ಕೊರೋನಾ ಸಂಕಷ್ಟದ ಸಮಯದಲ್ಲಿ ಗುತ್ತಿಗೆದಾರನಿಗೆ 1200 ಕೋಟಿ ರೂ. ಕೊಟ್ಟ ಸಿಎಂ; ರೇವಣ್ಣ ಗಂಭೀರ ಆರೋಪ

ಇಂತಹ ಸಂಕಷ್ಟದ ಸಮಯದಲ್ಲೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗುತ್ತಿಗೆದಾರನೊಬ್ಬನಿಗೆ 1200 ಕೋಟಿ ಹಣ ಕೊಟ್ಟಿದ್ದಾರೆ

 ಎಚ್​.ಡಿ. ರೇವಣ್ಣ

ಎಚ್​.ಡಿ. ರೇವಣ್ಣ

  • Share this:
ಹಾಸನ(ಏ.01) : ಕೊರೋನಾದಿಂದ ಜನರು ಊಟ ತಿಂಡಿ ಇಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗುತ್ತಿಗೆದಾರನೊಬ್ಬನಿಗೆ 1200 ಕೋಟಿ ಹಣ ಕೊಟ್ಟಿದ್ದಾರೆ ಎಂದು ಸಿಎಂ ಬಿಎಸ್ ವಿರುದ್ದ ಹೆಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದರು. 

ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಹಣ ಕೊಡಲ್ಲ. ಆದರೆ, ಗುತ್ತಿಗೆದಾರನಿಗೆ ಸಿಎಂ ಸಾವಿರಾರು ಕೋಟಿ ಹಣ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಗುತ್ತಿಗೆದಾರನ ಹೆಸರು ಬಹಿರಂಗಪಡಿಸುತ್ತೇನೆ ಎಂದು ಸರ್ಕಾರದ ವಿರುದ್ದ ರೇವಣ್ಣ ಗುಡುಗಿದರು.

ರಾಜ್ಯದಲ್ಲಿ ಪ್ರತಿನಿತ್ಯ 69ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಆದರೆ, ಅದರಲ್ಲಿ 40 ಲಕ್ಷ ಲೀಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ. ಉಳಿದ 28 ಲಕ್ಷ ಲೀಟರ್ ಹಾಲನ್ನು ಸಂರಕ್ಷಣೆ ಮಾಡಬೇಕಿದೆ. ನಮ್ಮಲ್ಲಿ 10 ರಿಂದ 12 ಲಕ್ಷ ಲೀಟರ್ ಸಂರಕ್ಷಣೆ ಸಾಮರ್ಥ್ಯ ಇದೆ. ಕನಿಷ್ಠ 15 ಲಕ್ಷ ಲೀಟರ್ ಸಂರಕ್ಷಣೆ ಸಾಮರ್ಥ್ಯ ಕೂಡ ಇಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಸುಮ್ಮನೆ ರೈತರನ್ನು ಸಂಕಷ್ಟಕ್ಕೆ ದೂಡಬಾರದು ಎಂದ ರೇವಣ್ಣ, ರೈತರ ಹಾಲು ಕೊಳ್ಳುವ ವಿಷಯದಲ್ಲಿ ಕೆಎಂಎಫ್ ತೆಗೆದುಕೊಳ್ಳುತ್ತಿರುವ ಕ್ರಮಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ನಾನು ಅಧಿಕಾರದಿಂದ ಇಳಿದ ನಂತರ 10 ವರ್ಷ ಏನೂ ಮಾಡಲೇ ಇಲ್ಲ. ಬೆಂಗಳೂರು ಹಾಲಿನ ಮಾರಾಟ ಬಿದ್ದು ಹೋಗಿದೆ. ಕಳೆದ ಐದಾರು ವರ್ಷದಿಂದ ಮಾರಾಟದ ಪ್ರಮಾಣವನ್ನು ಹೆಚ್ಚು ಮಾಡಲಾಗಿಲ್ಲ. ಹೀಗಾಗಿ ಒಕ್ಕೂಟಗಳೇ ಏನಾದರೂ ಮಾಡಿಕೊಳ್ಳಿ. ರಜವನ್ನಾದರೂ ಕೊಡಿ. ಪ್ರತಿ ಮೂರು ದಿನಕ್ಕೊಮ್ಮೆ ಹಾಲು ಕೊಳ್ಳುವುದು ನಿಲ್ಲಿಸಿ ಅಂತಿದ್ದಾರೆ. ಒಕ್ಕೂಟಗಳೇ ಏನಾದರೂ ಮಾಡಿಕೊಳ್ಳಿ ಅಂದರೆ ಕೆಎಂಎಫ್ ಯಾಕೆ ಬೇಕು. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದರು.

ದೇಶದಲ್ಲಿ ಯಾವ ಪರಿಸ್ಥಿತಿ ಇದೆ ಗೊತ್ತಿಲ್ಲ. ನಮ್ಮನ್ನು ದೇವರೇ ಕಾಪಾಡಬೇಕು. ಇದರಿಂದ ಕೂಲಿಗೆ ಹೋಗುವ ಕುಟುಂಬಗಳಿಗೆ ಕೆಲಸ ಇಲ್ಲದಂತಾಗಿವೆ. ಇದಿರಿಂದ ಊಟ ತಿಂಡಿ ಇಲ್ಲದೆ ಸಾಯುವ ಪರಿಸ್ಥಿತಿ ಉಂಟಾಗುತ್ತಿದೆ. ಇದರ ಬಗ್ಗೆ ಚಿಂತಿಸದೆ ಮನೆಯಿಂದ ಆಚೆ ಬರಬೇಡಿ ಅಂದರೆ ಏನರ್ಥ ಎಂದು ಸರ್ಕಾರದ ವಿರುದ್ದ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕೊರೋನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಸ್ವಾಮೀಜಿ - ಮನೆ ಮನೆಗೆ ತೆರಳಿ ಮಾಸ್ಕ್​​ ವಿತರಣೆ

ಲಾಕ್ ಡೌನ್ ಮಾಡಿದ ನಂತರ ಕೂಲಿಕಾರ್ಮಿಕರ ಸ್ಥಿತಿ ಏನು. ಜಿಲ್ಲಾಧಿಕಾರಿ ಕೇಳಿದರೇ ನನಗೇನೂ ಗೊತ್ತಿಲ್ಲ ಅಂತಾರೆ. 13 ಲಕ್ಷ ರೈತ ಕುಟುಂಬ ಹಾಲು ಹಾಕುತ್ತಾರೆ. ಹಾಲನ್ನೇ ನಂಬಿ ಬದುಕುತ್ತಿರುವವರು ವಾರಕ್ಕೆ ಮೂರು ದಿನ ಡೈರಿ ರಜೆ ಮಾಡಿದ್ರೆ ಏನು ಮಾಡುತ್ತಾರೆ. ನಮ್ಮ ಹಳ್ಳಿಗಳಲ್ಲೇ ವಾರಕ್ಕೆ ಕನಿಷ್ಟ 5 ಜನ ಸಾಯುತ್ತಿದ್ದಾರೆ. ನಾನೇ ಒಂದು ವಾರದಿಂದ 20 ಮನೆಗಳಿಗೆ ಸಾವಿಗೆ ಹೋಗಿ ಬಂದಿದ್ದೇನೆ. ಅವರೆಲ್ಲ ಅನಾರೋಗ್ಯದಿಂದ ಸಾಯುತ್ತಿದ್ದಾರೆ. ಆಸ್ಪತ್ರೆಗೆ ತೋರಿಸಲು ಹಣ ಬೇಕು. ಮಾನ ಮರ್ಯಾದೆಗೆ ಅಂಜಿ ಯಾರೂ ಬೀದಿಗೆ ಬರುತ್ತಿಲ್ಲ ಎಂದರು.
First published: