ಬೆಂಗಳೂರು (ಮೇ 19); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಂಗಳೂರು ಬಂಟರ ಸಂಘದ ವತಿಯಿಂದ ಕೋವಿಡ್ ರೋಗಿಗಳ ಆರೈಕೆಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಕೆಯ ಉಚಿತ ಆಕ್ಸಿಜನ್ ಅಭಿಯಾನವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ ಅವರು ಉದ್ಘಾಟಿಸಿದರು. ಭಾರತದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ನಗರ ಭಾಗದಲ್ಲಿ ಹೆಚ್ಚಾಗಿದ್ದ ಸೋಂಕು ಇದೀಗ ಗ್ರಾಮೀಣ ಭಾರತಕ್ಕೂ ಹರಡುತ್ತಿದೆ. ಕರ್ನಾಟಕದಲ್ಲೂ ಇದೀಗ ಸೋಂಕಿನ ಪ್ರಮಾಣ ಅಧಿಕವಾಗುತ್ತಿದ್ದು, ರೋಗಿಗಳು ಆಮ್ಲಜನಕ ಇಲ್ಲದೆ ಪರದಾಡುವಂತಾಗಿದೆ. ಹೀಗಾಗಿ ಬೆಂಗಳೂರು ಬಂಟರ ಸಂಘ ಕೋವಿಡ್ ರೋಗಿಗಳಿಗಾಗಿ ಉಚಿತ ಆಕ್ಸಿಜನ್ ಪೂರೈಕೆ ಅಭಿಯಾನವನ್ನು ಹಮ್ಮಿಕೊಂಡಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು ಬಂಟರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಅಶ್ವಥ ನಾರಾಯಣ್ ಅವರು, "ಬೆಂಗಳೂರು ಬಂಟರ ಸಂಘದ ವತಿಯಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ 20 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡಲಾಗುತ್ತದೆ. ಹಾಗೇ ವೈದ್ಯಕೀಯ ಆರೈಕೆಯನ್ನು ಸಹ ಮಾಡಲಾಗುತ್ತದೆ" ಎಂದು ಹೇಳಿದರು.
ಇನ್ನು ಬೆಂಗಳೂರು ಬಂಟರ ಸಂಘ ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಮತ್ತು ಸಾಮಾಜಿಕ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ಕೊರತೆಯ ಸಮಯದಲ್ಲಿ ಬೆಂಗಳೂರು ಬಂಟರ ಸಂಘ ನೆರವಿನ ಹಸ್ತ ನೀಡಿದೆ ಎಂದು ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಶೆಟ್ಟಿಯವರು, "ಸದ್ಯ ಬಂಟರ ಸಂಘದಿಂದ 20 ಅಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಪೂರೈಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಒಟ್ಟು 100 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.
ಬೆಂಗಳೂರು ಬಂಟರ ಸಂಘದ ವೈದ್ಯಕೀಯ ವಿಭಾಗದಿಂದ ನೂರು ಮಂದಿ ವೈದ್ಯರ ತಂಡವನ್ನು ರಚಿಸಲಾಗಿದೆ. ಈ ತಂಡದಿಂದ ಸೋಂಕಿತರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುತ್ತದೆ. ಹಾಗೇ,ಪ್ಲಾಸ್ಮಾ ದಾನ ಮಾಡುವವರಿಗೂ ಸೂಕ್ತ ಸಹಾಯವನ್ನು ಮಾಡಲಾಗುತ್ತದೆ" ಎಂದರು.
ಬೆಂಗಳೂರು ಬಂಟರ ಸಂಘದ ಸದಸ್ಯರು, ಸಮುದಾಯದವರು, ಆರ್ ಎನ್.ಎಸ್ ವಿದ್ಯಾ ಸಂಸ್ಥೆಯ ಶಾಲಾ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಸುಮಾರು ಎಂಟು ಸಾವಿರ ಪೋಷಕರು ಈ ಉಚಿತ ಆಕ್ಸಿಜನ್ ಅಭಿಯಾನದ ನೆರವನ್ನು ಪಡೆದುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ