HOME » NEWS » Coronavirus-latest-news » GADAG FOOD DEPARTMENT OFFICERS FEARING IN KOPPALA DC LATTER HK

ಅಕ್ಕಿ ದೋಖಾ ಭಾಗ-2 : ಕೊಪ್ಪಳ ಡಿಸಿ ಪತ್ರಕ್ಕೆ ಬೆಂಡಾದ ಗದಗ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳು

Koppala News: ಎಫ್ಐಆರ್ ನೋಡಿದ ತಕ್ಷಣ ಕೆಂಡಾಮಂಡಲರಾದ ಕೊಪ್ಪಳ ಡಿಸಿ ಸುನೀಲ್‌ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಈ ಕುರಿತು ಸ್ಪಷ್ಟನೆ ಕೇಳಿದ್ದಾರೆ.

news18-kannada
Updated:May 15, 2020, 12:30 PM IST
ಅಕ್ಕಿ ದೋಖಾ ಭಾಗ-2 : ಕೊಪ್ಪಳ ಡಿಸಿ ಪತ್ರಕ್ಕೆ ಬೆಂಡಾದ ಗದಗ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳು
ಪಡಿತರ ಅಕ್ಕಿ
  • Share this:
ಕೊಪ್ಪಳ(ಮೇ.15): ಅಕ್ಕಿ ದೋಖಾ ಸರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಗದಗ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಖದೀಮರನ್ನ ಹಿಡಿಯಲು ಕೊಪ್ಪಳದ ಆಹಾರ ಇಲಾಖೆಯ ಅಧಿಕಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ನಡೆದಿರುವ ಹೈಡ್ರಾಮಾದ ವಿವರ ಈ ಭಾಗದಲ್ಲಿದೆ.

ಇದುವರೆಗೂ ಈ ಪ್ರಕರಣ ಕೊಪ್ಪಳ, ಗದಗ ಜಿಲ್ಲೆಗೆ ಮಾತ್ರವೇ ಸೀಮಿತವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಬಡವರ ಅಕ್ಕಿಯ ಮೇಲೆ ಖದೀಮರ ಕಣ್ಣು ಇವೆರಡು ಜಿಲ್ಲೆಗಳು ಮಾತ್ರವಲ್ಲ, ಧಾರವಾಡ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಅವ್ಯವಹಾರದ ಕಬಂಧಬಾಹು ಚಾಚಿವೆ ಎಂಬುದನ್ನು ನೀವು ನಂಬಲೇಬೇಕು.

ಕೊಪ್ಪಳ ಜಿಲ್ಲೆಯಿಂದ ಬಡವರ ಅನ್ನಭಾಗ್ಯ ಹಾಗೂ ಗರೀಬ್ ಕಲ್ಯಾಣದ ಅಕ್ಕಿ ಅಕ್ರಮವಾಗಿ ಸಾಗಣೆಯಾಗುತ್ತಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ತಂದಿತ್ತು. ತಕ್ಷಣವೇ ಸ್ಪಂದಿಸಿದ ಕೊಪ್ಪಳ ಜಿಲ್ಲಾಧಿಕಾರಿ ಈ ಕುರಿತು ಗದಗ ನಗರ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರತಿ ಸಂಗ್ರಹಿಸಿದ್ದಾರೆ. ಎಫ್ಐಆರ್ ನೋಡಿದ ತಕ್ಷಣ ಕೆಂಡಾಮಂಡಲರಾದ ಕೊಪ್ಪಳ ಡಿಸಿ ಸುನೀಲ್‌ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಈ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಗದಗ ಜಿಲ್ಲೆಯವರು ಈ ಬಗ್ಗೆ ಯಾವ ವಿಷಯವನ್ನೂ, ಯಾವತ್ತೂ, ಯಾರ ಗಮನಕ್ಕೂ ತಂದೇ ಇಲ್ಲ ಎಂದು ಕೊಪ್ಪಳದ ಆಹಾರ ಇಲಾಖೆಯ ಅಧಿಕಾರಿಗಳು ಡಿಸಿಯವರಿಗೆ ತಿಳಿಸಿದ್ದಾರೆ.

ಆಗ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ ತಪ್ಪಿಲ್ಲ ಎಂಬುದು ಮನದಟ್ಟಾಗಿದೆ. ಸರಕಾರ ಬಡವರಿಗೆ ಕೊಟ್ಟಿರುವ ಅಕ್ಕಿ ಜಿಲ್ಲೆಯಿಂದ ಅಕ್ರಮವಾಗಿ ಸಾಗುತ್ತಿರುವುದನ್ನ ಪತ್ತೆ ಹಚ್ಚಿ ಎಂದು ದಾಳಿಗೆ ಆದೇಶ ನೀಡಿದ್ದಾರೆ. ಹಾಗೆಯೇ ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಎಫ್ಐಆರ್‌ನಲ್ಲಿ ದಾಖಲಾಗಿರುವ ಸುಳ್ಳು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ನಾಲ್ಕು ಅಂಶಗಳ ಕುರಿತು ತುರ್ತಾಗಿ ಮಾಹಿತಿ ನೀಡುವಂತೆ ಮೇ 12 ರಂದೇ ಪತ್ರ ಬರೆದಿದ್ದಾರೆ.

ಇಲ್ಲಿವೆ ನೋಡಿ ಆ ನಾಲ್ಕು ಅಂಶಗಳು:

1.ಗದಗ ಪಡಿತರ ಪ್ರದೇಶದ ಆಹಾರ ನಿರೀಕ್ಷಕರು ಕೊಪ್ಪಳ ಆಹಾರ ಶಾಖೆಯ ಯಾವ ಅಧಿಕಾರಿ/ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ?

2.ಸಂಪರ್ಕಿಸಲಾದ ಕೊಪ್ಪಳ ಆಹಾರ ಶಾಖೆಯ ಅಧಿಕಾರಿ/ಸಿಬ್ಬಂದಿ ಹೆಸರು, ಹುದ್ದೆ, ದೂರವಾಣಿ ಸಂಖ್ಯೆ ಜೊತೆಗೆ ಯಾವ ದೂರವಾಣಿ ಸಂಖ್ಯೆಯಿಂದ ಸಂಪರ್ಕಿಸಲಾಗಿದೆ?3.ಕೊಪ್ಪಳ ಆಹಾರ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿದ ದಿನಾಂಕ ಮತ್ತು ಸಂಭಾಷಣೆಯ ವಿವರ

4.ಕೊಪ್ಪಳ ಆಹಾರ ಇಲಾಖೆಯಿಂದ ಯಾವ ರೀತಿಯ ಮಾಹಿತಿ, ದಾಖಲೆಗಳನ್ನು ಪಡೆದು ಪರಿಶೀಲಿಸಲಾಯಿತು. ಅವುಗಳ ಛಾಯಾಪ್ರತಿ.

ಈ ನಾಲ್ಕು ಅಂಶಗಳ ಕುರಿತು ಮಾಹಿತಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳು ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.  ಬಹುಶಃ ಈ ಪತ್ರ ಗದಗ ಜಿಲ್ಲಾಧಿಕಾರಿಗಳಿಗೆ ತಲುಪಿದ್ದರಿಂದ ಗದಗ ಜಿಲ್ಲೆಯಲ್ಲೂ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿಕೊಂಡ ಸ್ಥಳಗಳ ಮೇಲೆ ದಾಳಿ ಶುರುವಾಗಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸಹ ವಿಷಯ ಅರಿತಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ ಎಂಬ ಉಲ್ಲೇಖವೂ ಕೊಪ್ಪಳ ಡಿಸಿ ಬರೆದ ಪತ್ರದಲ್ಲಿದೆ.

ಅನ್ನಭಾಗ್ಯ ಹಾಗೂ ಗರೀಬ್ ಕಲ್ಯಾಣದ ಅಕ್ಕಿ ಅಕ್ರಮ ಸಾಗಣೆ ವಿಷಯ ಗಮನಿಸಿದ್ದೇನೆ. ಕೊಪ್ಪಳಕ್ಕೆ ಬಂದಾಗ ಈ ಬಗ್ಗೆ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿ ಪಡೆದುಕೊಂಡು ತಿಳಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ : ಅಕ್ಕಿ ದೋಖಾ ಭಾಗ-1: ಬಡವರಿಗೆ ಸೇರಬೇಕಾದ ಅಕ್ಕಿ ಅಕ್ರಮ ಸಾಗಣೆಯಲ್ಲಿ ಅಧಿಕಾರಿಗಳು ಮಾತ್ರವಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಉಳ್ಳವರೂ ಸಹ ಶಾಮೀಲು!

ಸರಕಾರದ ಯೋಜನೆಯ ಅಕ್ಕಿಯನ್ನು ಮಾರಾಟ ಮಾಡುವುದು ಅಪರಾಧ. ಅದು ಖಾಸಗಿ ವ್ಯಕ್ತಿಗಳೇ ಆಗಿರಲಿ, ಅಧಿಕಾರಿಗಳೇ ಆಗಿರಲಿ. ಬಿಪಿಎಲ್ ಕಾರ್ಡ್‌ದಾರರು ಸರಕಾರ ಕೊಡುವ ಅಕ್ಕಿಯನ್ನು ಮಾರಿಕೊಳ್ಳುವುದು ಸಹ ಅಪರಾಧವೇ. ಅಕ್ಕಿ ಅಕ್ರಮ ಸಾಗಣೆ ಬಗ್ಗೆ ಆರು ತಿಂಗಳ ಹಿಂದೆ ಮಾಹಿತಿ ಇತ್ತು. ಸೂಕ್ತ ಸಾಕ್ಷ್ಯಾಧಾರಗಳಿರಲಿಲ್ಲ. ಈಗ ಆರೋಪಿಗಳು ಸಿಕ್ಕಿ‌ಬಿದ್ದಿದ್ದಾರೆ. ಸರಕಾರದ ಅಕ್ಕಿಯನ್ನು ಮುಂಬೈ ಸೇರಿದಂತೆ ಇತರೆಡೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ. ಎಲ್ಲವನ್ನೂ ಮಾಧ್ಯಮಗಳಿಗೆ ಹೇಳಲಾಗಲ್ಲ. ಇದರಿಂದ ಆರೋಪಿಗಳು ಎಚ್ಚೆತ್ತುಕೊಳ್ಳುತ್ತಾರೆ. ತನಿಖೆಗೂ ಹಿನ್ನಡೆಯಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್.

  • ವಿಶೇಷ ವರದಿ: ಬಸವರಾಜ ಕರುಗಲ್


First published: May 15, 2020, 11:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading