news18-kannada Updated:April 3, 2020, 5:23 PM IST
ದಡದಲ್ಲಿರುವ ದೋಣಿಗಳ ಜೊತೆ ಮೀನುಗಾರರು
ಕಾರವಾರ(ಏ. 03): ದೇಶ ಲಾಕ್ ಡೌನ್ ಆಗಿ ಒಂದು ವಾರದ ಮೇಲಾಯಿತು. ಈ ಹೊತ್ತಲ್ಲಿ ಕೆಲವೊಂದು ಕ್ಷೇತ್ರದ ಮೇಲೆ ಅಗಾದ ಪರಿಣಾಮ ಬೀರಿದೆ. ದುಡಿದು ತಿನ್ನುವವರ ಸ್ಥಿತಿ ಅಂತೂ ನೆಲಕಚ್ಚಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದೊಟ್ಟಿಗೆ ಹೋರಾಡಿ ಮೀನು ಬೇಟೆ ಮಾಡುವ ಕಡಲ ಮಕ್ಕಳ ಸ್ಥಿತಿಯಂತೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರರ ಸ್ಥಿತಿ ಅಯೋಮಯವಾಗಿದೆ. ಲಾಕ್ ಡೌನ್ ಗೆ ಸ್ಪಂದಿಸಿದ ಮೀನುಗಾರರು ಇವತ್ತು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅದರಲ್ಲೂ ಸಾಂಪ್ರದಾಯಿಕ ಮೀನುಗಾರರ ಸ್ಥಿತಿ ಅಂತೂ ಹೇಳ ತೀರದಾಗಿದೆ. ಒಂದು ದಿನ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿದ್ರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮೀನುಗಾರರು ಇವತ್ತು ಲಾಕ್ ಡೌನ್ಗೆ ಸಿಕ್ಕಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ. ಕುಟುಂಬ ನಿರ್ವಹಣೆ ಮಾಡೋದು ತೀರಾ ಕಷ್ಟವಾಗಿದ್ದು ಮುಂದೆ ಆತ್ಮಹತ್ಯೆ ಒಂದೇ ಗತಿ ಎನ್ನುವ ಸ್ಥಿತಿಗೆ ಇಲ್ಲಿನ ಮೀನುಗಾರರು ಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಕಷ್ಟಗಳಿಗೆ ಸರಕಾರ ಕಣ್ತೆರೆಯಬೇಕಾಗಿದೆ. ಲಾಕ್ ಡೌನ್ ಗೆ ಸ್ಪಂದಿಸಿ ಮೀನುಗಾರಿಕೆ ಸ್ಥಗಿತ ಮಾಡಿರುವ ಮೀನುಗಾರರು ಒಂದು ವಾರದಿಂದ ತಮ್ಮ ಒಂದೂ ಹೊತ್ತಿನ ಊಟಕ್ಕೆ ತೀರಾ ಕಷ್ಟಪಡುತ್ತಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಉದ್ಯೋಗವನ್ನಾಗಿಸಿಕೊಂಡವರು ಇವತ್ತು ಕೆಲಸವಿಲ್ಲದೆ ಬಲೆ ಹೆಣೆಯುತ್ತಿದ್ದಾರೆ.
ಇನ್ನು, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮ ಸೇರಿ ವಿವಿಧ ಗ್ರಾಮೀಣ ಭಾಗದ ಮೀನುಗಾರರ ಸ್ಥಿತಿ ನೆಲಕಚ್ಚಿದೆ. ಸಾಂಪ್ರದಾಯಿಕ ಮೀನುಗಾರರು ಈಗಾಗಲೇ ಲಾಕ್ ಡೌನ್ಗೆ ಸ್ಪಂದಿಸಿ ಕಳೆದ ಎರಡು ವಾರದಿಂದ ಮೀನುಗಾರಿಕೆ ಮಾಡಿಲ್ಲ. ಹೀಗಾಗಿ ಇವರೆಲ್ಲ ಆರ್ಥಿಕವಾಗಿ ತೀರಾ ಸಮಸ್ಯೆ ಎದುರಿಸುತ್ತಿದ್ದು, ಸರಕಾರ ಮೀನುಗಾರರ ಬಗ್ಗೆ ಕಣ್ತೆರೆಯಬೇಕೆಂದು ಮನವಿ ಮಾಡುತ್ತಿದ್ದಾರೆ.
ವರದಿ :
ಕೊರೋನಾ ಸಂದಿಗ್ಧ ಪರಿಸ್ಥಿತಿ; ಸ್ಟೇಥಸ್ಕೋಪ್ ಹಿಡಿಯಲು ಸಿದ್ದರಾದ ರಾಜ್ಯದ ಇಬ್ಬರು ಶಾಸಕರು.!
ಒಟ್ಟಾರೆ ಲಾಕ್ ಡೌನ್ ಗೆ ದೇಶದ ಜನ ಸ್ಪಂದಿಸಿದ್ದಾರೆ. ಆದರೆ, ಅಷ್ಟೆ ಸಂಕಷ್ಟಕ್ಕೂ ಒಳಗಾಗಿದ್ದಾರೆ. ಬಡವರು, ಕೂಲಿ ಕಾರ್ಮಿಕರ ಸ್ಥಿತಿ ಕಂಗಾಲಾಗಿದೆ. ಮೀನುಗಾರರು ಕೂಡ ಕಂಗಾಲಾಗಿದ್ದು ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಸರಕಾರ ಇತ್ತ ಚಿತ್ತ ಹರಿಸಬೇಕಿದೆ.
(ವರದಿ : ದರ್ಶನ್ ನಾಯ್ಕ)
First published:
April 3, 2020, 5:23 PM IST