ದಡದಲ್ಲಿ ನಿಂತಿರುವ ದೋಣಿಗಳು
ಕಾರವಾರ(ಮೇ 07): ಲಾಕ್ ಡೌನ್ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ನೇಕಾರರು, ಆಟೋ, ಟ್ಯಾಕ್ಸಿ ಚಾಲಕರು, ಅಗಸರು ಹೀಗೆ ವಿವಿಧ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿದ್ದವರಿಗೆ ಸರಕಾರ ನೆರವು ನೀಡಿದೆ. ಆದರೆ, ಈ ನಡುವೆ ಸಾಂಪ್ರದಾಯಿಕ ಮೀನುಗಾರರು ಕೂಡಾ ಲಾಕ್ ಡೌನ್ ನಿಂದ ಆರ್ಥಿಕವಾಗಿ ಮುಗ್ಗರಿಸಿದರು. ಹೀಗಿರುವಾಗ ಸಾಂಪ್ರದಾಯಿಕ ಮೀನುಗಾರರನ್ನ ಕಡೆಗೆಣಿಸಿರುವುದು ಸಮಂಜಸವಲ್ಲ ಎಂದು ಮೀನುಗಾರರು ಮುಖ್ಯಮಂತ್ರಿಗಳ ಮೇಲೆ ಬೇಸರಗೊಂಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಮೀನುಗಾರಿಕೆ ನಿಷೇಧ ಮಾಡಿ ಕೊನೆಗಳಿಗೆಯಲ್ಲಿ ಅವಕಾಶ ನೀಡಲಾಗಿದೆ. ನಿಷೇಧ ಇದ್ದ ಸಂದರ್ಭದಲ್ಲಿ ಆರ್ಥಿಕವಾಗಿ ತಾವು ಸಮಸ್ಯೆ ಎದುರಿಸಿದ್ದೇವೆ. ತಮಗೂ ಕೂಡ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಸಾಂಪ್ರದಾಯಿಕ ಮೀನುಗಾರರು ಒತ್ತಾಯಿಸಿದ್ದಾರೆ.
ಈಗಾಗಲೇ ಸರಕಾರ ಮೀನುಗಾರರ ಸಾಲ ಮನ್ನಾ ಮಾಡಲು ಘೋಷಣೆ ಮಾಡಿದೆ. ಯಾಂತ್ರಿಕೃತ ದೋಣಿ, ಬೋಟ್ ಇರುವ ಮೀನುಗಾರರು ಮಾತ್ರ ಇದರ ಸದುಪಯೋಗ ಪಡೆಯಲಿದ್ದಾರೆ. ನಾಡ ದೋಣಿ ಅಥವಾ ಸಾಂಪ್ರದಾಯಿಕ ಮೀನುಗಾರರು ಇದರ ಪ್ರಯೋಜನದಿಂದ ವಂಚಿತರಾಗಲಿದ್ದಾರೆ.
ನಿನ್ನೆಯ ಯಡಿಯೂರಪ್ಪನವರ ಬಂಪರ್ ಪ್ಯಾಕೇಜ್ ನಲ್ಲಿ ಮೀನುಗಾರರನ್ನು ಕೂಡಾ ಗಣನೆಗೆ ತೆಗೆದುಕೊಂಡು ಆರ್ಥಿಕ ನೆರವು ನೀಡಬೇಕಾಗಿತ್ತು ಎಂದು ಸ್ಥಳೀಯ ಬಿಜೆಪಿ ಶಾಸಕರೇ ಅಸಮಾಧಾನದಲ್ಲಿ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ :
ಕೂಲಿ ಕಿತ್ತುಕೊಂಡ ಕೊರೋನಾ ; ಚಿಕಿತ್ಸೆಗೂ ಹಣವಿಲ್ಲದೆ ಕುಟುಂಬದ ಪರದಾಟ...!
ಒಟ್ಟಾರೆ ವಿವಿಧ ವೃತಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಕೊನೆಗೂ ಸರಕಾರದಿಂದ ಆರ್ಥಿಕ ನೆರವು ಸಿಕ್ಕಂತಾಗಿದೆ. ಈ ನಡುವೆ ಸಾಂಪ್ರದಾಯಿಕ ಮೀನುಗಾರರ ಕೈ ಬಿಟ್ಟಿರುವುದು ಅಸಮಾಧಾನದ ಹೊಗೆಯಾಡಲಾರಂಭಿಸಿದೆ.
(ವರದಿ : ದರ್ಶನ್ ನಾಯ್ಕ)
First published:
May 7, 2020, 5:05 PM IST