ಬೆಂಗಳೂರು: ಕೊರೋನಾ ವೈರಸ್ ಸೋಂಕು ಹರಡುವ ವೇಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಇನ್ನಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳುತ್ತಿವೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ವಿವಿಧ ಕ್ರಮಗಳನ್ನ ಜಾರಿಗೊಳಿಸುತ್ತಿದೆ. ಇಂದಿನಿಂದ ಸಸ್ಯಕಾಶಿ ಲಾಲ್ಬಾಗ್ ಸೇರಿದಂತೆ ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ಮುಚ್ಚಲು ಸಿಎಂ ಸೂಚಿಸಿದ್ದಾರೆ. ಹೋಟೆಲ್ಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. ಹೋಟೆಲ್ನ ಕಿಚನ್ ಮಾತ್ರ ತೆರೆದಿರುತ್ತದೆ. ಮಾರ್ಚ್ 31ರವರೆಗೆ ಈ ನಿಷೇಧ ಮತ್ತು ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ಆರೋಗ್ಯ ಇಲಾಖೆ ಸೂಚನೆಯಂತೆ ಲಾಲ್ಬಾಗ್ ಗೇಟುಗಳನ್ನು ಮುಚ್ಚಲಾಗುತ್ತಿದೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಎಮರ್ಜೆನ್ಸಿ ಸಂದರ್ಭದಲ್ಲಿ ಮಾತ್ರ ಲಾಲ್ಬಾಗ್ ದ್ವಾರಗಳು ಮುಚ್ಚಿದ್ದವು. ಅದನ್ನು ಹೊರತುಪಡಿಸಿ ಸದಾ ಜನರನ್ನು ಕೈಬೀಸಿ ಕರೆಯುತ್ತಿದ್ದ ಸಸ್ಯಕಾಶಿ ಲಾಲ್ಬಾಗ್ ಇಂದಿನಿಂದ ಈ ತಿಂಗಳಾಂತ್ಯದವರೆಗೂ ಮುಚ್ಚಲಿದೆ.
ಹೋಟೆಲ್ಗಳಲ್ಲಿ ಜನರು ಪಾರ್ಸಲ್ ಮಾತ್ರ ತೆಗೆದುಕೊಂಡು ಹೋಗಲು ಅನುಮತಿ ಇದೆ. ಅಲ್ಲಿಯೇ ಊಟ ಮಾಡುವಂತಿಲ್ಲ. ಮನೆಗೆ ಪಾರ್ಸಲ್ ಕೊಂಡೊಯ್ದು ಊಟ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ಹೋಟೆಲ್ಗಳ ಮೇಲಿನ ನಿರ್ಬಂಧವು ಮಹಾನಗರಗಳಲ್ಲಿ ಮಾತ್ರ ಅನ್ವಯವಾಗುತ್ತವೆನ್ನಲಾಗಿದೆ.
ಮಾಧ್ಯಮಗಳಿಗೆ ಈ ವಿಚಾರ ಹಂಚಿಕೊಳ್ಳುವ ಮುನ್ನ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಜೊತೆ ವಿಡಿಯೋ ಸಂವಾದ ನಡೆಸಿದರು. ಮೋದಿ ಅವರು ಯಡಿಯೂರಪ್ಪ ಸೇರಿ ವಿವಿಧ ರಾಜ್ಯಗಳ ಸಿಎಂ ಜೊತೆ ಕೊರೋನಾ ಬಗ್ಗೆ ಪರಿಸ್ಥಿತಿ ವಿಚಾರಿಸಿದರು. ಈ ವೇಳೆ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು. ಅತ್ತ, ಕೇಂದ್ರ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಧಾನಿ ಕೂಡ ಮಾಹಿತಿ ಹಂಚಿಕೊಂಡರು.
ಇದನ್ನು ಓದಿ: ಕೊರೋನಾ ತಡೆಗೆ ಕ್ರಮ; ಪ್ರಧಾನಿ ಮೋದಿ ಜೊತೆಗೆ ಸಿಎಂ ಬಿಎಸ್ವೈ ನಡೆಸಿದ ವೀಡಿಯೋ ಸಂವಾದದ ಮುಖ್ಯಾಂಶಗಳು
ಭಾನುವಾರ ಸ್ವಯಂಪ್ರೇರಿತರಾಗಿ ಜನರು ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂಧು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಅದರಂತೆ ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೊಬ್ಬರು ಮನೆಯಿಂದ ಹೊರಗೆ ಬಾರದಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ಕರೆಗೆ ಸಾರ್ವಜನಿಕರಿಂದ ಎಲ್ಲ ಸಂಘ-ಸಂಸ್ಥೆಗಳು ಸ್ಪಂದಿಸಿದ್ದು, ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ಕೂಡ ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಅಂದು ಬೆಂಗಳೂರು ಮೆಟ್ರೋ ಸಂಚಾರ ಕೂಡ ರದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ