ವಿಜಯಪುರ(ಜು.14): ಇದು ರೈತನ ಮಗನೊಬ್ಬನ ಮಹತ್ವದ ಸಾಧನೆ ಕಥೆ. ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ 32ನೇ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಮಧ್ಯೆಯೇ ಈ ವಿದ್ಯಾರ್ಥಿ ಎರಡು ಜಿಲ್ಲೆಯ ಜನ ಹೆಮ್ಮೆ ಪಟ್ಟುಕೊಳ್ಳುವಂಥ ಸಾಧನೆ ಮಾಡಿದ್ದಾನೆ.
ಈತನ ಹೆಸರು ಮಾಳಪ್ಪ ನಿಂಗಪ್ಪ ಹೊಸಮನಿ. ವಿಜಯಪುರ ಜಿಲ್ಲೆಯ ಸಿಂದಗಿ ಜ್ಞಾನ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿ. ಎಲ್ಲರಂತೆ ಈತನೂ ಕೂಡ ಈ ಬಾರಿ ಕೊರೋನಾ ಭಯದ ಮಧ್ಯೆಯೇ ಪರೀಕ್ಷೆ ಬರೆದಿದ್ದ. ಉತ್ತಮ ಮಾರ್ಕ್ಸ್ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ. ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬರುವುದು ಗೊತ್ತಿತ್ತು. ಆದರೆ, ಈತನಿಗೆ ನೀರಿಕ್ಷೆಗಿಂತಲೂ ಉತ್ತಮ ಫಲಿತಾಂಶ ಬಂದಿರುವುದು ಗೊತ್ತಾಗಿದ್ದು ನ್ಯೂಸ್ 18 ಕನ್ನಡ ಕರೆ ಮಾಡಿದಾಗಲೇ.
ವಿಜಯಪುರ ಜಿಲ್ಲೆಯೂ ರಾಜ್ಯದಲ್ಲಿ ಶೇಕಡವಾರು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರ ಮಧ್ಯೆಯೇ ಈ ವಿದ್ಯಾರ್ಥಿ ಸಾಧನೆ ಬಗ್ಗೆ ಮಾಹಿತಿ ಸಿಕ್ಕಾಗ ನ್ಯೂಸ್ 18 ಕನ್ನಡ ಪ್ರತಿನಿಧಿಯೇ ಈತನಿಗೆ ಕರೆ ಮಾಡಿದ್ದರು. ಕಾಂಗ್ರ್ಯಾಟ್ಸ್, ನೀವು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಾಸಾಗಿದ್ದೀರಿ ಎಂದಾಗ ಥ್ಯಾಂಕ್ಸ್ ಎಂದ. ಜಿಲ್ಲೆಗ ಪ್ರಥಮ ಸ್ಥಾನ ಪಡೆದಿದ್ದೀರಿ. ಶೇ. 97.66 ರಷ್ಟು ಮಾರ್ಕ್ ಬಂದಿವೆ. ನಿನಗೆ 586 ಅಂಕಗಳು ಬಂದಿದ್ದು, ವಿಜಯಪುರ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದೀರಿ ಎಂದು ನಾವೇ ಹೇಳಿದೆವು.
ರಾಜ್ಯದಲ್ಲಿ ಕಲಾ ವಿಭಾಗದಲ್ಲಿ ವಿದ್ಯಾರ್ಥಿಯೊಬ್ಬರು 594 ಅಂಕ ಗಳಿಸುವ ಮೂಲಕ ಅತೀ ಹೆಚ್ಚು ಅಂಕ ಗಳಿಸಿದ್ದಾರೆ ಎಂದಾಗ ಹಾಗಿದ್ದರೆ ನಾನು ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದೇನೆ. ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಎಂದು ಸಂತಸ ಹಂಚಿಹೊಂಡ.
ಈ ವಿದ್ಯಾರ್ಥಿ 586 ಅಂಕ ಪಡೆದಿದ್ದು, ಸರಕಾರ ಅಧಿಕೃತ rank ಪ್ರಕಟಿಸದಿದ್ದರೂ ಈತ 9ನೇ ಸ್ಥಾನ ಗಳಿಸಿದಂತಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲಾವಾರು ಪಟ್ಟಿಯಲ್ಲಿ ವಿಜಯಪುರ ಕೊನೆಯ ಸ್ಥಾನದಲ್ಲಿದ್ದರೂ ಇಲ್ಲಿನ ವಿದ್ಯಾರ್ಥಿಯೊಬ್ಬ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆಯುವ ಮೂಲಕ ಜನ ಮನಮೆಚ್ಚುವ ಸಾಧನೆ ಮಾಡಿದ್ದಾರೆ.
ಈ ಹಳ್ಳಿ ಹೈದ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು, ಗಮನಾರ್ಹವಾಗಿದೆ. ಕನ್ನಡ-100, ಹಿಂದಿ-98, ಇತಿಹಾಸ-98, ಸಮಾಜ ಶಾಸ್ತ್ರ-97, ರಾಜ್ಯಶಾಸ್ತ್ರ-93, ಶಿಕ್ಷಣ ಶಾಸ್ತ್ರದಲ್ಲಿ ಶೇ. 100 ರಷ್ಟು ಅಂಕ ಪಡೆದಿದ್ದುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾನೆ. ಆದರೆ, ರಾಜ್ಯಶಾಸ್ತ್ರ ವಿಷಯದಲ್ಲಿ ಕೇವಲ 93 ಅಂಕಗಳು ಬಂದಿರುವುದು ಸ್ವಲ ಬೇಜಾರಾಗಿದೆ ಎಂದಿದ್ದಾನೆ.
ತಾನು ಉತ್ತಮ ಅಂಕ ಗಳಿಸಿದ ವಿಷಯ ತಿಳಿದ ತಕ್ಷಣ ತನ್ನ ಹೊಲಕ್ಕೆ ಹೋಗಿ ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ತನ್ನ ತಂದೆ, ತಾಯಿ ಮತ್ತು ಅಣ್ಣನನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಈತನ ಮುಗ್ದ ತಂದೆ-ತಾಯಿ ಮಗನಿಗೆ ಆಶೀರ್ವಾದ ಮಾಡಿ ಹರಸಿದ್ದಾರೆ. ಈ ವಿದ್ಯಾರ್ಥಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದವ. ಈತನ ತಂದೆ-ತಾಯಿಗೆ ನಾಲ್ಕೂ ಜನ ಗಂಡು ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದು, ಈತನೇ ಕೊನೆಯವನು.
ಕೃಷಿ ಮಾಡುತ್ತಲೇ ಎಸ್ಎಸ್ಎಲ್ಸಿ ಪರೀಕ್ಷೆ ಪಾಸು ಮಾಡಿದ ಈತ ನಂತರ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಾಡಿಕೆ ರೂಂ ಹಿಡಿದು ಜ್ಞಾನ ಭಾರತಿ ಪಿಯು ಕಾಲೇಜಿನಲ್ಲಿ ಓದಿ ಈಗ ಮಹತ್ವದ ಸಾಧನೆ ಮಾಡಿದ್ದಾನೆ. ಈ ಫಲಿತಾಂಶದಿಂದ ಫುಲ್ ಖುಷ್ ಆಗಿರುವ ಈ ವಿದ್ಯಾರ್ಥಿ ಮಾಳಪ್ಪ ನಿಂಗಪ್ಪ ಹೊಸಮನಿ, ಮುಂದೆ ಬಿಎ ಪದಿವಿ ಪಡೆದು ಕೆಎಎಸ್ ಮತ್ತು ಐಎಎಸ್ ಮಾಡುವ ಕನಸು ಹೊಂದಿದ್ದಾನೆ.
ಈತನ ಕನಸು ನನಸಾಗಲಿ ಎಂಬುದು ನ್ಯೂಸ್ 18 ಕನ್ನಡದ ಹಾರೈಕೆಯಾಗಿದೆ. ಈ ವಿದ್ಯಾರ್ಥಿ ತನ್ನ ಸಾಧನೆಯ ಮೂಲಕ ತನ್ನ ತವರು ಜಿಲ್ಲೆ ಕಲಬುರಗಿ ಮತ್ತು ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ ವಿಜಯಪುರ ಎರಡೂ ಜಿಲ್ಲೆಗಳ ಜನರಿಗೆ ಹೆಮ್ಮೆ ತಂದಿದ್ದಾನೆ. ದ್ವಿತೀಯ ಪಿಯುಸಿ ಪರಿಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ 29ನೇ ಸ್ಥಾನದಲ್ಲಿದ್ದರೆ, ವಿಜಯಪುರ ಜಿಲ್ಲೆ 32 ನೇ ಸ್ಥಾನದಲ್ಲಿದೆ. ಆ ಈ ವಿದ್ಯಾರ್ಥಿ ಮಾತ್ರ ತನ್ನ ವೈಯಕ್ತಿಕ ಸಾಧನೆಯ ಮೂಲಕ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯ ಮಾನ ಕಾಪಾಡಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಜ್ಞಾನ ಭಾರತಿ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಸಿ ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ. ಮಾಳಪ್ಪ ನಿಂಗಪ್ಪ ಹೊಸಮನಿ ಸಾಧನೆಯಿಂದಾಗಿ ಕಾಲೇಜಿನ ಕೀರ್ತಿಗೆ ಮತ್ತೊಂದು ಗರಿ ಬಂದಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ