• Home
  • »
  • News
  • »
  • coronavirus-latest-news
  • »
  • ನನ್ನ ಮೇಲಿನ ದ್ವೇಷಕ್ಕೆ ನನ್ನ ಜನರನ್ನು ಬಲಿ ಕೊಡುತ್ತಿದ್ದಾರೆ: ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ನನ್ನ ಮೇಲಿನ ದ್ವೇಷಕ್ಕೆ ನನ್ನ ಜನರನ್ನು ಬಲಿ ಕೊಡುತ್ತಿದ್ದಾರೆ: ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಬಿ.ಎಸ್.ಯಡಿಯೂರಪ್ಪ ಮತ್ತು ಎಚ್​.ಡಿ.ಕುಮಾರಸ್ವಾಮಿ

ಬಿ.ಎಸ್.ಯಡಿಯೂರಪ್ಪ ಮತ್ತು ಎಚ್​.ಡಿ.ಕುಮಾರಸ್ವಾಮಿ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಹುರುಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮೀನಾಕ್ಷಿಗೆ ಕಿರುಕುಳ ಪ್ರಕರಣ ಸಂಬಂಧ ಆತ್ಮಹತ್ಯೆಗೆ ಯತ್ನಿಸಿದ್ದ  ಆಶಾ ಕಾರ್ಯಕರ್ತೆ ಮೀನಾಕ್ಷಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮೀನಾಕ್ಷಿ ಅವರನ್ನು ಭೇಟಿ ಮಾಡಿದ ಎಚ್​.ಡಿ. ಕುಮಾರಸ್ವಾಮಿ ಆಶಾ ಕಾರ್ಯಕರ್ತೆ ಮೀನಾಕ್ಷಿಯವರ ಆರೋಗ್ಯ ವಿಚಾರಿಸಿದರು.

ಮುಂದೆ ಓದಿ ...
  • Share this:

ಮೈಸೂರು: ನನ್ನ ಮೇಲಿನ ದ್ವೇಷಕ್ಕೆ ನನ್ನ ಜನರಿಗೆ ತೊಂದರೆ ಕೊಡಲು ಯತ್ನ ನಡೆದಿದೆಯಾ ಎಂಬ ಅನುಮಾನವಿದೆ, ಎಡಿಜಿಪಿ ಅಲೋಕ್ ಮೋಹನ್ ಎಂಬ ಅಧಿಕಾರಿಗೆ ನನ್ನ ಮೇಲೆ ದ್ವೇಷವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ ಎಚ್​.ಡಿ.ಕುಮಾರಸ್ವಾಮಿ,  ಇದೇ ಮನುಷ್ಯನೆ ಪಾದರಾಯನಪುರದಿಂದ ರಾಮನಗರಕ್ಕೆ ಅವರನ್ನು ಶಿಫ್ಟ್ ಮಾಡಿಸಿದ್ದು. ಆತನನ್ನು ನಾನು ಬೆಂಗಳೂರು ನಗರ ಕಮಿಷನರ್ ಮಾಡಲಿಲ್ಲ‌ ಅನ್ನೋ ದ್ವೇಷಕ್ಕೆ ಹೀಗೆ ಮಾಡಿರಬಹುದು. ನನ್ನ ಮೇಲೆ ದ್ವೇಷವಿದ್ದರೆ ನನ್ನ ಮೇಲೆ ತೀರಿಸಿಕೊಳ್ಳಿ, ಅದನ್ನು ಬಿಟ್ಟು ನನ್ನ ಜನರ ಮೇಲೆ ಅಲ್ಲ. ಸರ್ಕಾರದ ತಪ್ಪು ಕ್ರಮದಿಂದ ರಾಮನಗರದ ಜನಕ್ಕೆ ಸಂಕಷ್ಟ ಬಂದಿದೆ ಎಂದು ಬಹಿರಂಗವಾಗಿ ಎಡಿಜಿಪಿ ಅಲೋಕ್ ಮೋಹನ್ ವಿರುದ್ದ ಗಂಭೀರ ಆರೋಪ ಮಾಡಿದರು. ರಾಮನಗರಕ್ಕೆ ಪಾದರಾಯನಪುರದ ಆರೋಪಿಗಳನ್ನು ಯಾಕೆ ಶಿಫ್ಟ್ ಮಾಡಿದರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ ಎಂದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಹುರುಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮೀನಾಕ್ಷಿಗೆ ಕಿರುಕುಳ ಪ್ರಕರಣ ಸಂಬಂಧ ಆತ್ಮಹತ್ಯೆಗೆ ಯತ್ನಿಸಿದ್ದ  ಆಶಾ ಕಾರ್ಯಕರ್ತೆ ಮೀನಾಕ್ಷಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮೀನಾಕ್ಷಿ ಅವರನ್ನು ಭೇಟಿ ಮಾಡಿದ ಎಚ್​.ಡಿ. ಕುಮಾರಸ್ವಾಮಿ ಆಶಾ ಕಾರ್ಯಕರ್ತೆ ಮೀನಾಕ್ಷಿಯವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಜಿ ಸಚಿವ ಸಾ. ರಾ ಮಹೇಶ್, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಜರಿದ್ದರು.

ಬಳಿಕ ನ್ಯೂಸ್ ‌18 ಜತೆ ಮಾತನಾಡಿದ ಎಚ್‌ಡಿಕೆ ಪಾದರಾಯನಪುರದಲ್ಲಿನ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಬೇಕು ಅನ್ನೋದು ಹುಡುಗಾಟಿಕೆಯ ನಿರ್ಧಾರ. ಇದನ್ನು ಯಾರು ಯಾವ ಉದ್ದೇಶದಿಂದ ಸರ್ಕಾರಕ್ಕೆ ಸಲಹೆ ಕೊಟ್ಟರೋ ಗೊತ್ತಿಲ್ಲ, ಆ ಅಲೋಕ್ ಮೋಹನ್ ನೀಡಿರುವ ಸಲಹೆಯನ್ನು‌ ಸರ್ಕಾರ ಜನರ ಮುಂದೆ ಇಡಲಿ. ಒಂದು ತಿಂಗಳಿನಿಂದ ಸರ್ಕಾರಕ್ಕೆ ಜನ ನೀಡಿದ್ದ ಸಹಕಾರ ನೀರಿನಲ್ಲಿ‌ ಹೋಮ ಮಾಡಿದಂತಾಯಿತು. ರಾಮನಗರದ ಈ ಸ್ಥಿತಿಗೆ ಸರ್ಕಾರವೇ ನೇರ ಹೊಣೆ ಅಂತ ಆರೋಪಿಸಿದರು.

ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿಸಬೇಡಿ ಎಂದು ನಾನು ಸರ್ಕಾರಕ್ಕೆ ಆಗಲೇ ಹೇಳಿದ್ದೆ. ಆದರೆ ಈಗ ಮೊದಲ ಕಂತಿನಲ್ಲಿ ಬಂದ 49 ಜನರ ಪೈಕಿ ಇಬ್ಬರಿಗೆ ಸೋಂಕು ತಗುಲಿದೆ. ಇದರಿಂದ ಇಡೀ ಜೈಲನ್ನು ಸೀಲ್ ಮಾಡಿ ಕ್ವಾರಂಟೈನ್ ಮಾಡಬೇಕು. ಅಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬಸ್ಥರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಈ ಘಟನೆಯಿಂದ ಗ್ರೀನ್ ಜೋನ್‌ನಲ್ಲಿದ್ದ ರಾಮನಗರದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಾಂತರ ಸಂದರ್ಭದಲ್ಲಿ ವೈದ್ಯಕೀಯ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಇದದ್ದು ಇಷ್ಟೆಲ್ಲಾ ರಾದ್ದಾಂಕಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಸ್ಥಳಾಂತರ ವಿಚಾರದಲ್ಲೂ ಅಲೋಕ್ ಮೋಹನ್ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜೈಲು ಮುಂದೆ ಬಂದಿದ್ದ ಬಸ್‌ಗಳನ್ನು ವಾಪಸ್ ಕಳುಹಿಸಿದ್ದಾರೆ. ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಇವರು ಯಾರು? ಗೃಹ ಮಂತ್ರಿಗಳು ಇವರ ಉಡಾಫೆ ಮಾತು ನಂಬುವುದು ಬೇಡ ಎಂದು ಸಲಹೆ ನೀಡಿದರು.

ಆಶಾ ಕಾರ್ಯಕರ್ತೆ ಆತ್ಮಹತ್ಯೆ ಯತ್ನ ಪ್ರಕರಣಕ್ಕೂ ಪ್ರತಿಕ್ರಿಯಿಸಿದ ಎಚ್‌ಡಿಕೆ, ಆಶಾ ಕಾರ್ಯಕರ್ತೆ ಮೀನಾಕ್ಷಿ ಭಯದಿಂದ ಇನ್ನೂ ಹೊರಬಂದಿಲ್ಲ. ಕೊರೋನಾ ಬಗ್ಗೆ ಮಾಹಿತಿ ಪಡೆಯಲು ಹೋದಾಗ ಕಂಪ್ಯೂಟರ್ ವರ್ಕರ್ ಅವಿನಾಶ್ ಮತ್ತು ಇತರರು ಮೀನಾಕ್ಷಿ ವಿರುದ್ಧ ಹರಿಹಾಯ್ದಿದ್ದಾರೆ. ಮನ ಬಂದಂತೆ ಮಾತನಾಡಿ ಕಿರುಕುಳ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತೊಂದರೆ ಕೊಡುವ ಪ್ರಕರಣ ಹೆಚ್ಚಾಗುತ್ತಿದೆ. ಕಿರುಕುಳ ನೀಡುವವರ ಹೆಡೆಮುರಿ ಕಟ್ಟುತ್ತೇವೆ ಅಂತ ಮಾಧ್ಯಮಗಳ ಮುಂದೆ ಪ್ರಚಾರಕ್ಕೆ ಹೇಳಿದ್ದಾರೋ ಅಥವಾ ಕೊರೋನಾ ವಾರಿಯರ್ಸ್ ರಕ್ಷಣೆ ಕೊಡಲು ಹೇಳಿದ್ದಾರೋ ನನಗೆ ತಿಳಿಯದು ಅಂತ ಲೇವಡಿ ಮಾಡಿದರು.

ಇದನ್ನು ಓದಿ: ಪಾದರಾಯನಪುರ ಗಲಾಟೆ ಆರೋಪಿಗಳು ಬೆಂಗಳೂರಿಗೆ ಶಿಫ್ಟ್‌; ರೆಡ್‌ಜೋನ್‌ನಲ್ಲಿ ಹೆಚ್ಚಿದ ಆತಂಕ

ರಾಜಕೀಯ ಒತ್ತಡ ಹೇರಿ ಪೊಲೀಸ್ ಠಾಣೆಯಿಂದ ಆರೋಪಿಗಳನ್ನು ಜಾಮೀನಿನ ಬಿಡುಗಡೆ ಮಾಡಿದ್ದಾರೆ ಇಂತಹ ಹಲವು ಘಟನೆಗಳಿಂದ  ರಾಜ್ಯ ಸರ್ಕಾರ ಪದೆ ಪದೇ ಮುಜುಗರಕ್ಕೆ ಒಳಗಾಗುತ್ತಿದೆ, ಕೊರೋನಾ ವಿಚಾರದಲ್ಲಿ ಸರ್ಕಾರಕ್ಕೆ ಗಂಭೀರತೆ ಇಲ್ಲ‌ ಅಂತ ವಾಗ್ದಾಳಿ ನಡೆಸಿದರು.

First published: