news18-kannada Updated:July 6, 2020, 3:05 PM IST
ಮಾಜಿ ಸಂಸದ ವಿ.ಎಸ್. ಉಗ್ರಪ್ಪ
ಬೆಂಗಳೂರು(ಜು.06): ಕೋವಿಡ್-19 ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಸಂಬಂಧಪಟ್ಟ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದರು. ಪಿಪಿಇ ಕಿಟ್ , ಆಂಬ್ಯುಲೆನ್ಸ್ ನಲ್ಲಿ ಹಣ ಮಾಡೋಕೆ ಹೋಗಿದ್ದೀರಲ್ರೀ. ಯಡಿಯೂರಪ್ಪನವರೇ ನಿಮಗೆ ತಾಕತ್ತಿದ್ದರೆ, ಈ ಪ್ರಕರಣವನ್ನು ಹೈಕೋರ್ಟ್ ಸಿವಿಲ್ ನ್ಯಾಯಾಲಯಕ್ಕೆ ಕೊಡಿ ಎಂದು ಸವಾಲೆಸೆದರು.
ಮುಂದುವರೆದ ಅವರು, ಜಿಲ್ಲಾ ಸಚಿವರು ಯಾವ ಆಸ್ಪತ್ರೆಗೆ ಹೋಗಿದ್ದಾರೆ? ಎಲ್ಲಿ ಹೋಗಿದ್ದಾರೆ? ಖಾಸಗಿ ಆಸ್ಪತ್ರೆಯಲ್ಲಿ ಶೇ. 50 ರಷ್ಟು ಬೆಡ್ ಇದೆ ಅಂತ ಸುಧಾಕರ್ ಹೇಳಿದ್ದಾರೆ. ಆದರೆ ಇವಾಗ ನೋಡಿದರೆ ಶೇ.15ರಷ್ಟು ಬೆಡ್ಗಳೂ ಇಲ್ಲ. ಬೆಂಗಳೂರನ್ನು ಸ್ಮಶಾನ ಮಾಡಲು ಹೊರಟಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಕೊರೋನಾ ವಿಚಾರಕ್ಕೆ ಶ್ವೇತ ಪತ್ರವನ್ನು ಹೊರಡಿಸಬೇಕು. ವಿಶೇಷ ಅಧಿವೇಶನ ಕರೆಯಬೇಕು ಎಂದು ಹೇಳಿದ್ದೇವೆ. ಆದರೆ ಕೋವಿಡ್ ಉಸ್ತುವಾರಿ ವಹಿಸಿಕೊಳ್ಳುವಲ್ಲಿ ಬಿಜೆಪಿ ಸಚಿವರ ನಡುವೆ ಪೈಪೋಟಿ ಏರ್ಪಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಖಾಸಗಿ ಶಿಕ್ಷಕರ ಪರ ಧ್ವನಿಯೆತ್ತಿದ ಜೆಡಿಯು; ಅನುಮತಿಯಿಲ್ಲದೇ ಸಿಎಂ ಗೃಹ ಕಚೇರಿವರೆಗೆ ರ್ಯಾಲಿ
ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರಿಗೆ ಯಡಿಯೂರಪ್ಪನವರು ಉತ್ತರದಾಯಿತ್ವ ಆಗಿದ್ದಾರೆ. ಯಾರಾದರೂ ಒಬ್ಬರು ಡಾಕ್ಟರ್ನಲ್ಲಿ ಕಾನ್ಫಿಡೆನ್ಸ್ ಕ್ರಿಯೇಟ್ ಮಾಡುವುದಕ್ಕೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಬರೀ ದುಡ್ಡು ಲೂಟಿ ಮಾಡಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಜನರ ಪ್ರಾಣ ಉಳಿಸಬೇಕಿರುವುದು ರಾಜ್ಯ , ಕೇಂದ್ರ ಸರ್ಕಾರಗಳು. ದೇಶದ ಗಡಿ ಉಳಿಸುವುದಕ್ಕೆ ಮೋದಿ ಕೈಯಿಂದ ಆಗಲಿಲ್ಲ. ಆಸ್ಪತ್ರೆಗಳಲ್ಲಾದರೂ ಸರಿಯಾದ ವ್ಯವಸ್ಥೆ ಮಾಡಿ. ಮೃತಪಟ್ಟವರನ್ನ ಸರಿಯಾಗಿ ಮಣ್ಣು ಮಾಡುವ ವ್ಯವಸ್ಥೆ ಮಾಡಿ. ಹೈ ಕೋರ್ಟ್ ಸಿಟಿಂಗ್ ಜೆಡ್ಜ್ ಅವರಿಂದ ಈ ಹಗರಣವನ್ನು ತನಿಖೆಗೆ ಒಳಪಡಿಸಿ ಎಂದು ಪುನರ್ ಆಗ್ರಹಿಸಿದರು.ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ವಿರುದ್ದ ಉಗ್ರಪ್ಪ ವಾಗ್ದಾಳಿ ನಡೆಸಿದರು. ಕಟೀಲು ನಮ್ಮ ಅಧ್ಯಕ್ಷರ ಬಗ್ಗೆ ಮಾತನಾಡಿದ್ದಾರೆ. ಆರಂಭ ಶೂರತ್ವ ಏನಿದ್ದರೂ ಬಿಜೆಪಿಯಲ್ಲಿ. ಮೋದಿ ಘೋಷಣೆ ಮಾಡಿ ಕಪ್ಪು ಹಣ ತರುತ್ತೇವೆ ಎಂದರು. ತಂದ್ರಾ? ಭ್ರಷ್ಟಾಚಾರ ನಿಯಂತ್ರಣ ಮಾಡಿದ್ರಾ? ತಲೆಕೆಳಗು ಮಾಡಿದ್ರು ಕಾಂಗ್ರೆಸ್ ಮುಗಿಸುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ನ ಇಡೀ ಕೇಡರ್ ಅವರ ಜೊತೆಗೆ ಇದೆ. ನೀವು ಹಗಲು ಕನಸು ಕಾಣುವುದು ಬಿಟ್ಟುಬಿಡಿ ಎಂದರು.
ಕೊರೋನಾ ನಿಯಂತ್ರಣದಲ್ಲಿ ಏನ್ರೀ ನಿಮ್ಮ ಕೊಡುಗೆ ಎಂದು ಕಟೀಲು ಅವರಿಗೆ ಉಗ್ರಪ್ಪ ಪ್ರಶ್ನಿಸಿದರು. ನಾವು ತರಕಾರಿ ಹಣ್ಣುಗಳನ್ನು ರೈತರಿಂದ ತೆಗೆದುಕೊಂಡು ಜನಸಾಮಾನ್ಯರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.
Published by:
Latha CG
First published:
July 6, 2020, 2:58 PM IST