ಪ್ರವಾಹದ ಕಹಿನೆನಪು ಮಾಸುವ ಮೊದಲೇ ಚಾರ್ಮಾಡಿ ಗ್ರಾಮದಲ್ಲಿ ಮತ್ತೆ ಶುರುವಾಗಿದೆ ನೆರೆಯ ಭೀತಿ

ಪಶ್ಚಿಮಘಟ್ಟ ಪ್ರದೇಶದ ಹಲವಾರು ಪರ್ವತಗಳು ಮಣ್ಣಾಗಿ ಕರಗಿ ಕಳೆದ ಬಾರಿ ನೀರಿನ ಮೂಲಕ ಪ್ರವಾಹವಾಗಿ ಹರಿದಿತ್ತು. ಈ ಬಾರಿಯೂ ಚಾರ್ಮಾಡಿ ಘಾಟ್ ನ ಹಲವು ಭಾಗಗಳಲ್ಲಿ ಗುಡ್ಡ ಜರಿತದಂತಹ ಘಟನೆಗಳು ನಡೆಯಲಾರಂಭಿಸಿವೆ. ಮಳೆ ಹೆಚ್ಚಾದಂತೆ ಗುಡ್ಡಗಳ ಜರಿತ ಹೆಚ್ಚಾಗುವ ಸಾಧ್ಯತೆಯೂ ಇರುವುದು ಚಾರ್ಮಾಡಿ ಭಾಗದ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

news18-kannada
Updated:July 10, 2020, 3:30 PM IST
ಪ್ರವಾಹದ ಕಹಿನೆನಪು ಮಾಸುವ ಮೊದಲೇ ಚಾರ್ಮಾಡಿ ಗ್ರಾಮದಲ್ಲಿ ಮತ್ತೆ ಶುರುವಾಗಿದೆ ನೆರೆಯ ಭೀತಿ
ಚಾರ್ಮಾಡಿ ಘಾಟ್​
  • Share this:
ದಕ್ಷಿಣ ಕನ್ನಡ(ಜು.10): ಕಳೆದ ಬಾರಿ ಪಶ್ಚಿಮಘಟ್ಟ ಹಾಗೂ ಕರಾವಳಿ ಭಾಗಗಳಲ್ಲಿ ಸುರಿದ ಮಳೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಕ್ಷರಶ ಮುಳುಗಿಸಿತ್ತು. ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಸಂಪರ್ಕಗಳೂ ಮುಚ್ಚಿ ದ್ವೀಪದಂತಾಗಿತ್ತು. ಆ ಕಹಿ ನೆನಪು ಜಿಲ್ಲೆಯ ಜನರನ್ನು ಇಂದಿಗೂ ಕಾಡುತ್ತಿದೆ. ಇದೀಗ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮತ್ತದೇ ರೀತಿಯ ಮಳೆಯ ಆರ್ಭಟ ಕೇಳಿ ಬರಲಾರಂಭಿಸಿದ್ದು, ಬೆಳ್ತಂಗಡಿ ಭಾಗದ ಜನರಲ್ಲಿ ಕಳೆದ ವರ್ಷದ ಭೀತಿ ಮತ್ತೆ ಮೂಡುವಂತೆ ಮಾಡಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಭಾಗದ ಜನ ಹಿಂದೆಂದೂ ಕಾಣದ ಪ್ರವಾಹವನ್ನು ಕಂಡಿದ್ದರು. ಪ್ರತೀ ಮಳೆಗಾಲದಲ್ಲೂ ಉಕ್ಕಿ ಹರಿಯುತ್ತಿದ್ದ ಮೃತ್ಯುಂಜಯ ನದಿ ಹಲವು ಕುಟುಂಬಗಳ ಪಾಲಿಗೆ ವಿನಾಶಕಾರಿಯಾಗಿ ಕಾಡಿತ್ತು. ಮೃತ್ಯುಂಜಯ ನದಿಯ ಪಕ್ಕದಲ್ಲೇ ಬದುಕು ಕಟ್ಟಿಕೊಂಡು , ನದಿಯೊಂದಿಗೆ ಜೀವನ ಸಾಗಿಸುತ್ತಿದ್ದ ಚಾರ್ಮಾಡಿ ಭಾಗದ ಜನರಿಗೆ ತಮ್ಮ ನೆಚ್ಚಿನ ನದಿ ಈ ರೀತಿಯಲ್ಲಿ ಉಗ್ರರೂಪ ತಾಳುತ್ತದೆ ಎನ್ನುವ ನಂಬಿಕೆಯೂ ಇರಲಿಲ್ಲ.

ಉಕ್ಕಿ ಹರಿಯುತ್ತಿದ್ದ ನದಿ ನೀರಿನ ಜೊತೆಗೆ ಕಲ್ಲು-ಮಣ್ಣು-ಮರಳಿನ ಪ್ರವಾಹವನ್ನೇ ತನ್ನ ಜೊತೆಗೆ ಕರೆತಂದಿತ್ತು. ನದಿಯ ರೌದ್ರಾವತಾರಕ್ಕೆ ನದಿ ಪಾತ್ರದಲ್ಲಿದ್ದ 14 ಮನೆಗಳು ಸಂಪೂರ್ಣ ನಾಶಗೊಂಡಿತ್ತು. ಜೀವನಾಧಾರಕ್ಕಾಗಿ ಮಾಡಿಕೊಂಡಿದ್ದ ಅಡಿಕೆ, ತೆಂಗು,ಭತ್ತದ ಗದ್ದೆಗಳು ಮರಳಿನ ರಾಶಿಯಿಂದ ತುಂಬಿ ಹೋಗಿತ್ತು. ಇನ್ನೆಂದೂ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಕೊರಗಿಕೊಂಡಿದ್ದ ಚಾರ್ಮಾಡಿಯ ಕೊಳಂಬೆ, ಅಂತರ ಮೊದಲಾದ ಭಾಗದ ಕುಟುಂಬಗಳಿಗೆ ಸರಕಾರ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನೆರವಿನ ಹಸ್ತ ನೀಡಿದೆ.

ನೆರೆ ಸಂತ್ರಸ್ತರಿಗಾಗಿಯೇ ಆರಂಭಗೊಂಡ ಬದುಕು ಕಟ್ಟೋಣ ಎನ್ನುವ ಸಂಘಟನೆ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿ, ಕೃಷಿ ಬದುಕನ್ನು ಮತ್ತೆ ಪುನರಾರಂಭಿಸುವ ಕಾರ್ಯದಲ್ಲಿ ನೆರವಾಗಿದೆ. 14 ಹೊಸ ಮನೆಗಳ ನಿರ್ಮಾಣ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿದ್ದು, ಸರಕಾರದ 5 ಲಕ್ಷ ಅನುದಾನದ ಜೊತೆಗೆ ಬದುಕು ಕಟ್ಟೋಣ ಸಂಘಟನೆ ಉಳಿದ ಹಣವನ್ನು ಹೊಂದಿಸಿ  ಸುಮಾರು 15 ಲಕ್ಷ ಅಂದಾಜಿನ ಮನೆಗಳ ನಿರ್ಮಾಣ ಮಾಡಲಾರಭಿಸಿದೆ ಎನ್ನುತ್ತಾರೆ ನೆರೆಗೆ ಮನೆ ಕಳೆದುಕೊಂಡ ನಿಶಾಂತ್ ಕೊಳಂಬೆ.

ಕಲಬುರ್ಗಿಯಲ್ಲಿ ಕೈದಿಗಳಿಗೂ ವಕ್ಕರಿಸಿದ ಕೊರೋನಾ; ಪೆರೋಲ್ ಮೇಲೆ ಹೋಗಿದ್ದ 10 ಮಂದಿಗೆ ಸೋಂಕು

ಪ್ರವಾಹದ ಬಳಿಕ ಒಂದು ವರ್ಷವನ್ನು ಅತ್ಯಂತ ಕಷ್ಟದಲ್ಲಿ ಕಳೆದಿರುವ ಈ ಭಾಗದ ಕುಟುಂಬಗಳಿಗೆ ಇದೀಗ ಮಳೆಗಾಲ ಆರಂಭವಾದಂತೆ ಎದೆಯಲ್ಲಿ ನಡುಕ ಶುರುವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮೃತ್ಯುಂಜಯ ಹೊಳೆ ತಮ್ಮ ಪಾಲಿಗೆ ವಿನಾಶಕಾರಿಯಾಗಿ ಕಾಡುತ್ತದೆಯೇ ಎನ್ನುವ ಭೀತಿಯೂ ಹೆಚ್ಚಾಗಿದೆ. ಕೇವಲ ಸಣ್ಣ ತೊರೆಯ ರೂಪದಲ್ಲಿ ಹರಿಯುತ್ತಿದ್ದ ಮೃತ್ಯುಂಜಯ ನದಿ ಇದೀಗ ದೊಡ್ಡ ಗಾತ್ರದಲ್ಲಿ ಹರಿಯಲಾರಂಭಿಸಿದ್ದು, ಪ್ರವಾಹ ಭೀಕರತೆಯ ಚಿತ್ರಣವನ್ನು ನೆನಪಿಸುತ್ತಿದೆ.

ಪ್ರವಾಹದ ಬಳಿಕ ಸರಕಾರದ ವತಿಯಿಂದ ನದಿಯ ಎರಡೂ ಬದಿಗೂ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳುವ ಹಂತದಲ್ಲಿದೆ. ಕೊಚ್ಚಿ ಹೋದ ಸೇತುವೆಯ ಸ್ಥಳದಲ್ಲಿ ನೂತನ ಸೇತುವೆಯ ನಿರ್ಮಾಣವೂ ಆಗಿದೆ. ಆದರೆ ಮಳೆಯ ಭೀತಿ ಮಾತ್ರ ಈ ಭಾಗದ ಜನರಲ್ಲಿ ಮತ್ತೆ ಮತ್ತೆ ಕಾಡಲಾರಂಭಿಸಿದೆ ಎನ್ನುವ ಆತಂಕ ಹೊರಹಾಕುತ್ತಾರೆ ಮನೆ ಕಳೆದುಕೊಂಡ ಸಂತ್ರಸ್ತೆ ಯುವತಿ ಅಶ್ವಿತಾ.

ಪಶ್ಚಿಮಘಟ್ಟ ಪ್ರದೇಶದ ಹಲವಾರು ಪರ್ವತಗಳು ಮಣ್ಣಾಗಿ ಕರಗಿ ಕಳೆದ ಬಾರಿ ನೀರಿನ ಮೂಲಕ ಪ್ರವಾಹವಾಗಿ ಹರಿದಿತ್ತು. ಈ ಬಾರಿಯೂ ಚಾರ್ಮಾಡಿ ಘಾಟ್ ನ ಹಲವು ಭಾಗಗಳಲ್ಲಿ ಗುಡ್ಡ ಜರಿತದಂತಹ ಘಟನೆಗಳು ನಡೆಯಲಾರಂಭಿಸಿವೆ. ಮಳೆ ಹೆಚ್ಚಾದಂತೆ ಗುಡ್ಡಗಳ ಜರಿತ ಹೆಚ್ಚಾಗುವ ಸಾಧ್ಯತೆಯೂ ಇರುವುದು ಚಾರ್ಮಾಡಿ ಭಾಗದ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
Published by: Latha CG
First published: July 10, 2020, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading