಧ್ಯಮಗಳಿಗೆ ಪ್ರಕಟಣೆಯೊಂದನ್ನ ಬಿಡುಗಡೆ ಮಾಡಿದರು. ತಾವು ಯಾವುದೇ ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಗಂಗಾವತಿಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಜನ ಆತಂಕಗೊಳ್ಳಬೇಡಿ. ಮುಂಜಾಗ್ರತೆ ವಹಿಸಿ ಎಂದು ಪ್ರಕಟಣೆ ಬಿಡುಗಡೆ ಮಾಡಿದರು.

  ಆದರೆ ಪ್ರಕಟಣೆಯಲ್ಲಿ ವ್ಯಾಪಾರಿಗಳ ಸಭೆಯ ಬಗ್ಗೆ, ಅಲ್ಲಿ ತಾವು ಮಾತನಾಡಿರುವ ಬಗ್ಗೆ ಪ್ರಸ್ತಾಪಿಸದೇ ಮಾಧ್ಯಮಗಳನ್ನು ಕತ್ತಲಲ್ಲಿಟ್ಟು ಜನರ, ಅಧಿಕಾರಿಗಳ ಒಲವು ಗಳಿಸುವ ತಂತ್ರ ಹೆಣೆದರು. ಈ ವಿಷಯ ದೊಡ್ಡದಾಗುತ್ತಿದ್ದಂತೆ ಡಿಸಿಯವರು ಕರೆ ಮಾಡಿ ತಪರಾಕಿ ಹಾಕಿದ್ದಾರೆ. ಡಿಸಿಯವರ ಬಳಿ ಕ್ಷಮೆಯಾಚಿಸಿರುವ ಡಾ. ಈಶ್ವರ ಸವಡಿಯವರು, ದೃಶ್ಯಮಾಧ್ಯಮಗಳಿಗೂ ಹೇಳಿಕೆ ಬಿಡುಗಡೆ ಮಾಡಿ, ವಿಷಾದ ವ್ಯಕ್ತಪಡಿಸಿದ್ದಾರೆ.

  ಹೇಳಿದ್ದರಲ್ಲಿ ತಪ್ಪೇನಿದೆ? :

  ವ್ಯಾಪಾರಸ್ಥರ ಸಭೆಯಲ್ಲಿ ಡಾ. ಈಶ್ವರ ಸವಡಿ ಮಾತನಾಡಿದ್ದರಲ್ಲಿ ತಪ್ಪೇನಿದೆ ಎಂಬ ವಾದವೂ ಬಲವಾಗಿ ಕೇಳಿ ಬರುತ್ತಿದೆ. ಸಭೆಯಲ್ಲಿದ್ದವರೆಲ್ಲ ಜಿಲ್ಲೆ ಹಸಿರು ವಲಯದಲ್ಲಿದೆ. ಎಲ್ಲ ಅಂಗಡಿಗಳನ್ನು ತೆರೆಯಲು, ಮುಕ್ತವಾಗಿ ಓಡಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದರು. ಹಾಗಾಗಿ ಅವರನ್ನು ಎಚ್ಚರಿಸುವ ಸಲುವಾಗಿ ಐಸಿಎಂಆರ್ ವರದಿಯ ಅಂಶಗಳನ್ನು ತಿಳಿಸಿ, ಜನರನ್ನು ಜಾಗೃತಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಡಾ. ಈಶ್ವರ ಸವಡಿಯವರನ್ನು ಉದ್ದೇಶಪೂರ್ವಕವಾಗಿ ಗುರಿಯನ್ನಾಗಿಸಿಕೊಳ್ಳಲಾಗಿದೆ ಎಂಬುದು ಕೆಲವರ ವಾದ.

  ಕಾರಣ ಕೇಳಿ ನೋಟೀಸ್ :

  ವಿಷಯದ ಗಂಭೀರತೆ ಅರಿತ ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ಸಹ ಮಾಧ್ಯಮಗಳಿಗೆ ಪ್ರಕಟಣೆ ನೀಡಿ, ಕೆಲ ಮಾಧ್ಯಮಗಳು ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವ ಕುರಿತು ಗಂಗಾವತಿ ಆರೋಗ್ಯ ಅಧಿಕಾರಿಗಳ ಹೇಳಿಕೆಯನ್ನ ಆಧರಿಸಿ ಸುದ್ದಿ ಪ್ರಕಟಿಸಿವೆ. ಅವರ ಹೇಳಿಕೆ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಜೊತೆಗೆ ಕೋವಿಡ್-19ಗೆ ಸಂಬಂಧಿಸಿದಂತೆ ಏನೇ ಮಾಹಿತಿ ಬೇಕಿದ್ದರೂ ಮಾಧ್ಯಮದವರು ಜಿಲ್ಲಾಧಿಕಾರಿಗಳನ್ನೇ ಸಂಪರ್ಕಿಸಬೇಕು. ಇನ್ನುಳಿದ ಯಾವ ಅಧಿಕಾರಿಗಳಿಗೂ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ : Coronavirus In Kalaburagi: ಕಲಬುರ್ಗಿಯಲ್ಲಿ ಮತ್ತೆ ಎಂಟು ಪಾಸಿಟಿವ್ - ಆತಂಕಕ್ಕೆ ಕಾರಣವಾದ ಪಿ-205 ಚೈನ್ ಲಿಂಕ್

  "ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ್ದೇನೆಯೇ ಹೊರತು ಮಾಧ್ಯಮದವರ ಮುಂದೆ ಏನನ್ನೂ ಮಾತನಾಡಿಲ್ಲ. ಸಭೆಯಲ್ಲಿ ಜನರಲ್ಲಿ ಜಾಗೃತಿ ಬರಲಿ ಎನ್ನುವ ಕಾರಣಕ್ಕೆ ಕೊರೋನಾ ವೈರಸ್ ಜಿಲ್ಲೆಗೂ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದೆ ಹೊರತು ಕೊರೋನಾ ಜಿಲ್ಲೆಗೂ ಬಂದಿದೆ ಎಂದು ಎಲ್ಲೂ ಹೇಳಿಲ್ಲ. ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಯವರು ಯಾವುದೇ ಹೇಳಿಕೆ ನೀಡಬಾರದೆಂದು ಆದೇಶಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಜಿಲ್ಲಾಧಿಕಾರಿಗಳನ್ನೇ ಕೇಳಿ ಎಂದು ಡಾ. ಈಶ್ವರ ಸವಡಿ ಸ್ಪಷ್ಟಪಡಿಸಿದ್ದಾರೆ.

  (ವರದಿ : ಬಸವರಾಜ ಕರುಗಲ್)
  First published: